ದಿನದ ಸುದ್ದಿ
ಅಪ್ರಾಮಾಣಿಕ ಯಡಿಯೂರಪ್ಪ, ಈಶ್ವರಪ್ಪ, ಶ್ರೀರಾಮುಲು ಮೇಲೂ ಐಟಿ ದಾಳಿ ಮಾಡಲಿ : ಸಿದ್ದರಾಮಯ್ಯ ಕಿಡಿ
ಸುದ್ದಿದಿನ,ಬೆಂಗಳೂರು : ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಐಟಿ ದಾಳಿಗಳಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಮಾಡಿದವರ ಮೇಲೆ, ಭ್ರಷ್ಟಾಚಾರಿಗಳ ಮೇಲೆ ಐಟಿ ದಾಳಿ ನಡೆಸಲಿ. ಅದನ್ನು ಬಿಟ್ಟು ಚುನಾವಣಾ ಸಮಯದಲ್ಲಿ ವಿರೋಧ ಪಕ್ಷಗಳಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದರುವುದು ಮಾತ್ರ ಖಂಡನೀಯ ಎಂದರು
ಶಾಸಕರ ಖರೀದಿಗೆ 25-30 ಕೋಟಿ ರೂ. ಹಣ ಕೊಡಲು ತಯಾರಿದ್ದ ಯಡಿಯೂರಪ್ಪ, ಮನೆಯಲ್ಲಿ ಹಣ ಎಣಿಸುವ ಯಂತ್ರ ಇಟ್ಟಿದ್ದ ಈಶ್ವರಪ್ಪ ಇವರೆಲ್ಲ ಪ್ರಾಮಾಣಿಕರೇ? ಇವರೆಲ್ಲರ ಮೇಲೆ ಯಾಕೆ ಐಟಿ ಇಲಾಖೆ ದಾಳಿ ಮಾಡುತ್ತಿಲ್ಲ? ಐಟಿ ಇಲಾಖೆ ಬಳಕೆಯಾಗುತ್ತಿರುವುದು ಭ್ರಷ್ಟರ ನಿಗ್ರಹಕ್ಕೋ ಅಥವಾ ಬಿಜಪಿ ದವರ ರಾಜಕೀಯ ಎದುರಾಳಿಗಳ ನಿಗ್ರಹಕ್ಕೋ? ಎಂದು ಕೆಂಡಾಮಂಡಲವಾದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾದಾಮಿಯಲ್ಲಿ ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಿ.ಎಂ ಇಬ್ರಾಹಿಂ, ಚನ್ನಾರೆಡ್ಡಿ, ಆರ್.ಬಿ ತಿಮ್ಮಾಪುರ್ ಹಾಗೂ ಎಸ್.ಆರ್ ಪಾಟೀಲ್ ಅವರ ರೂಂಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಹಾಗಾದರೆ ಬಾದಾಮಿಯಲ್ಲಿ ಶ್ರೀರಾಮುಲು ಪರವಾಗಿ ಕೆಲಸ ಮಾಡುತ್ತಿದ್ದವರು ಐಟಿ ಇಲಾಖೆಯ ಕಣ್ಣಿಗೆ ಕಾಣಲಿಲ್ಲವೇ? ಎಂದರು.
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ನಾನು ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಅಭ್ಯರ್ಥಿಗಳ ಗೆಲುವು ನಮಗೆ ಮುಖ್ಯ. ರಾಜ್ಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ರಾಹುಲ್ ಗಾಂಧಿಯವರ ಕೈ ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401