ದಿನದ ಸುದ್ದಿ

ದೇವರಾಜ ಅರಸು ಅವರ ಬಳಿಕ ಐದು ವರ್ಷದ ಅವಧಿ ಮುಗಿಸಿದ ಮುಖ್ಯಮಂತ್ರಿ ನಾನೇ : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟವನು ನಾನು. ಜನರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಜನಾಭಿಪ್ರಾಯಗಳನ್ನು ಮೂಡಿಸುವಾಗ ಅದು ಸಮಾಜಮುಖಿ ಆಗಿರಬೇಕು ಎಂದು ಗಂಗಾವತಿ ಮೀಡಿಯಾ ಕ್ಲಬ್ ಆಯೋಜಿಸಿದ್ದ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಪತ್ರಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ನಾನು ನನ್ನ ರಾಜಕೀಯ ಜೀವನದಲ್ಲಿ ಮಾಧ್ಯಮಗಳನ್ನು ಓಲೈಸಲು ಹೋದವನಲ್ಲ, ಅದೇ ರೀತಿ ನನ್ನ ವಿರುದ್ಧವಾಗಿ ಸುದ್ದಿಗಳು ಪ್ರಕಟವಾದಾಗ ಸಿಟ್ಟುಮಾಡಿಕೊಂಡು ಸೇಡು ತೀರಿಸಬೇಕೆಂದು ಯೋಚಿಸಿದವನೂ ಅಲ್ಲ. ಮಾಧ್ಯಮಗಳನ್ನು ಅವುಗಳ ಪಾಡಿಗೆ ಕೆಲಸ ಮಾಡಲು ಸ್ವತಂತ್ರವಾಗಿ ಬಿಟ್ಟು ಬಿಡಬೇಕೆಂದು ನಂಬಿದವನು ನಾನು‌ ಎಂದರು.

ಅನೇಕ ಬಾರಿ ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು, ದುರುದ್ದೇಶ ಪೂರಿತ ಸುದ್ದಿಗಳು ಪ್ರಕಟವಾದಾಗ, ಪ್ರಸಾರವಾದಾಗ ಮನಸ್ಸಿಗೆ ನೋವಾಗುತ್ತದೆ. ಕಾರಿನ‌ ಮೇಲೆ ಕಾಗೆ ಕೂರ್ತು, ಮೀನು ತಿಂದು ದೇವಸ್ಥಾನಕ್ಕೆ ಹೋದ್ರು. ಇವೆಲ್ಲ ಸುದ್ದಿಗಳೇ? ಇದರ ಆಧಾರದಲ್ಲಿ ನನ್ನ ವ್ಯಕ್ತಿತ್ವ ಅಳೆಯುತ್ತೀರಾ? ಎಂದು ಪ್ರಶ್ನಿಸಿದರು.

ಮೀನು ಸೇವಿಸಿ ದೇವಾಲಯಕ್ಕೆ ಹೋದೆ ಎಂದು ಟೀಕಿಸಿದರು. ಹಾಗಾದರೆ ಮಾಂಸ ನೈವೇದ್ಯಕ್ಕೆ ಇಟ್ಟ ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೇಕೆ? ನನಗೂ ದೇವರಲ್ಲಿ ನಂಬಿಕೆ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದೇ ದೇವರಿಗೆ ಸಲ್ಲಿಸುವ ಭಕ್ತಿ, ಗೌರವ ಎಂದು ನಂಬಿದವನು ನಾನು.‌ ಮಾಡಬಾರದ್ದನ್ನು ಮಾಡಿ ಮಂಡಿಯೂರಿದರೆ ದೇವರು ಕ್ಷಮಿಸುವನೇ?
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಮಾಧ್ಯಮಗಳು ಹೇಳಿದವು, ಹನ್ನೆರಡು ಬಾರಿ ಹೋದೆ. ದೇವರಾಜ ಅರಸು ಅವರ ಬಳಿಕ ಐದು ವರ್ಷದ ಅವಧಿ ಮುಗಿಸಿದ ಮುಖ್ಯಮಂತ್ರಿ ನಾನೇ.‌ ಹಾಗಾದರೆ ಜನರ ಮನಸ್ಸಿನಲ್ಲಿ ಮೌಢ್ಯ ಬಿತ್ತಿದವರು ಯಾರು? ಎಂದರು.

ಸತ್ಯವನ್ನು ಹೇಳುವುದೇ ಮಾಧ್ಯಮಗಳ ಮುಖ್ಯ ಜವಾಬ್ದಾರಿ. ಸತ್ಯ ಎಷ್ಟೇ ಕಹಿಯಿರಲಿ, ಕಟುವಾಗಿರಲಿ ಮಾಧ್ಯಮಗಳು ಅದನ್ನು ಹೇಳಲು ಹಿಂಜರಿಯಬಾರದು. ಯಾವುದೇ ರೀತಿಯ ರಾಗ-ದ್ವೇಷಗಳನ್ನು ಇಟ್ಟುಕೊಳ್ಳಬಾರದು. ಜನರನ್ನು ಚಿಂತನಶೀಲರನ್ನಾಗಿ‌ ಮಾಡುವುದೇ ನಿಜವಾದ ಮಾಧ್ಯಮ ಧರ್ಮ ಎಂದು ಎಚ್ಚರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version