ದಿನದ ಸುದ್ದಿ

ಮುಕ್ತ ವ್ಯಾಪಾರ ಒಪ್ಪಂದ (FTA) | ಮೋದಿ ಸರ್ಕಾರದ ಈ ಪ್ರಯತ್ನ, ರೈತರ ಪಾಲಿನ ಮರಣ ಶಾಸನ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ,ಬೆಂಗಳೂರು : ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP)ದಡಿಯಲ್ಲಿ ನಡೆಲಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ, ನರೇಂದ್ರ ಮೋದಿ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣಶಾಸನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 10 ಕೋಟಿ ರೈತರ ಬದುಕು ಹೈನುಗಾರಿಕೆಯನ್ನು ಅವಲಂಬಿಸಿದೆ. ಕರ್ನಾಟಕದಲ್ಲಿಯೇ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ RCEP ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಯನ್ನು ಉತ್ತೇಜಿಸಲು ‘ಕ್ಷೀರಧಾರೆ’ ಮತ್ತು ಶಾಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ‘ಕ್ಷೀರಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಮೋದಿಯವರ ಸರ್ಕಾರ ರೈತರು ಮತ್ತು ಶಾಲಾ ಮಕ್ಕಳ ಬದುಕು ಕಸಿಯಲು ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರ RCEP ಮಾತುಕತೆಯಲ್ಲಿ ಭಾಗಿಯಾಗಿದ್ದು ನಿಜ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ರೈತರ ಹಿತ ಕಾಪಾಡಲು ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ಮೋದಿಯವರು ಅವರು ಇಡೀ ದೇಶವನ್ನು ಕತ್ತಲಲ್ಲಿಟ್ಟು ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದ್ದಾರೆ. ಎಲ್ಲಿದೆ ಪಾರದರ್ಶಕತೆ? ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರು FTA ವಿರೋಧಿಸಲು ಕರೆ ನೀಡಿರುವುದನ್ನು ಸ್ವಾಗತಿಸುತ್ತೇನೆ.ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version