ದಿನದ ಸುದ್ದಿ
ಬಸವನೊಲುಮೆಯ ಸಿರಿಗೆರೆ ಶ್ರೀ ಶಿವಕುಮಾರ ಶ್ರೀಗಳ 26 ನೇ ಶ್ರದ್ಧಾಂಜಲಿ ಕಾರ್ಯಕ್ರಮ
ಸುದ್ದಿದಿನ ಡೆಸ್ಕ್ : ಜಗದೊಳಿತಿಗಾಗಿ ಜನಿಸಿದ ಮಹಾಗುರುವಾಗಿ, ಕತ್ತಲೆಯಲ್ಲಿದ್ದ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮಹಾಬೆಳಕನ್ನು ತೋರಿ ನಿಜಾರ್ಥದ ಜಗದ್ಗುರುವೆಂದು ಜನಮಾನಸದಿ ಚಿರಸ್ಥಾಯಿಯಾಗಿರುವ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಇಪ್ಪತ್ತನೇಯ ಪೀಠಾಧೀಪತಿಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ತಮ್ಮ ಜೀವಿತದ ಅವಧಿಯಲ್ಲಿಯೇ ಜನಮಾನಸದಿ ದಂತಕಥೆಯಾದವರು.
ಮೃತ್ಯು ಲೋಕದ ಕರ್ತಾರನ ಕಮ್ಮಟದಲ್ಲಿ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಬದುಕಿದ ಅವರು ನುಡಿ ಜಾಣರಾಗದೆ ನಡೆಧೀರರಾಗಿದ್ದ ಅಪ್ರತಿಮ ವೀರ ಸನ್ಯಾಸಿ. ಅಜ್ಞಾನ, ಬಡತನ, ಅಶಿಸ್ತುಗಳನ್ನೕ ಬಳುವಳಿಯಾಗಿ ಪಡೆದ ಶಿಷ್ಯ ಸಮುದಾಯ.ಬಿಡಿಗಾಸು ಇಲ್ಲದ,ಹೆಸರಿಗೆ ಮಾತ್ರ ” ಬೃಹನ್ಮಠ” ಎನಿಸಿಕೊಂಡಿದ್ದ ಪೀಠ.ಸದಾ ಕತ್ತಿ ಮಸೆಯುವ ಒಳ ಹೊರಗಿನ ಶತ್ರುಗಳು-ಇವುಗಳ ಮಧ್ಯೆ ವೈರಿಯೂ ಮೆಚ್ಚಿ ತಲೆದೂಗುವಂತೆ ಅಡೆತಡೆಗಳನ್ನು ಪುಡಿಗೈದು ಸಮಾಜವನ್ನು ಕಟ್ಟಿ ಬೆಳೆಸಿದರು.ಕಂಟಕಗಳೆಂಬ ಕೆಂಡದ ಹಾಸಿಗೆಯಲ್ಲಿ ಮಲಗಿದರೂ,ಉಂಡದ್ದು ದ್ವೇಷ ಅಸೂಯೆಗಳ ಹಾಲಹಲವಾದರೂ ಸಮಾಜವೆಂಬ ಶಿಶುವಿಗೆ ಅಮೃತವನ್ನೇ ಮನದಣಿಯೇ ಉಣಿಸಿದರು.
ಹಳ್ಳಿಗಾಡಿನಲ್ಲಿ ನೆಲೆ ಕಳೆದುಕೊಂಡ ಬೇರುಗಳಿಗೆ ಶಿಕ್ಷಣದ ನೀರೆರೆದು ಬದುಕಿಸಿ ,ಸುಡುವ ಬೆಂಗಾಡಿನಲ್ಲಿಯೂ ಸುಖದ ನಂದನ ವನವನ್ನು ನಿರ್ಮಿಸಿದ ಮಹಾನಿರ್ಮಾತ್ರರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರು.ಉರಿಬರಲಿ,ಸಿರಿಬರಲಿ ಅಂಜದೇ ಅಳುಕದೆ ಪರಮಾತ್ಮನ ರಾಜತೇಜದಲ್ಲಿ ಬಾಳಿ ಸಮಾಜವನ್ನು ಮುನ್ನಡೆಸಿದ ಅವರ ಬದುಕೇ ಒಂದು ವೀರಗಾಥೆ.ಕಾಯಕವೇ ಶಿವಪೂಜೆ,ಜನತೆಯೇ ಜಂಗಮವೆಂದು ನಂಬಿ,ನುಡಿದು,ನಡೆದು ಭವದ ಬದುಕಿನಲ್ಲಿ ನೀರತಾವರೆಯಂತೆ ಬಾಳಿದ ಅವರ ಬದುಕೇ ಅನನ್ಯ,ಅಸದೃಶ .ಸಾಗರಕ್ಕೆ ಸಾಗರವೇ ಉಪಮೆ ಎನ್ನುವಂತೆ ಅವರಿಗೆ ಅವರೇ ಸಾಟಿ. ಗುರುಗಳವರು ಆಸೀನರಾದದ್ದು ಬೆಳ್ಳಿ ಬಂಗಾರದ ಸಿಂಹಾಸನದ ಮೇಲೆ ಅಲ್ಲ.ಭಕ್ತರ ಹೃದಯವೇ ಅವರ ಸಿಂಹಾಸನವಾಗಿತ್ತು.
ಸದ್ಭಕ್ತರಹೃದಯ ಸಿಂಹಾಸನಾಧೀಶರಾದ ಅವರನ್ನು ನೆನೆಯುವುದೇ ಪುಣ್ಯದ ಕೆಲಸ.
ಶ್ರದ್ಧಾಂಜಲಿ ಕಾರ್ಯಕ್ರಮ
ಇದೇ 2018 ರ ಸೆಪ್ಟಂಬರ್ 24 ರಂದು ಅವರ 26 ನೇಯ ಶ್ರದ್ದಾಂಜಲಿ ಸಮಾರಂಭ. ತಮ್ಮ ಭಕ್ತ ಕುಸುಮಾಂಜಲಿಯನ್ನು ಅರ್ಪಿಸಲು ಭಕ್ತರಿಗೆ ಇದೊಂದು ಸದಾವಕಾಶ. ಶ್ರದ್ದಾಂಜಲಿ ಸಮಾರಂಭ 20 ರಿಂದ 24 ರ ವರೆಗೆ ಸಿರಿಗೆರೆಯಲ್ಲಿ ಜರುಗಲಿದ್ದು ತನ್ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ, ಸಮಾಜ ಮುಖಿ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸಿರುವ ಕುರಿತು ಪ್ರಸ್ತುತ ಜಗದ್ಗುರುವರ್ಯರಾದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾಹಿತಿ ನೀಡಿದರು.
ರಾಜ್ಯದ 14ಜಿಲ್ಲೆಗಳಲ್ಲಿ ನಡೆಯುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.20 ರಿಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪ್ರದರ್ಶನಗಳು,21 ರಂದು ಪ್ರಾದೇಶಿಕ ಮಟ್ಟದಲ್ಲಿ ವಿಜಯಿಯಾದ ತಂಡಗಳ ಸ್ಪರ್ಧೆಗಳು ಹಾಗೂ 22 ರಂದು ಕಾಲೇಜು ಮಟ್ಟದ ವಿದ್ಯಾರ್ಥಿಗಳ ಅಂತಿಮ ಸ್ಪರ್ಧೆಗಳು ನಡೆಯಲಿವೆ.ಪ್ರತಿ ದಿನ ಸಂಜೆ ಜರುಗುವ ಭವ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ತಂಡಗಳು ಪ್ರದರ್ಶನಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದರು.
24 ರಂದು ಶ್ರದ್ದಾಂಜಲಿ ಸಮಾರಂಭಕ್ಕೆ ಆಗಮಿಷುವ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪ,ನೂತನವಾಗಿ ಸುಮಾರು ನಲವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಿಲಯದ ಒಳಾಂಗಣದಲ್ಲಿ,ಪ್ರತಿ ವರ್ಷ ನಿರ್ಮಿಸುವ ದಾಸೋಹ ಮಂಟಪ ಸೇರಿದಂತೆ ಈ ಬಾರಿ ಮೂರು ಕಡೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗುವುದು, ಹಿರೇಕೆರೂರ ತಾಲ್ಲೂಕಿನ ಒಂದು ಸಾವಿರ ಸ್ವಯಂ ಸೇವಕರು ದಾಸೋಹದ ನೆರವಿನ ನಿರ್ವಹಣೆ ನಡೆಸುವ ಜೊತೆಗೆ ಸಿರಿಗೆರೆ ಸುತ್ತಲಿನ ಗ್ರಾಮಗಳ ಸ್ವಯಂಸೇವಾ ತಂಡಗಳು,ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸ್ವಯಂ ಸೇವಾ ತಂಡಗಳು ದಾಸೋಹ ವಿತರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತರಳಬಾಳು ಶಾಖಾ ಶ್ರೀ ಮಠ ಸಾಣೇಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಭಾ ಮಂಟಪ, ದಾಸೋಹ ಮಂಟಪ,ಸ್ವಾಗತ ಕಮಾನುಗಳ ರಚನೆ,ಅಡುಗೆ ಮಾಡಲು ದಾವಣಗೆರೆಯ ಮಹೇಶ್ವರಪ್ಪ ,ತುಮಕೂರಿನ ಆಂಕರ್ ತಂಡ, ವಿದ್ಯುತ್ ದೀಪಾಲಂಕಾರ ಮತ್ತು ಧ್ವನಿವರ್ದಕಗಳ ವ್ಯವಸ್ಥೆಯನ್ನು ಬೆಂಗಳೂರಿನ ಪರಿಣಿತ ತಂಡದವರು ನಿರ್ವಹಿಸಲಿದ್ದಾರೆ ಎಂದರು.
ಪ್ರತಿದಿನ ಸಂಜೆ 6 ಗಂಟೆಗೆ ಸಮಾರಂಭ ಆರಂಭವಾಗಲಿದ್ದು ನಾಡಿನ ವಿದ್ವಾಂಸರು,ಸಚಿವರು, ಸಂಸದರು, ಶಾಸಕರು,ವಿವಿಧ ಕ್ಷೇತ್ರಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ,23 ರಂದು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಯುವ ಹಿರಿಯ ವಿದ್ಯಾರ್ಥಿ ಸಮಾವೇಶವನ್ನೂ ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು.
ಸೆಪ್ಟೆಂಬರ್ 24 ರ ಬೆಳಗ್ಗೆ 11 ಗಂಟೆಗೆ ಶ್ರದ್ದಾಂಜಲಿ ಸಮಾರಂಭ ಗಣ್ಯಾತಿಗಣ್ಯರ ಲಕ್ಷಾಂತರ ಭಕ್ತ ಸಮುದಾಯದ ಉಪಸ್ಥಿತಿಗೆ ಸಾಕ್ಷಿಯಾಗಲಿರುವುದರ ಬಗ್ಗೆ ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401