ರಾಜಕೀಯ
ದೇಶ ಪ್ರೇಮದ ಹೆಸರಿನಲ್ಲಿ ಅಮಾಯಕರ ಹತ್ಯೆಗೆ ಮೋದಿ ಸರ್ಕಾರದ ಬೆಂಬಲ : ಸಿದ್ದರಾಮಯ್ಯ ಆಕ್ರೋಶ
ಸುದ್ದಿದಿನ, ಚಿಕ್ಕಮಗಳೂರು : ರಾಜ್ಯಪಾಲರ ಭಾಷಣ ನಾಡಿನ ಮತ್ತು ಜನತೆಯ ಹಿತಾಸಕ್ತಿಯ ಪರವಾಗಿ ಇದ್ದರೆ ನಾವು ಪ್ರತಿಭಟಿಸುವಂತಹ ಪ್ರಮೇಯವೇ ಬರುವುದಿಲ್ಲ. ಭಾಷಣದಲ್ಲಿ ಆಕ್ಷೇಪಾರ್ಹ ವಿಚಾರಗಳು ಇದ್ದರೆ ಖಂಡಿತಾ ವಿರೋಧಿಸುತ್ತೇವೆ, ಆಗ ನಮ್ಮ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಟಿಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಚಿಕ್ಕಮಗಳೂರುನಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ ಅವರು, ಕಳೆದ ಬಾರಿ ಕೇಂದ್ರದ ಬಜೆಟ್ ಗಾತ್ರ ರೂ.27 ಲಕ್ಷ ಕೋಟಿಯಾಗಿತ್ತು, ಅದರಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಖರ್ಚಾಗಿದೆ ಎಂಬುದು ನಾಳೆ ತಿಳಿಯುತ್ತೆ. 6 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿಯವರು ನೀಡಿದ ಭರವಸೆ ಎಲ್ಲವೂ ಈಡೇರಿದ್ದರೆ ಈಗಾಗಲೇ ಸ್ವರ್ಗ ಸೃಷ್ಟಿಯಾಗಿರಬೇಕಿತ್ತು.
ಬಿಜೆಪಿಯವರು ಸ್ವರ್ಗ ಸೃಷ್ಟಿ ಮಾಡ್ತೀವಿ ಅಂತ ಹೇಳಿ ದೇಶವನ್ನು ನರಕ ಮಾಡಿದ್ದಾರೆ. ದೇಶದ ನಿರುದ್ಯೋಗ ಸಮಸ್ಯೆ, ಹಸಿವು, ಜಿಡಿಪಿ ಕುಸಿತ, ಭ್ರಷ್ಟಾಚಾರದ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಉತ್ಪಾದನೆ ಕುಸಿತ, ಇಳಿಕೆಯಾಗುತ್ತಿರುವ ರಫ್ತು ಪ್ರಮಾಣದ ಬಗ್ಗೆ ಮಾತನಾಡಲಿ. ದೇಶದ ಈ ದುಸ್ಥಿತಿಗೆ ಕಾರಣ ಯಾರು? ಎಂದು ಕಿಡಿ ವ್ಯಕ್ತಪಡಿಸಿದರು.
‘ಈಶ್ವರ್ ಅಲ್ಲಾ ತೇರೆ ನಾಮ್
ಸಬ್‌ಕೋ ಸನ್ಮತಿ ದೇ ಭಗವಾನ್’ ಎಂದು ಸೌಹಾರ್ದತೆ ಸಾರಿದ ಕಾರಣಕ್ಕಾಗಿ ಮಹಾತ್ಮ ಗಾಂಧಿಯವರನ್ನು ಸಂಘಪರಿವಾರ ಗುಂಡಿಟ್ಟು ಕೊಂದಿತ್ತು. ಈಗ ಅದೇ ಸಂಘಟನೆಗೆ ಸೇರಿದ ಗೂಂಡಾ ಒಬ್ಬ ಜಾಮಿಯಾ ವಿಶ್ವವಿದ್ಯಾಲಯದ ಮೌನ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ.
ಸೌಹಾರ್ದತೆ ಎಂದರೆ ಬಿಜೆಪಿಗೆ ಏಕಿಷ್ಟು ಭಯ? ಮಹಾತ್ಮ ಗಾಂಧಿಯವರ ಸಮಾಧಿಸ್ಥಳ ರಾಜ್‌ಘಾಟ್‌ಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕಣ್ಣೆದುರೇ ಗೂಂಡಾ ಒಬ್ಬ ಗುಂಡು ಹಾರಿಸಿದ್ರೂ ಪೊಲೀಸರು ಮೌನವಾಗಿದ್ರು. ಗೂಂಡಾವೊಬ್ಬನಿಗೆ ಇಷ್ಟು ಧೈರ್ಯ ಬರಲು ಹೇಗೆ ಸಾಧ್ಯ? ಇದಕ್ಕೆ ಯಾರ ಬೆಂಬಲವಿದೆ? ಎಂಬುದರ ಬಗ್ಗೆ ಮೊದಲು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ದೇಶ ವಿನಾಶದತ್ತ ಸಾಗುತ್ತಿದೆ. ಸಮಾಜಘಾತುಕರು, ಗೂಂಡಾಗಳೆಲ್ಲ ದೇಶಪ್ರೇಮದ ಸೋಗಿನಲ್ಲಿ ಅಮಾಯಕರ ಹತ್ಯೆಗೆ ನಿಂತಿದ್ದಾರೆ. ಇಂಥ ಹತ್ಯೆಗಳಿಗೆ ಸರ್ಕಾರವೂ ಬೆಂಬಲಿಸುತ್ತಿರುವುದು ದೇಶದ ಕರಾಳ ದಿನಗಳನ್ನು ಖಾತ್ರಿಪಡಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ? ಎಂದು ಬಿಜೆಪಿ ಸರ್ಕಾವನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243