ದಿನದ ಸುದ್ದಿ
ಹಸಿದವನಿಗೆ ಅನ್ನ ನೀಡುವುದೇ ಧರ್ಮ: ಡಾ.ಪಂಡಿತಾರಾಧ್ಯ ಶ್ರೀ
ಸುದ್ದಿದಿನ,ಸಿರಿಗೆರೆ: ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ. ಅಂತೆಯೇ ಕಾಯಕ ಫಲದ ಸ್ವಲ್ಪ ಭಾಗ ದೀನ–ದಲಿತರಿಗೆ ನೀಡುವ ಪರಂಪರೆ ಯನ್ನು ಪಾಲಿಸಿದವರು ಮಾದಾರ ಚೆನ್ನಯ್ಯನವರು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಬೃಹನ್ಮಠದ ಐಕ್ಯ ಮಂಟಪದಲ್ಲಿ ಅಣ್ಣನ ಬಳಗದವರು ಶನಿವಾರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯ, ತೆಲಗುಬಾಳು ಸಿದ್ಧೇಶ್ವರ ಜಯಂತಿ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
’ಹೊಟ್ಟೆ ತುಂಬಿದವರಿಗೆ ಊಟ ನೀಡುತ್ತಿದ್ದೇವೆ, ಹಸಿದು ಬಂದರೆ ಅನ್ನ ನೀಡದೇ ಅವಮಾನಿಸುವುದನ್ನು ನೋಡಿದ್ದೇವೆ. ಒಬ್ಬ ವ್ಯಕ್ತಿಯನ್ನು ಜಾತಿ, ಧರ್ಮ, ಅಧಿಕಾರ ಹಾಗೂ ಶ್ರೀಮಂತಿಕೆಯಿಂದ ಗೌರವಿಸುವುದು ತರವಲ್ಲ. ವ್ಯಕ್ತಿತ್ವದಿಂದ ವ್ಯಕ್ತಿಯನ್ನು ಗೌರವಿಸಬೇಕು. ಮಾದಾರ ಚೆನ್ನಯ್ಯ ವ್ಯಕ್ತಿತ್ವದಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿ ವಿಶ್ವಬಂಧುವಾದರು. ತರಳಬಾಳು ಗುರುಪರಂಪರೆಯಲ್ಲಿ ತರಳಬಾಳು ಸಿದ್ದೇಶ್ವರರು ವಿಶ್ವಬಂಧು ಮರುಳಸಿದ್ಧರಿಂದ ’ತರಳಬಾಳು’ ಎಂಬ ಆಶೀರ್ವಾದ ಪಡೆದ ಮೊದಲ ಶಿಷ್ಯರಾಗಿದ್ದಾರೆ’. ಅದೇ ಪರಂಪರೆಯಲ್ಲಿ ಮುಂದುವರಿಯುತ್ತಿದೆ’ ಎಂದರು.
’ಲಿಂಗದೀಕ್ಷೆ ಒಂದು ಸಂಸ್ಕಾರ. ಲಿಂಗ ಭಗವಂತನ ಸಂಕೇತ, ಇಷ್ಟಲಿಂಗ ಮಾನವನನ್ನು ದೇವರನ್ನಾಗಿಸುತ್ತದೆ. ನಿತ್ಯ ಲಿಂಗಪೂಜೆ ನಿಷ್ಠರಾದರೆ ವಿಪತ್ತುಗಳಿಂದ ದೂರವಾಗಬಹದು. ಇಷ್ಟಲಿಂಗವನ್ನು ಪೂಜಿಸುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ನಮ್ಮಲ್ಲೇ ದೇವರಿರುವಾಗ ಸ್ಥಾವರ ದೇವರ ಪೂಜಿಸುವುದು ಸರಿ ಎನಿಸುವುದಿಲ್ಲ’ ಎಂದರು.
’ಸಂಸಾರ ಸುಖವೂ ಅಲ್ಲ, ದುಃಖವೂ ಅಲ್ಲ ಅವರು ಯಾವ ರೀತಿ ಭಾವಿಸುತ್ತಾರೆಯೋ ಹಾಗೆ. ಪತಿ–ಪತ್ನಿ ಪರಸ್ಪರ ಒಬ್ಬರನೊಬ್ಬರು ಗೌರವಿಸಿಬೇಕು, ಪ್ರೀತಿಸಬೇಕು. ಹೊಂದಾಣಿಕೆಯಿಂದ ನಡೆದುಕೊಳ್ಳ ಬೇಕು. ಆಗ ಸಂಸಾರ ಸುಖವಾಗಿರುತ್ತದೆ. ಸೋಮಾರಿಗಳಾಗದೆ ಕಾಯಕ ನಿಷ್ಟರಾಗಿ, ದುಶ್ಚಟಗಳ ದಾಸರಾಗದೆ, ಸಜ್ಜನರ ಸಂಗದಿಂದ ತಲೆ ಎತ್ತಿ ನಡೆಯುವಂತಾಗಬೇಕು’ ಎಂದರು.
ಒಟ್ಟು 9 ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಬಿ.ಎಸ್. ಮರುಳಸಿದ್ಧಯ್ಯ ಇಷ್ಟಲಿಂಗ ದೀಕ್ಷಾ ಕಾಯಕ್ರಮವನ್ನು ನಡೆಸಿಕೊಟ್ಟರು. ನಾಲ್ಕು ಜನರಿಗೆ ಶಿವ ದೀಕ್ಷೆ ಹಾಗೂ ಒಬ್ಬರಿಗೆ ಜಂಗಮ ದೀಕ್ಷೆಯನ್ನು ನೀಡಲಾಯಿತು. ಮಹೋನ್, ಹೇಮಂತ್ ಪೂಜಾ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401