ದಿನದ ಸುದ್ದಿ
ಚನ್ನಗಿರಿಯ ಕಲಾಭಿಮಾನಿಗಳ ಹೃದಯ ಗೆದ್ದ ತರಳಬಾಳು ಜಾನಪದ ಸಿರಿಯ ಪ್ರತಿಭೆಗಳು
ಸುದ್ದಿದಿನ,ಚನ್ನಗಿರಿ( ಪಾಂಡೋಮಟ್ಟಿ ): ನಾಡಿನ ಜಾನಪದ ಶ್ರೀಮಂತಿಕೆಯ ಸಾಂಸ್ಕೃತಿಕ ಕಣಜವನ್ನು ಉಳಿಸುವ ಪ್ರಯತ್ನದಿ ಯಶಸ್ಸು ಸಾಧಿಸಿ ಸಾಂಸ್ಕೃತಿಕ ಕಹಳೆಯನ್ನು ನಾಡಿನಾದ್ಯಂತ ಯಶಸ್ವಿಯಾಗಿ ಊದುತ್ತ ,ಕನ್ನಡದ ಕಲೋಪಾಸಕರ ಮನ ಗೆದ್ದಿರುವ ತರಳಬಾಳು ಜಗದ್ಗುರು ಬೃಹನ್ಮಠದ ಮುಖ್ಯ ವಾಹಿನಿಯಾಗಿ ಸಾಂಸ್ಕೃತಿಕ ರಸದೌತಣದ ಜೊತೆ ಕಲೆಯನ್ನು ಉಳಿಸಿ ಬೆಳೆಸುವ ಸಂದೇಶ ಸಾರುತ್ತಿರುವ ತರಳಬಾಳು ಜಾನಪದ ಸಿರಿ ಸಂಭ್ರಮದ ಯಶೋಗಾಥೆಗೆ ತಲೆದೂಗಿ ಅಹುದಹುದೆನ್ನಲೇಬೇಕು.
ಕೇವಲ ನಾಡು,ನುಡಿ, ಭಾಷೆ, ಸಂಸ್ಕೃತಿಯ ಬಗ್ಗೆ ವೇದಿಕೆಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುವ ಪ್ರಭೂತಿಗಳಿಗೆ ಅಪವಾದದಂತೆ ಸದ್ದಿಲ್ಲದೆ ಜಾನಪದ ಸಂಸ್ಕೃತಿಯ ಪುನರುಜ್ಜೀವನದ ಕೈಂಕರ್ಯಕ್ಕೆ ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಿ ಯಾವುದೇ ಸರ್ಕಾರದ ಅನುದಾನ ಮತ್ತು ಅನುಮೋದನೆಗೆ ಜೋತು ಬೀಳದೆ ಲೋಕಮುಖಿ ಜಗದ್ಗುರುವೆಂದೇ ವಿಖ್ಯಾತರಾದ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶಯದಂತೆ ತರಳಬಾಳು ಸಂಪದ್ಭರಿತ ಶಿಷ್ಯ ಸಮುದಾಯದ ಅಪೇಕ್ಷೆಯಂತೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಜಾನಪದದ ನಿಜ ಸೊಗಡಿನ ಕಂಪನ್ನು ಬೀರುತ್ತಿರುವ ತರಳಬಾಳು ಕಲಾ ಸಂಘದ ಕಲಾ ಜವಾಬ್ದಾರಿಯನ್ನು ನೋಡಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಚಿಕೆಪಟ್ಟುಕೊಳ್ಳಬೇಕು.
ಈ ವರ್ಷದ ಮೂರನೆಯ ಅವತರಣಿಕೆಯು ನಿನ್ನೆ ಯಶಸ್ವಿಯಾಗಿ ಚನ್ನಗಿರಿಯ ಪಾಂಡೋಮಟ್ಟಿಯ ಶ್ರೀ ರುದ್ರೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಜರುಗಿತು. ಸುಂದರ ಸಂಜೆಯ ಸಾಂಸ್ಕೃತಿಕ ಸ್ವರ್ಗಕ್ಕೆ ಸಾಕ್ಷಿಯಾದ 5 ಸಾವಿರ ಜನರ ಮನದಲ್ಲಿ ಉಳಿದಿದ್ದು ಕರಗ ನೃತ್ಯ, ಬೀಸು ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಲಂಬಾಣಿ ನೃತ್ಯ, ಯಕ್ಷಗಾನ,ಮಲ್ಲಕಂಬ,ಮಲ್ಲಿ ಹಗ್ಗ ಸೇರಿದಂತೆ 25 ಕ್ಕೂ ಹೆಚ್ಚು ಕಲಾ ನೃತ್ಯ ಪ್ರಕಾರಗಳಲ್ಲಿ ಗ್ರಾಮೀಣ ಪ್ರದೇಶದ 350 ಮಕ್ಕಳ ಸಂಪನ್ನವಾದ ಕಲಾ ಪ್ರೌಢಿಮೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಎಸ್.ಬಿ ರಂಗನಾಥ್ ಕರ್ನಾಟಕದ 14 ಜಿಲ್ಲೆಗಳಲ್ಲಿ ವಿದ್ಯಾಸಂಸ್ಥೆಯ 250 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಗುಣಮಟ್ಟದ ಶಿಕ್ಷಣದ ಜೊತೆ ನಾಡು ನುಡಿ ಸಂಸ್ಕೃತಿಯನ್ನು ಮಕ್ಕಳಿಗೆ ಅರ್ಥೈಸುವ ಹೊಣೆಗಾರಿಕೆಯಿಂದ ಶ್ರೀ ಸಂಸ್ಥೆಯು ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಸ್ಥಳೀಯ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ ಕರ್ನಾಟಕ ರಂಗಭೂಮಿ ಇತಿಹಾಸಲ್ಲಿ ತರಳಬಾಳು ಕಲಾಸಂಘಕ್ಕೆ ಮಹತ್ವದ ಸ್ಥಾನವಿದ್ದು 70 ವರ್ಷಗಳ ಹಿಂದೆ ಪರಮ ಪೂಜ್ಯ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದದಿ ಸ್ಥಾಪಿತವಾದ ಕಲಾಸಂಘ ನೂರಾರು ಶರಣರ ನಾಟಕಗಳನ್ನು ದೇಶದಾದ್ಯಂತ ಪ್ರಯೋಗಿಸಿದ ಕೀರ್ತಿ ಹೊಂದಿದೆ ಎಂದರು .ಪ್ರಸ್ತುತ ಜಗದ್ಗುರುವರ್ಯರಾದ ಪೂಜನೀಯ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಿ ಹೊಸ ಆಯಾಮ ಪಡೆದು ಕಲಾ ಸರಸ್ವತಿಯನ್ನು ಉಳಿಸಿ ಬೆಳೆಸುವ ಔಚಿತ್ಯಪೂರ್ಣ ಕಾರ್ಯದಿ ಯಶಸ್ವಿಯಾಗಿ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ಪಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401