ದಿನದ ಸುದ್ದಿ

ಜಿಡಿಪಿ ಕುಸಿದಿದೆ, ನಿರುದ್ಯೋಗ 45 ವರ್ಷಗಳ ದಾಖಲೆ ಮುರಿದಿದೆ, ಇದು ಯಾವ ಟ್ರಿಲಿಯನ್ ಡಾಲರ್ ಆರ್ಥಿಕತೆ? : ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ

Published

on

ಸುದ್ದಿದಿನ, ಬೆಂಗಳೂರು : 15ನೇ ಹಣಕಾಸು ಆಯೋಗದ ವರದಿಯ ಪ್ರಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ರೂ.8,887 ಕೋಟಿ ಮತ್ತು ಜಿ.ಎಸ್.ಟಿ ಪರಿಹಾರ ರೂ.3,000 ಕೋಟಿ ಕಡಿತವಾಗಿದೆ. ಒಟ್ಟು ರೂ.11,887 ಕೋಟಿ ಕೇಂದ್ರದಿಂದ ನಮಗೆ ಬರಬೇಕಾದ ಪಾಲು ಕಡಿಮೆಯಾದ ಮೇಲೆ ಬಜೆಟ್ ಗಾತ್ರವೂ ಕಡಿಮೆಯಾಗಬೇಕಿತ್ತಲ್ಲವೇ? ಏಕೆ ಕಡಿಮೆಯಾಗಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಸಂಬಳ, ಪಿಂಚಣಿ, ಬಡ್ಡಿ ಪಾವತಿ ಒಳಗೊಂಡ ರಾಜ್ಯದ ಕಮಿಟೆಡ್ ವೆಚ್ಚ ಈಗಾಗಲೇ 88% ಇದೆ, ಈ ಸಾಲಿನಲ್ಲಿ ರಾಜ್ಯದ ತೆರಿಗೆ ಸಂಗ್ರಹದಲ್ಲೂ ರೂ.5000 ಕೋಟಿ ಕೊರತೆಯಾಗುವ ನಿರೀಕ್ಷೆಯಿದೆ. ಹೀಗಾದರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಎಲ್ಲಿದೆ? ಇದೇ ಕಾರಣಕ್ಕೆ ನಾನು ಈ ಸರ್ಕಾರಕ್ಕೆ ದಾರಿದ್ರ್ಯ ಹಿಡಿದಿದೆ ಅಂದದ್ದು. ರಾಜ್ಯದ ತೆರಿಗೆ ಪಾಲು ಈ ವರ್ಷ ರೂ.39,806 ಕೋಟಿ ಬರಬೇಕಿತ್ತು, ಪರಿಷ್ಕರಣೆಯ ನಂತರ ರೂ.30,919 ಕೋಟಿಗೆ ಇಳಿದಿದೆ. ಮುಂದಿನ ವರ್ಷ ರೂ.28,591 ಕೋಟಿ, 2021-22 ರಲ್ಲಿ ರೂ.31,164 ಕೋಟಿ, 2022-23 ರಲ್ಲಿ ರೂ.33,964 ಕೋಟಿ ಹಾಗೂ 2023-24 ರಲ್ಲಿ ರೂ.37,026 ಕೋಟಿ ಆಗಲಿದೆ. ಅಂದರೆ ನಮ್ಮ‌ ಈಗಿನ ಪಾಲಿಗಿಂತ ಕಡಿಮೆ ಎಂದರು.

14ನೇ ಹಣಕಾಸು ಆಯೋಗದ ವರದಿ ಪ್ರಕಾರ 4.7% ಇದ್ದ ರಾಜ್ಯದ ತೆರಿಗೆ ಪಾಲು, 15ನೇ ಹಣಕಾಸು ಆಯೋಗದ ವರದಿಯಂತೆ 3.64% ಗೆ ಇಳಿಕೆಯಾಗಿದೆ. ಆದರೆ ಬಿಹಾರ ರಾಜ್ಯ 10%, ಉತ್ತರ ಪ್ರದೇಶ 17% ರಂತೆ ನಮಗಿಂತ ಹೆಚ್ಚು ತೆರಿಗೆ ಪಾಲು ಪಡೆಯಲಿವೆ. ಸಮರ್ಪಕವಾಗಿ ಆರ್ಥಿಕ ನಿರ್ವಹಣೆ ಮಾಡುವ ನಮ್ಮ ರಾಜ್ಯಕ್ಕೆ ಯಾಕೆ ಈ ಬರೆ? ಜಿಎಸ್‌ಡಿಪಿ ಯ 25% ಗಿಂತ ಕಡಿಮೆ ಸಾಲ ಇರಬೇಕು ಎಂಬ ನಿಯಮವಿದೆ. 2021-22 ನೇ ಸಾಲಿನಿಂದ ಕೇಂದ್ರದಿಂದ ಬರುವ ಜಿ.ಎಸ್.ಟಿ ಪರಿಹಾರವೂ ಸ್ಥಗಿತವಾಗಲಿದೆ, ಇದರಿಂದ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.

15ನೇ ಹಣಕಾಸು ಆಯೋಗ ನಮ್ಮ ರಾಜ್ಯಕ್ಕೆ ರೂ.5495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ. ನಮ್ಮ ಪ್ರತಿನಿಧಿಯಾಗಿ ರಾಜ್ಯಸಭೆಯಲ್ಲಿ ಕೂತಿರುವ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಈ ರೀತಿ ಅನ್ಯಾಯ ಮಾಡಬಹುದೇ? ವಿಶೇಷ ಅನುದಾನ ರೂ.5495 ಕೋಟಿ ಸಿಕ್ಕಿದ್ದರೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಎಷ್ಟೊಂದು ನೆರವಾಗುತ್ತಿತ್ತಲ್ಲವೇ? ನಾನು ರಾಜಕೀಯ ಮಾತಾಡುತ್ತಿಲ್ಲ, ನನ್ನ ನೋವು ಹಂಚಿಕೊಳ್ಳುತ್ತಿದ್ದೇನೆ. ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಬೇಡವೇ? ಎಂದು ಕಿಡಿಕಾರಿದರು.

15ನೇ ಹಣಕಾಸು ಆಯೋಗ, ತೆರಿಗೆ ಹಂಚಿಕೆ ಮತ್ತು ಜಿಎಸ್‌ಟಿ ಪರಿಹಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಬೇಡವೇ? ಬಿಜೆಪಿಯ 25 ಎಂಪಿಗಳಿದ್ದೀರಿ, ದೆಹಲಿಗೆ ಹೋಗಿ ಪ್ರಧಾನಿ ಭೇಟಿ ಮಾಡಿ, ಆಗಿರುವ ಅನ್ಯಾಯ ಹೇಳಿ, ನ್ಯಾಯ ಕೇಳಿ. ಪ್ರಧಾನಿ ಜೊತೆ ಮಾತಾಡಲು ನಿಮಗೆ ಮುಜುಗರವಾದರೆ ನನ್ನನ್ನು ಕರ್ಕೊಂಡು ಹೋಗಿ, ನಾನು ಮಾತಾಡ್ತೇನೆ. ಸರ್ವಪಕ್ಷಗಳ ನಿಯೋಗ ಹೋಗೋಣ. ಹಣಕಾಸು ಆಯೋಗ ಒಂದು ವರ್ಷಕ್ಕೆ ಮಾತ್ರ ಶಿಫಾರಸು ಮಾಡಿದ್ದು. ಅನ್ಯಾಯ ಸರಿಪಡಿಸಲು ಇನ್ನೂ ಅವಕಾಶ ಇದೆ ಎಂದು ನುಡಿದರು.

ಆರ್ಥಿಕ ಕುಸಿತ, ಸಾಮಾಜಿಕ ಸಾಮರಸ್ಯದ ನಾಶ ಮತ್ತು ಕರೋನಾ ವೈರಸ್‌ನಿಂದಾಗಿ ದೇಶ ಕಷ್ಟಕ್ಕೆ ಸಿಲುಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದು ಇಂದಿನ ದೇಶದ ದುಸ್ಥಿತಿಯ ಸರಿಯಾದ ವಿಶ್ಲೇಷಣೆ. ಪ್ರಧಾನಿ ಮೋದಿಯವರು ಮಾತೆತ್ತಿದರೆ 5 ಲಕ್ಷ ಕೋಟಿ ಡಾಲರ್ (5 ಟ್ರಿಲಿಯನ್ ಡಾಲರ್) ಆರ್ಥಿಕತೆ ಬಗ್ಗೆ ಮಾತಾಡುತ್ತಾರೆ. ಜಿಡಿಪಿ ಶೇಕಡಾ 4.5ಕ್ಕೆ ಕುಸಿದಿದೆ, ನಿರುದ್ಯೋಗ 45 ವರ್ಷಗಳ ದಾಖಲೆ ಮುರಿದಿದೆ, ಉದ್ಯಮಗಳು ಮುಚ್ಚುತ್ತಿವೆ, ಬ್ಯಾಂಕುಗಳು ದಿವಾಳಿಯಾಗುತ್ತಿವೆ. ಇದು ಯಾವ ಟ್ರಿಲಿಯನ್ ಡಾಲರ್ ಆರ್ಥಿಕತೆ?‌ಎಂದು ಪ್ರಶ್ನಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version