ದಿನದ ಸುದ್ದಿ

ಮೋದಿಯ ಬಡಾಯಿ ಮಾತು ಬಡಜನರ ಹೊಟ್ಟೆ ತುಂಬಿಸುತ್ತವೆಯೇ..? : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಅಕ್ಷರಶಃ ಇಂದು ರಂಗೇರಿತ್ತು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪರ ಮಂಗಳವಾರ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು, ಶಾಸಕರಾದ ಎಂ ಕೃಷ್ಣಪ್ಪ, ಮಾಜಿ ಶಾಸಕರಾದ ಪ್ರಿಯಾಕೃಷ್ಣ ಹಾಗೂ ಇತರ ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಅಧಿಕಾರದಲ್ಲಿದ್ದಾಗ ಬಡಜನರ ಹೊಟ್ಟೆ ತುಂಬಿಸಲೆಂದು ರಾಜ್ಯದ 500 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಿದ್ದೇನೆ. ನರೇಂದ್ರ ಮೋದಿಯವರು ಈ ರೀತಿಯ ಯೋಜನೆ ಜಾರಿಗೊಳಿಸಿ ಒಬ್ಬ ಬಡವನ ಹೊಟ್ಟೆ ತುಂಬಿಸಿದ ಉದಾಹರಣೆ ಇದ್ದರೆ ಹೇಳಲಿ. ಮೋದಿಯವರ ಬಡಾಯಿ ಮಾತುಗಳು ದೇಶದ ಬಡ ಜನರ ಹೊಟ್ಟೆ ತುಂಬಿಸುತ್ತದೆಯೇ? ಎಂದು ಪ್ರಶ್ನಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಅವರು ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಅನುಭವಿ ರಾಜಕಾರಣಿ. ರಾಜ್ಯಸಭಾ ಸದಸ್ಯರಾಗಿ ಜನಪ್ರತಿನಿಧಿಯಾಗುವ ಸಾಮರ್ಥ್ಯವನ್ನು ಅವರು ಸಾಬೀತು ಪಡಿಸಿದ್ದಾರೆ ಎಂದರು

ಇಂತಹ ಸಮರ್ಥ ನಾಯಕರು ದೇಶದ ಸಂಸತ್ತಿನಲ್ಲಿ ಇದ್ದಾಗಲೇ ಪ್ರಜೆಗಳು ಮತ್ತು ಪ್ರಜಾಪ್ರಭುತ್ವಕ್ಕೆ ಬಲ. ಕಳೆದ ಬಾರಿ ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ದುರಾದೃಷ್ಟವಶಾತ್ ಅವರು ಇಂದು ನಮ್ಮ ಜೊತೆಗಿಲ್ಲ. ಅವರಷ್ಟೇ ಸಮರ್ಥ ರಾಜಕಾರಣಿಯಾದ ಹರಿಪ್ರಸಾದ್ ಅವರಿಗೆ ತಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version