ದಿನದ ಸುದ್ದಿ
ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಪತನ : ಸಿದ್ದರಾಮಯ್ಯ
ಸುದ್ದಿದಿನ,ಕಲಬುರ್ಗಿ : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡ ಅವರು ಇನ್ನು ಮುಂದೆ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿ ಎಂದಿದ್ದಾರೆ. ಹೀಗಾಗಿ ಅವರ ಜೊತೆ ಹೇಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯ? ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿಯೇ ಚುನಾವಣೆ ಎದುರಿಸಲಿದೆ. ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದೆ. ಅವರಿಗೆ ಅನುಕೂಲವಾಗಲೆಂದೆ ಚುನಾವಣೆಯನ್ನು 65 ದಿನ ಮುಂಚಿತವಾಗಿ ಘೋಷಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ, ಕಲಬುರ್ಗಿ ಜಿಲ್ಲಾ ಘಟಕ ಹಾಗೂ ಕುರುಬ ಗೊಂಡ ನೌಕರರ ಸಂಘದ ವತಿಯಿಂದ ಕಲಬುರ್ಗಿ ನಗರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಏನೇ ಮಾಡಿದರು ಉಪಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರದಿಂದ ದೂರವಿಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಪಕ್ಷದಲ್ಲಿ ಒಡಕಿದೆ ಎಂಬುದು ಮಾಧ್ಯಮ ಸೃಷ್ಟಿ. ಪಕ್ಷದಲ್ಲಿ ಯಾರನ್ನು ಯಾರು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ನಾನು ಮತ್ತು ಕೆ.ಹೆಚ್ ಮುನಿಯಪ್ಪ ಏಕವಚನದಲ್ಲಿ ಪರಸ್ಪರ ಮಾತನಾಡಿಕೊಂಡಿಲ್ಲ. ನಾವಿಬ್ಬರು ಗೆಳೆಯರು, ನಮ್ಮ ನಡುವೆ ಪರಸ್ಪರ ದ್ವೇಷಿಸುವಂತ ಯಾವ ಭಿನ್ನಾಭಿಪ್ರಾಯವಿಲ್ಲ.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರಷ್ಟೇ ಸಾಲದು. ಈಗ ಪ್ರತೀ ವರ್ಷ ಮೀಸಲಿಡುವ ಅನುದಾನವನ್ನು ರೂ.1500 ಕೋಟಿಯಿಂದ ರೂ.3000 ಕೋಟಿಗೆ ಏರಿಕೆ ಮಾಡಿದರೆ ಹೆಸರು ಬದಲಿಸಿದ್ದಕ್ಕೆ ಅರ್ಥ ಬರುತ್ತದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243