ದಿನದ ಸುದ್ದಿ

ಸರ್ಕಾರ ವಿತರಿಸುತ್ತಿರುವ ಧಾನ್ಯದ ಕಿಟ್‍ಗಳು ಎಲ್ಲರನ್ನೂ ತಲುಪುತ್ತಿಲ್ಲ ; ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ : ಸಿದ್ದರಾಮಯ್ಯ ಒತ್ತಾಯ

Published

on

ಸುದ್ದಿದಿನ, ಬೆಂಗಳೂರು : ಲಾಕ್‍ಡೌನ್ ಜಾರಿಯಾಗಿ ತಿಂಗಳು ಕಳೆದಿದೆ.ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಭಿಸಿರುವ ಸಮುದಾಯಗಳ ಬದುಕು ಚಿಂತಾಜಕನ ಸ್ಥಿತಿಗೆ ತಲುಪಿದೆ. ಆರ್ಥಿಕವಾಗಿ ನೆಲಕಚ್ಚಿರುವ ಶ್ರಮಿಕ ವರ್ಗದವರಿಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸದೇ ಇದ್ದರೆ ಲಾಕ್‍ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಮಂಗಳವಾರ ಬೆಂಗಳೂರಿನಲ್ಲಿ ವಿವಿಧ ಸಮುದಾಯದ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಭಿಸಿದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅವರಿಗೆ ಉಚಿತವಾಗಿ ಊಟ, ತಿಂಡಿ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಇದಕ್ಕಾಗಿ ರೂ.18 ರಿಂದ 20 ಕೋಟಿ ವೆಚ್ಚವಾಗಬಹುದು. ಅದಕ್ಕೂ ಮೀನಮೇಷ ಎಣಿಸುವುದು ಸರಿಯಲ್ಲ.

ಸರ್ಕಾರ ಈಗ ವಿತರಣೆ ಮಾಡುತ್ತಿರುವ ದವಸ ಧಾನ್ಯದ ಕಿಟ್‍ಗಳು ಎಲ್ಲರನ್ನೂ ತಲುಪುತ್ತಿಲ್ಲ. ಅದಕ್ಕಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ನಾವು ಒತ್ತಾಯಿಸುತ್ತಿರುವುದು. ಲಾಕ್‍ಡೌನ್ ಅವಧಿಯಲ್ಲಿ ನಾವು ವಿನಾಕಾರಣ ರಾಜಕೀಯ ಮಾಡುವುದಿಲ್ಲ. ಹೀಗಾಗಿ ಲಾಕ್‍ಡೌನ್ ಮುಗಿದ ಕೂಡಲೇ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ವಿವಿಧ ಸಮುದಾಯಗಳ ಸಂಘಟನೆಯ ಮುಖಂಡರು ಹೇಳಿದ್ದಾರೆ. ಲಾಕ್‍ಡೌನ್ ಮುಗಿದ ಬಳಿಕ ಎದುರಾಗಬಹುದಾದ ಸನ್ನಿವೇಶ ಕುರಿತು ಎಲ್ಲರೂ ಆತಂಕ ವ್ಯಕ್ತಪಡಿಸಿದ್ದಾರೆ ಹಾಗೂ ಎಲ್ಲರೂ ಲಿಖಿತ ರೂಪದಲ್ಲಿ ಸಮಸ್ಯೆಗಳನ್ನು ವಿವರಿಸಿದ್ದಾರೆ. ಸಲೂನ್‍ಗಳು ರಾಜ್ಯಾದ್ಯಂತ ಬಂದ್ ಆಗಿವೆ. ಸವಿತಾ ಸಮಾಜದವರು ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿ ಬೀದಿಪಾಲಾಗುವ ಹಂತ ತಲುಪಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಇವರೆಲ್ಲರು ನಿತ್ಯದ ದುಡಿಮೆಯಿಂದ ಬಂದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು ಎಂದರು.

ಅಸಂಘಟಿತ ಕಾರ್ಮಿಕರು 20 ಲಕ್ಷದಷ್ಟಿದ್ದಾರೆ. ಈ ಪೈಕಿ 12 ಲಕ್ಷ ಮಂದಿಗೆ ಮಾತ್ರ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ರೂ.2000 ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್ ನವೀಕರಣವಾಗಿಲ್ಲ ಎಂಬ ನೆಪ ಹೇಳಿ ಸಹಾಯಧನ ನೀಡುತ್ತಿಲ್ಲ. ಇದು ಎಷ್ಟು ಸರಿ? ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಅಗತ್ಯ ನೆರವು ಸಿಕ್ಕಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕೆಲವು ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೇಟ್‍ಗಳನ್ನು ನೀಡಲಾಗುತ್ತಿದೆ. ಬೆಂಗಳೂರಿನ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ರಸ್ತೆ ತೆರಿಗೆ, ಮಾಸಿಕ ಕಂತು, ವಿಮೆ ಕಂತು, ವಿಮಾಣ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಕಟ್ಟಲು ಆಗುತ್ತಿಲ್ಲ, ಅದನ್ನು ಮನ್ನಾ ಮಾಡಬೇಕು ಎಂದು ಟ್ಯಾಕ್ಸಿ ಚಾಲಕರು, ಮಾಲೀಕರು ಇಂದಿನ ಸಭೆಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಒಟ್ಟು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ ರೇವಣ್ಣ, ಎಂ.ಸಿ. ವೇಣುಗೋಪಾಲ್ ಹಾಗೂ ಎಂ.ಡಿ. ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version