ದಿನದ ಸುದ್ದಿ
ಎಂಟಿಬಿ ನಾಗರಾಜ್ ಪಕ್ಷ ಬಿಡಲು ಅಕ್ರಮ ದುಡ್ಡಿನ ಹೆದರಿಕೆಯಾ? : ಸಿದ್ದರಾಮಯ್ಯ
ಸುದ್ದಿದಿನ, ಹೊಸಕೋಟೆ : ಹೊಸಕೋಟೆ ವಿಧಾನಸಭಾ ಕ್ಷೇತ್ರದ ನಂದಗುಡಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸಕೋಟೆಯಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಇಲ್ಲಿನ ಯಾವ ಮತದಾರನೂ ಬಯಸಿರಲಿಲ್ಲ. ಎಂ.ಟಿ.ಬಿ ನಾಗರಾಜ್ ನಮ್ಮ ಪಕ್ಷಕ್ಕೆ ದ್ರೋಹಮಾಡಿ, ಬಿಜೆಪಿ ಸೇರಿದ್ದರ ಫಲ ಕ್ಷೇತ್ರ ಮತ್ತೊಂದು ಚುನಾವಣೆ ಎದುರಿಸುವಂತಾಗಿದೆ. ನಾಗರಾಜ್ ಅವರಿಗೆ ಹೊಸಕೋಟೆ ಕ್ಷೇತ್ರದಲ್ಲಿ 4 ಬಾರಿ ಪಕ್ಷ ಟಿಕೆಟ್ ನೀಡಿತ್ತು, ನಾನು ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಮಾಡಿದ್ದೆ, ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಇದರ ನಂತರವೂ ಪಕ್ಷ ಬಿಡಲು ಕಾರಣವೇನು? ಅಕ್ರಮ ದುಡ್ಡಿನ ಹೆದರಿಕೆಯಾ? ಈ ಬಗ್ಗೆ ಮತದಾರರು ಅವರನ್ನು ಪ್ರಶ್ನಿಸಬೇಕು ಎಂದರು.
ಪಕ್ಷ ಬಿಡುವ ಮೊದಲು ನಾಗರಾಜ್ ನಮ್ಮನೆಗೆ ಬಂದಿದ್ದರು, ಯಾಕೆ ಪಕ್ಷ ಬಿಡ್ತೀಯಪ್ಪ? ಎಂದು ಕೇಳಿದ್ದೆ. ಅದಕ್ಕೆ ಪಕ್ಷ ಬಿಟ್ಟು ನಿಮ್ಮ ಜೊತೆ ಬರುತ್ತೇನೆ ಎಂದು ಶಾಸಕ ಸುಧಾಕರ್‌ಗೆ ಮಾತುಕೊಟ್ಟಿದ್ದೀನಿ ಎಂದಿದ್ದರು. ಪಕ್ಷ ಬಿಡುವ ಮುನ್ನ ಜನರನ್ನು ಕೇಳಿದ್ದರೋ? ಇವರನ್ನು ಗೆಲ್ಲಿಸಿದ್ದು ಸುಧಾಕರ್ರೋ ಅಥವಾ ಹೊಸಕೋಟೆ ಜನತೆಯೋ? ಸ್ವಾರ್ಥಕ್ಕಾಗಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರಿಗೆ ಮತ ನೀಡಿದರೆ ಅಂಥವರು ಜನರ ಪರವಾಗಿ ಕೆಲಸ ಮಾಡುವರೇ? ರಾಜಕೀಯ ಪಕ್ಷಗಳು ಉಳಿದಿರುವುದು ಜನರಿಂದ, ಕಾರ್ಯಕರ್ತರಿಂದಲೇ ಹೊರತು ನಾಯಕರುಗಳಿಂದ ಅಲ್ಲ. ಸಾವಿರ ಪಕ್ಷಗಳನ್ನು ಉಳಿಸುವ, ಬೆಳೆಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ ಎಂಬುದನ್ನು ಮರೆಯಬಾರದು ಎಂದು ಮನವಿಮಾಡಿದರು.
ದೇಶದ ಸರ್ವೋಚ್ಛ ನ್ಯಾಯಾಲಯವೇ ನಾಗರಾಜ್ ಅವರನ್ನು ಅನರ್ಹ ಎಂದು ಹೇಳಿದೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ಕೇಳಲು ಬರುತ್ತಾರೆ. ಪಕ್ಷಾಂತರ ಮಾಡಿದವರೆಲ್ಲ ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಸುಪ್ರೀಂ ಕೋರ್ಟೇ ಹೇಳಿದ ಮೇಲೆ ಜನತೆ ಅವರಿಗೆ ಮತ ನೀಡಬೇಕೆ? ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಸ್ಥಾಪಿಸಿದ ಬಿ.ಎಸ್.ಎನ್.ಎಲ್, ಬಿ.ಇ.ಎಮ್.ಎಲ್, ಹೆಚ್.ಎಂ.ಟಿ, ಏರ್ ಇಂಡಿಯಾ ಸಂಸ್ಥೆಗಳನ್ನು ಒಂದೊಂದಾಗಿ ಬಾಗಿಲು ಹಾಕಿಸುತ್ತಿದ್ದಾರೆ. ಹೀಗೇ ಆದರೆ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳ ಬಾಗಿಲು ಹಾಕಿಸಿದ್ದೊಂದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಾಗಲಿದೆ ಎಂದು ವ್ಯಂಗ್ಯವಾಡಿದರು.
ನಮ್ಮದು ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ನಂಬಿರುವ ಪಕ್ಷ, ನಾಗರಾಜ್ ಸೇರಿರುವುದು ಸಮಾಜ ಒಡೆಯುವ ಕೋಮುವಾದಿ ಪಕ್ಷವನ್ನು. ಸಮಾಜ ಕಟ್ಟುವ ಕೈ ಬೆಂಬಲಿಸಬೇಕೋ ಅಥವಾ ಸಮಾಜ ಒಡೆಯುವ ಕೈ ಬೆಂಬಲಿಸಬೇಕೋ ಎಂದು ಯೋಚಿಸಿ ಮತ ನೀಡಿ. ಅನರ್ಹರನ್ನು ಸೋಲಿಸಿ, ಅರ್ಹರನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಮನವಿ ಮಾಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243