ದಿನದ ಸುದ್ದಿ
ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ; ಬಿಜೆಪಿ ಮೈತ್ರಿ ತೊರೆದ ಜೆಡಿಯು ; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಸುದ್ದಿದಿನ ಡೆಸ್ಕ್ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ (Politics Development ) ಬಿಹಾರ ಮುಖ್ಯಮಂತ್ರಿ (Bihar Chief minister ) ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ( JDU – Nitish Kumar ) ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ರಾಜೀನಾಮೆ (Resignation) ಸಲ್ಲಿಸಿದ್ದಾರೆ.
ಪಾಟ್ನಾದಲ್ಲಿನ ರಾಜಭವನಕ್ಕೆ ಇಂದು ಸಂಜೆ ತೆರಳಿದ ನಿತೀಶ್ ಕುಮಾರ್, ರಾಜ್ಯಪಾಲ ಫಗು ಚೌವ್ಹಾಣ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿಕೂಟದಿಂದ ಹೊರಬರುವ ಕುರಿತು ನಿತೀಶ್ ಕುಮಾರ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಮಧ್ಯೆ ನೂತನ ಸರ್ಕಾರ ರಚನೆಗೆ ಕಸರತ್ತು ನಡೆದಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಆರ್‌ಜೆಡಿ ಮತ್ತು ಕಾಂಗ್ರೆಸ್ ತಿಳಿಸಿವೆ. ಹಿಂದೂಸ್ಥಾನಿ ಅವಾಮ್ ಮೋರ್ಚಾ-ಹೆಚ್‌ಎಎಂ ಸಹ ಬೆಂಬಲ ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ | ಎನ್ಇಪಿ-2020ರ ಯಶಸ್ಸಿನಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದು : ಪ್ರೊ. ಪಿ ಎಸ್ ಯಡಪಡಿತ್ತಾಯ
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 77 ಶಾಸಕ ಬಲ ಹೊಂದಿದ್ದು, ಆರ್‌ಜೆಡಿ79 , ಜೆಡಿಯು 45 , ಕಾಂಗ್ರೆಸ್ 19, ಎಡಪಕ್ಷಗಳು 16, ಹಾಗೂ ಹೆಚ್‌ಎಎಂ 4 ಶಾಸಕ ಬಲ ಹೊಂದಿವೆ. ತಮಗೆ 164 ಶಾಸಕರ ಬೆಂಬಲವಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದು, ನೂತನ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಹಕ್ಕು ಮಂಡಿಸಿದ್ದಾರೆ. ಈ ಮಧ್ಯೆ ಮೈತ್ರಿ ಕಡಿದುಕೊಳ್ಳುವ ಮೂಲಕ ಜೆಡಿಯು ಜನಾದೇಶಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದ್ದು, ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್, ನಿತೀಶ್ ಕುಮಾರ್ ಅವರು ಮಾಡಿರುವ ವಿಶ್ವಾಸ ದ್ರೋಹವನ್ನು ಬಿಹಾರ ಜನತೆ ಎಂದೂ ಕ್ಷಮಿಸುವುದಿಲ್ಲ ಎಂದು ಟೀಕಿಸಿದರು.
2020ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿದ್ದ ಜೆಡಿಯು ಕಡಿಮೆ ಸ್ಥಾನ ಪಡೆದು ಬಿಜೆಪಿ ಗಣನೀಯ ಸ್ಥಾನ ಪಡೆದಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್ ಕುಮಾರ್ ಅವರಿಗೆ ಬಿಟ್ಟುಕೊಡಲಾಗಿತ್ತು. ಇದೀಗ ಮೈತ್ರಿ ಕಡಿದುಕೊಳ್ಳೂವ ಮೂಲಕ ಅವರು, ಜನಾದೇಶ ಧಿಕ್ಕರಿಸಿದ್ದಾರೆ ಎಂದು ಜೈಸ್ವಾಲ್ ಆರೋಪಿಸಿದ್ದಾರೆ.
ಎಲ್‌ಜೆಪಿ ವರಿಷ್ಠ ಚಿರಾಗ್ ಪಾಸ್ವಾನ್ ಅವರು ಸಹ ನಿತೀಶ್ ಕುಮಾರ್ ನಿರ್ಧಾರವನ್ನು ಖಂಡಿಸಿದ್ದಾರೆ. ರಾಷ್ಟ್ರೀಯ ಲೋಕಜನಶಕ್ತಿ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ ಪಶುಪತಿ ಕುಮಾರ್ ಪರಸ್ ಅವರು ಜೆಡಿಯು ನಿರ್ಧಾರವನ್ನು ಟೀಕಿಸಿದ್ದು, ತಮ್ಮ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243