ದಿನದ ಸುದ್ದಿ
ಮಂತ್ರಿಮಂಡಲ ಪುನರ್ ರಚನೆ ನಿರ್ಧಾರ : ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಮನವಿ
ಸುದ್ದಿದಿನ, ಬೆಂಗಳೂರು : ಮಂತ್ರಿ ಸ್ಥಾನದಿಂದ ವಂಚಿತರಾದ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವ ಶಾಸಕರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದೆ ರಾಜೀನಾಮೆ ವಾಪಸ್ಸು ಪಡೆಯಿರಿ, ನಿಮ್ಮ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹಾರ ಮಾಡುತ್ತೇವೆ ಎಂದು ಪಕ್ಷದ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ. ನಾವು ಈಗಾಗಲೇ ಮಂತ್ರಿಮಂಡಲ ಪುನರ್ ರಚನೆ ನಿರ್ಧಾರಕ್ಕೆ ಸಹ ಬಂದಿದ್ದೇವೆ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಕುರಿತಾಗಿ ಟ್ವೀಟ್ ಮಾಡಿರುವ ಅವರು, ನಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸಹಜವಾಗಿ ಕೆಲವರಿಗೆ ಬೇಸರವಿದೆ. ಅದನ್ನು ಸರಿಪಡಿಸುವುದಕ್ಕಾಗಿ ನಮ್ಮ ಮಂತ್ರಿಗಳೆಲ್ಲರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಪಕ್ಷದ ಭವಿಷ್ಯ ಮುಖ್ಯವೇ ಹೊರತು ವೈಯಕ್ತಿಕ ಸ್ಥಾನಮಾನ ಮುಖ್ಯವಲ್ಲ ಎಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಬಿಜೆಪಿಗೆ ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಅವರಿಗೆ ಸ್ಪಷ್ಟ ಬಹುಮತವೂ ಇಲ್ಲ, ಬೇರೆ ಪಕ್ಷಗಳ ಬೆಂಬಲವೂ ಇಲ್ಲ ಆದರೂ ಸಹ ಅಸಂವಿಧಾನಿಕ ಮಾರ್ಗದ ಮೂಲಕ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಸರ್ಕಾರ ರಚಿಸುವ ವಿಫಲ ಯತ್ನಕ್ಕೆ ಕೈಹಾಕಿದೆ. ಇದೂ ಸಹ ಹಿಂದಿನಂತೆ ಯಶಸ್ವಿಯಾಗುವುದಿಲ್ಲ ಎಂದು ಗುಡುಗಿದ್ದಾರೆ.