ದಿನದ ಸುದ್ದಿ
ಬಾಗಲಕೋಟೆ ಪ್ರವಾಹ | ಸುವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು : ಸಿದ್ದರಾಮಯ್ಯ
ಸುದ್ದಿದಿನ, ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರನ್ನು ಕಂಡು ಮನಸ್ಸು ಮರುಗುತ್ತಿದೆ. ಇಂಥ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಿತ್ತು ಎನಿಸಿದರೂ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲದ ವಿಶ್ರಾಂತಿ ಪಡೆಯಬೇಕಾಗಿದೆ. ನನ್ನ ಕ್ಷೇತ್ರ ಬಾದಾಮಿಯಲ್ಲಿ ಸಹ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವುದರಿಂದ ಮಲಪ್ರಭಾ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ. ಆದ್ದರಿಂದ ಗ್ರಾಮಸ್ಥರು ಸುರಕ್ಷಿತ ತಾಣಕ್ಕೆ ತೆರಳಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ. ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಾಗೂ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸುರಕ್ಷಿತ ತಾಣಕ್ಕೆ ತೆರಳುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ. ಈ ಸಂಬಂಧ ಬಾದಾಮಿ ತಹಶಿಲ್ದಾರ್, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಜನತೆಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ಸುವ್ಯವಸ್ಥೆ ಕಲ್ಪಿಸುವ ಹೊಣೆ ನಮ್ಮದು ಎಂದು ಭರವಸೆ ನೀಡಿದ್ದಾರೆ.