ದಿನದ ಸುದ್ದಿ

ಸ್ಮಾರ್ಟ್‍ಸಿಟಿ ಎಂದರೆ ಸಿಮೆಂಟ್, ಕಬ್ಬಿಣದ ಕಟ್ಟಡಗಳ ನಿರ್ಮಾಣವಲ್ಲ, ಅದು ಗ್ರೀನ್ ಸಿಟಿ : ಅನಂತ ಹೆಗಡೆ ಆಶೀಸರ

Published

on

ಸುದ್ದಿದಿನ,ದಾವಣಗೆರೆ : ಸ್ಮಾರ್ಟ್ ಸಿಟಿ ಎಂದರೆ ಸಿಮೆಂಟ್, ಕಬ್ಬಿಣದ ಕಟ್ಟಡಗಳ ನಿರ್ಮಾಣವಲ್ಲ. ಅದು ನೈಜವಾಗಿ ಹಸಿರುನಿಂದ ಕೂಡಿರುವ ನಗರ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸುಸ್ಥಿರ ಅಭಿವೃದ್ದಿಗೆ ಹಾಗೂ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾ.ಪಂ. ಮಟ್ಟಗಳಲ್ಲಿ ಈಗಾಗಲೇ ರಚನೆಯಾಗಿರುವ ಸಮಿತಿಗಳು ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ವರದಿ ಕೂಡ ನೀಡಿವೆ. ಈ ಕೆಲಸಗಳು ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕೆಂದರು.

ಮೇ 22 ನ್ನು ಜೀವ ವೈವಿಧ್ಯ ದಿನ ಎಲ್ಲೆಡೆ ಆಚರಿಸುವ ಮೂಲಕ ಆ ವರ್ಷದಲ್ಲಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ನೀಲನಕ್ಷೆಯನ್ನು ತಯಾರಿಸಿಕೊಂಡು ಜೀವ ವೈವಿಧ್ಯ ತಾಣಗಳನ್ನು ಪಂಚಾಯಿತಿ ಹಂತದಲ್ಲಿಯೇ ಗುರುತಿಸಿ ಸ್ಥಳೀಯ ಬೆಟ್ಟ, ಗುಡ್ಡ, ಕೆರೆಗಳನ್ನು ಅಭಿವೃದಿಪಡಿಸುವ ಮೂಲಕ ಜೀವ ವೈವಿಧ್ಯ ತಾಣಗಳನ್ನಾಗಿ ಮಾಡಬಹುದಾಗಿದೆ.

ಜೀವ ವೈವಿಧ್ಯತೆಗೆ ಪೂರಕವಾಗಿ ಬಯೋಗ್ಯಾಸ್ ತಯಾರಿಸುವ ಘಟಕಗಳನ್ನು ನಿರ್ಮಿಸಲು ಈಗಾಗಲೇ ತರಬೇತಿ ನೀಡಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸುಲಭವಾಗಲಿದ್ದು, ಸಾಕಷ್ಟು ಇಂಧನ ಕೂಡ ದೊರೆಯಲಿದೆ. ಹೋಟೆಲ್‍ಗಳು, ಹಾಸ್ಟೆಲ್‍ಗಳು ಕಲ್ಯಾಣ ಮಂಟಪಗಳಲ್ಲಿ ಉಳಿಯುವ ತ್ಯಾಜ್ಯಗಳಿಂದ ಬಯೋಗ್ಯಾಸ್ ಉತ್ಪಾದಿಸುವುದರಿಂದ ಪರಿಸರ ರಕ್ಷಣೆಗೂ ಅನುಕೂಲವಾಗಲಿದೆ ಎಂದರು.

ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಕೀಟ ನಾಶಕಗಳನ್ನು ಬಳಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಕೃಷಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಪ್ರಾಣಿ ಪಕ್ಷಿ ಸಂಕುಲ ಸತ್ತಾಗ ಅದಕ್ಕೆ ಕಾರಣ ಹುಡುಕಿ ಹೊರಟಾಗ ಈ ಕೀಟನಾಶಕಗಳು ಗೋಚರವಾಗುತ್ತದೆ. ಈಗಾಗಲೇ ಬ್ಯಾನ್ ಆಗಿರುವ ಕೀಟನಾಶಕಗಳು ಅಂಗಡಿಗಳಲ್ಲಿ ಮಾರಾಟವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದಾಗ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಬ್ಯಾನ್ ಆಗಿರುವ ಕೀಟ ನಾಶಕಗಳು ಮಾರಾಟವಾಗುತ್ತಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ನಿಷೇಧಿತ ಕೀಟ ನಾಶಕಗಳು ಬೇರೆ ಬ್ರಾಂಡ್ ಹಾಗೂ ಬೇರೆ ಹೆಸರುಗಳಿಂದ ಮಾರುಕಟ್ಟೆಗೆ ಬರುತ್ತವೆ. ಈ ಬಗ್ಗೆ ಗಮನ ಹರಿಸಬೇಕೆಂದರು.

ಇದರೊಂದಿಗೆ ಅರಣ್ಯ ಇಲಾಖೆಯವರು ಅರಣ್ಯ ಕೃಷಿಗೆ ಪ್ರೋತ್ಸಾಹ ನೀಡಬೇಕು. ಜಿ.ಪಂ ನವರು ನರೇಗಾ ಮೂಲಕ ಹೆಚ್ಚು ಹೆಚ್ಚು ಗಿಡಗಳನ್ನು ನೆಡಲು ಮುಂದಾಗಬೇಕು. ಇದರೊಂದಿಗೆ ತೋಟಗಾರಿಕೆ ಇಲಾಖೆಯವರು ಜೇನು ಸಾಕಾಣಿಕೆಗೆ ಹೆಚ್ಚು ಒತ್ತು ನೀಡಿದಲ್ಲಿ ಇದರಿಂದ ರೈತರಿಗೆ ಆದಾಯ, ಪರಿಸರ ರಕ್ಷಣೆ, ರೈತ ಬೆಳೆವ ಬೆಳೆಗೆ ಪರಾಗ ಸ್ಪರ್ಶ ಕ್ರಿಯೆಗೆ ಅನುಕೂಲವಾಗಲಿದೆ ಎಂದರು.

ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ಗುಡ್ಡಗಳ ಸುತ್ತ ಟ್ರಂಚ್ ನಿರ್ಮಿಸಿ ಅದರ ಬದುಗಳ ಮೇಲೆ ಗಿಡಗಳನ್ನು ಬೆಳೆಸಲಾಗುತ್ತಿದೆ. ಜಗಳೂರು ಹೊರ ವಲಯದಲ್ಲಿ ಹೆಚ್ಚಿನ ಅರಣ್ಯೀಕರಣ ಆಗುತ್ತಿದೆ. ಚನ್ನಗಿರಿಯ ದಾಗಿನಕಟ್ಟೆ, ದಿದ್ದಿಗಿ, ಹರಿಹರದ ಸಾರಥಿ ಈ ಪ್ರದೇಶಗಳಲ್ಲಿ ಹಸಿರನ್ನು ಕಾಪಾಡಿ, ನರೇಗಾ ಯೋಜನೆಯಡಿ ಹೆಚ್ಚೆಚ್ಚು ಗಿಡಗಳನ್ನು ಬೆಳೆಸಲಾಗುತ್ತಿದೆ.

ಕೇಂದ್ರ ಸರ್ಕಾರದ ದೀನ್ ದಯಾಳ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ಅರಣ್ಯ ಪ್ರದೇಶವನ್ನು ಗುರುತಿಸಿ, ಜಿ.ಪಂ ಗೆ ಪ್ರಶಸ್ತಿ ದೊರೆತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version