ದಿನದ ಸುದ್ದಿ

ಗೋಕಾಕ್ ಪಟ್ಟಣ ನೆರೆಯಿಂದ‌ ಕಂಗೆಟ್ಟಾಗ, ರಮೇಶ್ ಜಾರಕಿಹೊಳಿ ಹೋಟೆಲ್‌ನ ಎಸಿ ರೂಮ್‌ನಲ್ಲಿ ಮಸ್ತಿ ಮಾಡ್ತಿದ್ರು : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ,ಡೆಸ್ಕ್ : ಗೋಕಾಕ್‌ನಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ನಮ್ಮ‌ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಯಾಚಿಸಿದರು.

ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನಾದೇಶ ಪಡೆದು ಗೆದ್ದಿದ್ದ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಪಕ್ಷಕ್ಕೆ ತನ್ನನ್ನು ತಾನು ಮಾರಿಕೊಂಡಿದ್ದರ ಫಲ ಇಂದು ಗೋಕಾಕ್ ಕ್ಷೇತ್ರ ಉಪಚುನಾವಣೆ ಎದುರಿಸುವಂತಾಗಿದೆ. ಪಕ್ಷಾಂತರ ಮಾಡಿದ ಶಾಸಕರೆಲ್ಲ ರಾಜಕೀಯದಲ್ಲಿರಲು ಅನರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತ್ತೆ ಅಂಥವರಿಗೆ ಮತ ನೀಡುತ್ತೀರ? ಮಂತ್ರಿಯಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು, ರಮೇಶ್ ಜಾರಕಿಹೊಳಿ ಅವರಿಗೆ ಅವಕಾಶ ನೀಡಿದ್ದೆ. ಮಂತ್ರಿಯಾದವರು ಸಂಪುಟ ಸಭೆಗೆ ಹಾಜರಾಗಬೇಕಲ್ವೇ? ಆದರೆ ಈ ಆಸಾಮಿ ಹತ್ತು ಸಚಿವ ಸಂಪುಟ ಸಭೆಗಳಿಗೇ ಹೋಗಲಿಲ್ಲ. ಇಂಥವರು ಯಾವ ಪುರುಷಾರ್ಥಕ್ಕೆ ಮಂತ್ರಿಯಾಗಿರಬೇಕು? ಎಂದು ಕಿಡಿಕಾರಿದರು.

ಬಳ್ಳಾರಿ ರೀತಿಯಲ್ಲಿಯೇ ಗೋಕಾಕ್ ಅನ್ನು ಸಹ ‘ರಿಪಬ್ಲಿಕ್ ಆಫ್ ಗೋಕಾಕ್’ ಮಾಡಿದ್ದಾರೆ. ಇಲ್ಲಿ‌ ರಮೇಶ್ ಜಾರಕಿಹೊಳಿಯದ್ದೇ ದರ್ಬಾರ್ ಆಗಿದೆ. ಕ್ಷೇತ್ರದ ಜನರಿಗೆ ಸ್ವಾತಂತ್ರ್ಯ ಬೇಕು, ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರು ಸ್ಥಾಪನೆಯಾಗಬೇಕು ಎಂದಾದರೆ ನಮ್ಮ‌ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿಕೊಡಬೇಕು. ಪ್ರವಾಹ ಬಂದಾಗ ನಾನು ಗೋಕಾಕ್‌ಗೆ ಬಂದಿದ್ದೆ. ಹಳೆ ಗೋಕಾಕ್ ಪಟ್ಟಣ ಸಂಪೂರ್ಣ ಕೊಚ್ಚಿ ಹೋಗಿತ್ತು. ಜನ ಬೀದಿಗಳಲ್ಲಿ ವಾಸಿಸುತ್ತಿದ್ದರು. ಜನರ ಕಷ್ಟ ಕಾಲದಲ್ಲಿ ಜೊತೆಗೆ ನಿಂತು ಅವರಿಗೆ ಧೈರ್ಯ ತುಂಬಬೇಕಿದ್ದ ಶಾಸಕ ಮುಂಬೈ, ದೆಹಲಿ ಅಂತ ಊರೂರು ಅಲೆಯುತ್ತಿದ್ದರು. ಆಗ ಸತೀಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಜನರ ಜೊತೆ ಇದ್ದರು ಎಂದರು.

ಗೋಕಾಕ್ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು, ಜನ ಬದುಕಿಗಾಗಿ ನೆಲೆ ಹುಡುಕುತ್ತಿದ್ದರೆ ರಮೇಶ್ ಜಾರಕಿಹೊಳಿ ಮುಂಬೈನ ಪಂಚತಾರಾ ಹೋಟೆಲ್‌ನ ಎಸಿ ರೂಮ್‌ನಲ್ಲಿ ಮೋಜು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಇಂಥ ಶಾಸಕ ಮತ್ತೆ ನಮಗೆ ಬೇಕಾ ಎಂದು ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕು. ಸತೀಶ್ ಜಾರಕಿಹೊಳಿ ನನ್ನ ಧೀರ್ಘ ಕಾಲದ ಗೆಳೆಯ, ನಿಷ್ಠಾವಂತ ನಾಯಕ ಕೂಡ. ಇನ್ನು ಲಖನ್ ಜಾರಕಿಹೊಳಿ ಯುವ ಉತ್ಸಾಹಿ ರಾಜಕಾರಣಿ. ಜನಸೇವೆ ಮಾಡುವ ಹಂಬಲ, ಕಾಳಜಿ ಅವರಲ್ಲಿದೆ. ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಯಲ್ಲಿ ಲಖನ್‌ಗೆ ಮತ ನೀಡಿ ಗೆಲ್ಲಿಸಿಕೊಡಿ, ಅವರೊಂದಿಗೆ ನಾವಿರುತ್ತೇವೆ, ಕ್ಷೇತ್ರದ ಅಭಿವೃದ್ಧಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಮತದಾರರಲ್ಲಿ ಮನವಿಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version