ದಿನದ ಸುದ್ದಿ
ಜನತೆಯನ್ನು ಕಷ್ಟದ ಕಡಲಲ್ಲಿ ತೇಲಲು ಬಿಟ್ಟ ಮೋದಿ ; ಹುಸಿಯಾದ ಭರವಸೆ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಬೆಂಗಳೂರು : ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಪರಿಹಾರ ಒದಗಿಸುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಇತ್ತ ರಾಜ್ಯ ಸರ್ಕಾರವೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವುದರಿಂದ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಕೆಳ ಮಟ್ಟಕ್ಕೆ ಹೋಗಿದೆ. ಇಂಥಹ ಸ್ಥಿತಿಯನ್ನು ಕಳೆದ ಮೂವತ್ತು ವರ್ಷಗಳಲ್ಲಿ ದೇಶ ಎಂದೂ ಕಂಡಿರಲಿಲ್ಲ. ದೇಶದ ಆರ್ಥಿಕ ಬೆಳವಣಿಗೆ 2.5 ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಜನತೆ ಪ್ರಧಾನಿಯವರ ಕಡೆಗೆ ನಿರೀಕ್ಷೆಯ ನೋಟ ನೆಟ್ಟಿದ್ದರು. ಆದರೆ ಜನರ ಭರವಸೆ ಹುಸಿಯಾಗಿದೆ. ಯಾವುದೇ ನೆರವನ್ನು ಘೋಷಿಸದ ಮೋದಿಯವರು ಏಳು ಸೂತ್ರಗಳನ್ನು ಹೇಳಿ ಕೈ ತೊಳೆದುಕೊಂಡು, ಜನರನ್ನು ಕಷ್ಟದ ಕಡಲಲ್ಲಿಯೇ ತೇಲಲು ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಲಾಕ್‌ಡೌನ್ ನಿಂದ ಕೈಗಾರಿಕೆಗಳು ಮುಚ್ಚಿವೆ. ಕೃಷಿ ಕ್ಷೇತ್ರ ಬಡವಾಗಿದೆ. ಕಾರ್ಮಿಕರು ಕಂಗಾಲಾಗಿದ್ದಾರೆ. ಹಳ್ಳಿ ಜನರ ತೊಂದರೆ ಹೇಳತೀರದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಯವರು ಆರ್ಥಿಕವಾಗಿ ಚೈತನ್ಯ ತುಂಬುವ, ಕೃಷಿ ಕ್ಷೇತ್ರ ಮೇಲೆತ್ತುವ ಕೆಲಸ ಮಾಡಬೇಕಿತ್ತು. ಬಡವರು, ಕಾರ್ಮಿಕರಿಗೆ ಜೀವನದ ಭದ್ರತೆ ಒದಗಿಸಬೇಕಿತ್ತು. ಕೋಟ್ಯಂತರ ಮಂದಿ ವಲಸೆ ಕಾರ್ಮಿಕರು ಇಂದಿಗೂ ಬೀದಿಯಲ್ಲಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಇದುವರೆಗೂ ಅವರನ್ನು ತಲುಪಿಲ್ಲ. ಇಂತಹ ಸಂದರ್ಭದಲ್ಲಿ ಜನರು ಪ್ರಧಾನಿಯವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮೋದಿಯವರು ದೇಶವನ್ನು ಉದ್ದೇಶಿಸಿ ಕೇವಲ ರಾಜಕೀಯ ಭಾಷಣ ಮಾಡಿದ್ದಾರೆ ಅಷ್ಟೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ನೊಂದವರ ನೆರವಿಗೆ ನಿಲ್ಲುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ನಿತ್ಯವೂ ನೂರಾರು ಮಂದಿ ದೂರವಾಣಿ ಕರೆ ಮಾಡಿ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಅಸಂಘಟಿತ ವಲಯದ ಕಾರ್ಮಿಕರು, ರೈತರ ತೊಂದರೆ ನಿವಾರಣೆಯಾಗುತ್ತಿಲ್ಲ. ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗಿಲ್ಲ. ಕೃಷಿ ಉತ್ಪನ್ನಗಳ ಸಾಗಣೆಗೂ ಸರ್ಕಾರ ಸೂಕ್ತ ಏರ್ಪಾಡು ಮಾಡುತ್ತಿಲ್ಲ. ಮಾವು ಹಾಗೂ ಕಲ್ಲಂಗಡಿ ಮಾರುಕಟ್ಟೆಗೆ ಬರಬೇಕಾದ ಕಾಲವಿದು. ಆದರೆ ಅವು ರೈತರ ಜಮೀನುಗಳಲ್ಲಿಯೇ ಕೊಳೆಯುತ್ತಿದೆ. ಅದನ್ನು ನಂಬಿದವರ ಬದುಕು ಮೂರಾಬಟ್ಟೆಯಾಗಿದೆ. ಉಚಿತವಾಗಿ ಕೊಡುತ್ತೇವೆ ಎಂದರೂ ಯಾರೂ ಖರೀದಿಸಲು ಮುಂದೆ ಬರುತ್ತಿಲ್ಲ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಖಾಲಿಯಾಗಿರುವ ತನ್ನ ಖಜಾನೆ ಭರ್ತಿ ಮಾಡಲು ಬಿಡಿಎ ಕಾರ್ನರ್ ಸೈಟ್ ಗಳ ಹರಾಜಿಗೆ ಮುಂದಾಗಿದೆ. ಇದರ ಜೊತೆಗೆ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲೂ ಹಣ ಇದೆ. ಅದು ವೈದ್ಯರು ಮತ್ತು ಆಸ್ಪತ್ರೆಗಳಿಂದ ಬಂದಿರುವ ಹಣ. ಅದನ್ನೂ ಸರ್ಕಾರ ಬಳಕೆ ಮಾಡಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ. ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರಿಲ್ಲ. ಅಧಿಕಾರಿಗಳೇ ಅಲ್ಲಿ ದರ್ಬಾರು ನಡೆಸುತ್ತಿದ್ದಾರೆ. ಅಧ್ಯಕ್ಷರಿಗೆ ನಿಗದಿ ಮಾಡಿರುವ ಕಾರುಗಳನ್ನು ಕಚೇರಿ, ಮನೆ ಕೆಲಸಗಳಿಗೆ ಬಳಸುತ್ತಿದ್ದಾರೆ ಎಂದಿದ್ದಾರೆ.
ಆ ಕಾರುಗಳನ್ನು ವಾಪಸ್ ಪಡೆದುಕೊಂಡು ಅನಗತ್ಯ ವೆಚ್ಚಕ್ಕೆ ಕಡಿಹಾಣ ಹಾಕಬೇಕು. ಇದು ಒಂದು ಉದಾಹರಣೆ ಅಷ್ಟೆ. ಇಂತಹ ಅನೇಕ ಅನಗತ್ಯ ವೆಚ್ಚಗಳಿವೆ. ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ, ಮೋಟಾರು ವಾಹನ ತೆರಿಗೆ ಸಂಗ್ರಹವಾಗುತ್ತಿಲ್ಲ. ವಿಶೇಷ ಪ್ಯಾಕೇಜ್ ಘೋಷಣೆ ಮಾಡದ ಹೊರತು ಆರ್ಥಿಕವಾಗಿ ಚೈತನ್ಯ ತುಂಬಲಾಗದು. ಹಣಕಾಸು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸದಿರುವುದು, ಭ್ರಷ್ಟಾಚಾರ ನಿಯಂತ್ರಣ ಮಾಡದಿರುವುದು ಕೂಡ ಆರ್ಥಿಕ ದಿವಾಳಿಗೆ ಪ್ರಮುಖ ಕಾರಣ ಎಂದು ಕಿಡಿಕಾರಿದ್ದಾರೆ.
ನಾವು ಲಾಕ್‌ಡೌನ್ ವಿಸ್ತರಣೆಗೆ ವಿರೋಧ ಮಾಡುವುದಿಲ್ಲ. ಕೊರೊನಾ ಸೋಂಕು ಭಯಾನಕವಾಗಿದೆ. ಅದರ ಪ್ರಮಾಣ ಇನ್ನೂ ಕಡಿಮೆಯಾಗುತ್ತಿಲ್ಲ. ಆದ್ದರಿಂದ ವಿಸ್ತರಣೆಗೆ ನಮ್ಮ ಸಹಮತವೂ ಇದೆ. ಜನರೂ ಬೆಂಬಲ ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಪಕ್ಷ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243