ದಿನದ ಸುದ್ದಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ; 9,235 ಪುಟಗಳ ದೋಷಾರೋಪಣೆ ಪಟ್ಟಿ
ಸುದ್ದಿದಿನ ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ಎಸ್ಐಟಿ ತನಿಖಾ ತಂಡ ಮೊದಲನೇ 9,235 ಪುಟಗಳ ದೋಷಾರೋಪಣೆ ಪಟ್ಟಿಯನ್ನು ಶುಕ್ರವಾರ ವಿಶೇಷ ಕೆಸಿಒಸಿಎ (Karnataka Control of Organised Crime Act) ನ್ಯಾಯಾಲಯಕ್ಕೆ ಸಲ್ಲಿಸಿದೆ. ಪಟ್ಟಿಯಲ್ಲಿ 18 ಜನರ ಹೆಸರು ಉಲ್ಲೇಖಿಸಿದ್ದು, ಇದರಲ್ಲಿ ಈಗಾಗಲೇ 16 ಮಂದಿ ಬಂಧಿತರಾಗಿದ್ದಾರೆ. ಇವರೆಲ್ಲರೂ ಸನಾತನ ಸಂಸ್ಥೆಗೆ ಸೇರಿದವರು ಎಂದು ಹೇಳಿದೆ.
ಪತ್ರಕರ್ತೆ ಗೌರಿ ಕೊಲೆಯಾದ ಬಳಿಕ ವಿಶೇಷ ನ್ಯಾಯಾಲಯ ಸ್ಥಾಪಿತವಾಯಿತು. ಈ ಪ್ರಕರಣವನ್ನು ಮತ್ತಷ್ಟು ತನಿಖೆ ಮಾಡಲು ಎಸ್ಐಟಿಯು ಅನುಮತಿ ಕೋರಿತ್ತು. 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಮನೆ ಬಳಿ ಬೈಕ್ ಮೇಲೆ ಬಂದ ಅಪರಿಚಿತರಿಬ್ಬರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಚಾರ್ಜ್ ಶೀಟ್ ಸಲ್ಲಿಕೆಯಾದ ಎಂಟು ತಿಂಗಳ ನಂತರ ಪೊಲೀಸರು 650 ಪುಟಗಳ ಪ್ರಾಥಮಿಕ ವರದಿ ಸಲ್ಲಿದ್ದರು.
ಕೆಟಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಮತ್ತು ಪ್ರವೀಣ್ ಅಲಿಯಾಸ್ ಸುಚಿತ್ ಕುಮಾರ್ ವಿವಿಧ ಕಾಯ್ದೆಗಳಡಿ ಬಂಧಿಸಲಾಗಿತ್ತು. ನ್ಯಾಯವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಪ್ರತ್ಯಕ್ಷದರ್ಶಿಗಳು ಸೇರಿ 131 ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಿತ್ತು. ಇದು ಗೌರಿ ಲಂಕೇಶ್ ಕುಟುಂಬ ಸದಸ್ಯರು, ಶವಪರೀಕ್ಷೆ ನಡೆಸಿದ ವೈದ್ಯರು, ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳ ಹೇಳಿಕೆಗಳನ್ನು ಒಳಗೊಂಡಿದೆ.
ಎಸ್ಐಟಿ ವಾಸುದೇವ್ ಸೂರ್ಯವಂಶಿಯನ್ನು ಅಕ್ಟೋಬರ್‌ನಲ್ಲಿ ವಶಪಡಿಸಿಕೊಂಡಿತ್ತು. ಇದಕ್ಕೂ ಮೊದಲು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ನಾಲಸೊಪಾರ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿತ್ತು. ಗೌರಿ ಲಂಕೇಶ್ ಕೊಲೆಗೈದ ಅರೋಪಿಗಳಿಗೆ ಬೈಕ್ ನೀಡಿದ್ದ ಆರೋಪದಡಿ ಬಂಧುಸಲಾಗಿತ್ತು.
ಪುಣೆಯ ಅಮೋಲ್ ಕಾಲೆ, ಗೋವಾದ ಅಮಿತ್ ದೇಗ್ವೆಕರ್, ಸುಚಿತ್ ಕುಮಾರ್, ಕೆ.ಟಿ. ನವೀನ್ ಕುಮಾರ್, ಮೋಹನ್ ನಾಯಕ್, ಮನೋಹರ್ ಎಡೆವೆ, ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್, ರಾಜೇಶ್ ಬಂಗೇರ, ಭಾರತ್ ಕುರ್ನೆ ಮತ್ತು ಕರ್ನಾಟಕದ ಸುರೇಶ್ ಕುಮಾರನನ್ನು ಬಂಧಿತರಾಗಿದ್ದಾರೆ.