ದಿನದ ಸುದ್ದಿ

ಗಾಯಕ ಕೃಷ್ಣಕುಮಾರ್ ಕುನ್ನತ್ ನಿಧನ : ಗಣ್ಯರ ಸಂತಾಪ

Published

on

ಸುದ್ದಿದಿನ ಡೆಸ್ಕ್ : ಕೆಕೆಎಂದೇ ಹೆಸರುವಾಸಿಯಾಗಿದ್ದ ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತಾದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಕುಸಿದು ಬಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.

ಕೃಷ್ಣ ಕುಮಾರ್ ಕುನ್ನತ್ ಅವರನ್ನು ತಮಿಳು ಚಲನಚಿತ್ರ ಕಾದಲ್ ದೇಶಂ ಮೂಲಕ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪರಿಚಯಿಸಿದ್ದರು. ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ “ತಡಪ್ ತಡಪ್” ಹಾಡಿನ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ದೆಹಲಿ ಮೂಲದ ಗಾಯಕ, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಹಾಗೂ ಗುಜರಾತಿ ಭಾಷೆಗಳಲ್ಲಿ ಹಾಡಿದ್ದರು. ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿಪಡೆಯದೆ ಗಾಯಕರಾಗಿದ್ದರು.

ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರತಿಭಾವಂತ ಗಾಯಕನ ನಿಧನಕ್ಕೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ಕೆಕೆ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಖ್ಯಾತ ಗಾಯಕ ಕೆ ಕೆ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಕೆ ಕೆ ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಳ್ಳುವ ಮೂಲಕ ಜನಪ್ರಿಯ ಗಾಯಕರಾಗಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.

ಕೆಕೆ ಅವರು ಅತ್ಯಂತ ಪ್ರತಿಭಾವಂತ ಬಹುಮುಖ ಗಾಯಕರಾಗಿದ್ದರು. ಅವರ ಅಕಾಲಿಕ ನಿಧನದಿಂದ ತಮಗೆ ತುಂಬಾ ದುಃಖಕರವಾಗಿದ್ದು, ಭಾರತೀಯ ಸಂಗೀತಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version