ರಾಜಕೀಯ

ಅನರ್ಹರನ್ನು ತಿರಸ್ಕರಿಸಿ, ತಕ್ಕ ಪಾಠ ಕಲಿಸಿ : ಮತದಾರರಿಗೆ ಸಿದ್ದರಾಮಯ್ಯ ಮನವಿ

Published

on

ಸುದ್ದಿದಿನ,ಚಿಕ್ಕಬಳ್ಳಾಪುರ : ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ ಮತದಾರರಾಗಲಿ,ನಮ್ಮ ಪಕ್ಷವಾಗಲಿ ಬಯಸಿ ಬಂದದ್ದಲ್ಲ. ಇದು ಭಾರತೀಯ ಜನತಾ ಪಕ್ಷ ಮತ್ತು ಹದಿನೈದು ಶಾಸಕರು ತಮ್ಮ ಅಧಿಕಾರದ ಲಾಲಸೆಗಾಗಿ ಮತದಾರರ ಮೇಲೆ ಹೇರಿರುವ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಕಿಡಿಕಾರಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಶಾಸಕರಾದವರು ಪ್ರಜೆಗಳ ಸೇವಕರು. ಅವರು ತಾನು ಪ್ರತಿನಿಧಿಸುವ ಜನರ ಏಳಿಗೆಗೆ ಶ್ರಮಿಸಬೇಕು, ಅವರ ಸಮಸ್ಯೆಗಳಿಗೆ, ಕಷ್ಟ-ಕಣ್ಣೀರುಗಳಿಗೆ ಸ್ಪಂದಿಸಬೇಕು. ದುಡ್ಡಿಗಾಗಿ , ಅಧಿಕಾರಕ್ಕಾಗಿ ತಮ್ಮನ್ನು ಮಾರಿಕೊಳ್ಳಬಾರದು. ಪ್ರಜಾಪ್ರಭುತ್ವದ ಈ ಮೂಲ ಆಶಯವನ್ನು ಧಿಕ್ಕರಿಸಿ ಜನದ್ರೋಹ ಎಸಗಿದವರನ್ನು ತಿರಸ್ಕರಿಸಿ ತಕ್ಕ ಪಾಠ ಕಲಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಮನವಿ ಮಾಡಿದರು.

ಪಕ್ಷಾಂತರಿಗಳ ವಿರುದ್ಧ ಇದೀಗ ದೇಶ ಸಿಡಿದೆದ್ದಿದೆ. ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಲಿನ ಮತದಾರರು ಬಿಜೆಪಿಯ ಪಕ್ಷಾಂತರಿಗಳನ್ನು ತಿರಸ್ಕರಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಅಂತಹದ್ದೇ ಒಂದು ಸಂದೇಶದ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವ ಅವಕಾಶ ಹದಿನೈದು ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಒದಗಿ ಬಂದಿದೆ ಎಂದರು.

ಡಿಸೆಂಬರ್ ಐದರಂದು ಮತಗಟ್ಟೆಗೆ ಹೋಗುವಾಗ ಬಿಜೆಪಿಯ ಅಭ್ಯರ್ಥಿಗಳಾದ ಅನರ್ಹ ಶಾಸಕರು ಮತದಾರರಿಗೆ ಮಾಡಿರುವ ದ್ರೋಹವನ್ನಷ್ಟೇ ನೆನಪಲ್ಲಿಟ್ಟುಕೊಂಡು ಮತಚಲಾಯಿಸಿ. ದುಡ್ಡು, ಜಾತಿ,ಧರ್ಮ.. ಯಾವ ಆಮಿಷ-ಪ್ರಭಾವಕ್ಕೊಳಗಾಗಬೇಡಿ.ಈ ಬಾರಿ ಪಕ್ಷಾಂತರಿಗಳಿಗೆ ಇಂತಹದ್ದೊಂದು ಪಾಠ ಕಲಿಸಿದರೆ ಮುಂದೆ ಆಯ್ಕೆಯಾಗುವವರು ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದರು.

ಈ ಚುನಾವಣೆಯ ಫಲಿತಾಂಶ ಪಕ್ಷಾಂತರಿಗಳಿಗೊಂದು ಪಾಠವಾಗಲಿ, ದೇಶಕ್ಕೆ ಮಾದರಿಯಾಗಲಿ, ದೇಶದ ಜನ ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತಾಗಲಿ ಎಂದರು.

ಸುದ್ದಿದಿನ‌.ಕಾಂ|ವಾಟ್ಸಾಪ್|9980346243

Trending

Exit mobile version