ದಿನದ ಸುದ್ದಿ

ಸದ್ದಿಲ್ಲದೆ ಬದಲಾಗುತ್ತಿದೆ ಮಕ್ಕಳ ಜೀವನ ; ನೀವೇ ಹೇಳಿ, ಈ ಬದುಕು ಸರೀನಾ?

Published

on

ಸಾಂದರ್ಭಿಕ ಚಿತ್ರ
  • ಕುಮಾರಸ್ವಾಮಿ ವಿ ಕೆ,ಪ್ರೌಢಶಾಲಾ ಮುಖ್ಯ ಶಿಕ್ಷಕರು,ಸಿದ್ಧಾರ್ಥ ಆಂಗ್ಲ ಶಾಲೆ,ಬೆಂಗಳೂರು ಉತ್ತರ

ಳೆದ ತಿಂಗಳು ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಹೀಗೆ ರಸ್ತೆಯಲ್ಲಿ ಸುತ್ತಾಡುವಾಗ ಒಂದಷ್ಟು ಹುಡುಗಿಯರ ಹಿಂಡು ಕಾಣಿಸಿತು. ಸಣ್ಣದೊಂದು ಟೀ ಅಂಗಡಿಯ ಮುಂದೆ ಒಬ್ಬಳಂತು ರಾಜಾರೋಷವಾಗಿ ನಿಂತು ಸಿಗರೇಟನ್ನು ಬಾಯಿಗೆ ಸಿಕ್ಕಿಸಿಕೊಂಡು ಉಗಿಬಂಡಿಯಂತೆ ನಿರಂತರವಾಗಿ ಹೊಗೆ ಬಿಡುತ್ತಿದ್ದಳು, ಮತ್ತೊಂದಷ್ಟು ಲಲನೆಯರು ಸಿಗರೇಟ್ ಸೇದಲು ಕಲಿಯಲು ಪರದಾಡುತ್ತಿದ್ದರು, ಇನ್ನೊಂದಷ್ಟು ಗುಂಪು ತಾವು ಸಿಗರೇಟ್ ಸೇದುವುದನ್ನು ಯಾರಾದರೂ ನೋಡಿಯಾರು ಎಂಬ ಆತಂಕದಲ್ಲೇ ಬಾಯಲ್ಲಿ ಹೊಗೆ ಬಿಡುತ್ತಿದ್ದರು. ಅವರ ಕೈಲಿದ್ದ ಪುಸ್ತಕಗಳು ಹೇಳುತ್ತಿದ್ದವು ಬಹುತೇಕ ಅವರೆಲ್ಲರೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು!! ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಮೊಳಕೆಗಳು ಚೆನ್ನಾಗೇ ಕಂಡವು!!

ಘಟನೆ -2 : ಅದೊಂದು ಸರಕಾರಿ ಕಾಲೇಜು, ಒಂದಷ್ಟು ಗಂಡು ಮಕ್ಕಳು ಕಾಲೇಜಿನ ಕಾಂಪೌಂಡ್ ಗೋಡೆಯ ಮೇಲೆ ಕುಳಿತು ಬುಸ್ಸೆಂದು ಬಾಯಿ ತುಂಬಾ ಹೊಗೆ ತುಂಬಿಕೊಂಡು ಸಿನಿಮಾ ಸ್ಟೈಲ್ ನಲ್ಲಿ ಬಿಡುತ್ತಿದ್ದರು. ಅಲ್ಲೇ ಓಡಾಡುತ್ತಿದ್ದ ಶಿಕ್ಷಕ ಮಹಾಷಯರು ನೋಡಿಯೂ ನೋಡದಂತೆ ತಲೆ ತಗ್ಗಿಸಿ ಮುಂದೆ ಸಾಗಿದರು. ಎರಡು ವರ್ಷಗಳ ಶಿಕ್ಷಣದ ಅಂತರ ಮಾಡಿರುವ ಅನಾಹುತಗಳ ಪೈಕಿ ಇವು ಒಂದೆರಡು ನಿದರ್ಶನಗಳು ಅಷ್ಟೇ.

ಹೌದು ಮಕ್ಕಳ ಲೋಕದಲ್ಲಿ ಇಂತಹ ಹತ್ತು ಹಲವು ತಲ್ಲಣಗಳು ಪ್ರಾರಂಭವಾಗಿವೆ. ಕಳೆದ ಎರಡು ವರ್ಷಗಳ ಕಾಲ ಕೊರೋನಾ ಕಾರಣದಿಂದ ಶಾಲೆಗಳು ಮುಚ್ಚಿದ್ದ ದಿನಗಳಲ್ಲಿ ಮಕ್ಕಳ ಮನಸ್ಥಿತಿ ಸಂಪೂರ್ಣ ಬದಲಿಸಿದೆ. ಅಂತಹ ಮಕ್ಕಳನ್ನು ಈಗ ಸಹಜ ಸ್ಥಿತಿಗೆ ತರುವುದು ಅತ್ಯಂತ ಪ್ರಾಯಾಸ ಹಾಗೂ ದೊಡ್ಡ ಮಟ್ಟದ ಸವಾಲಾಗಿದೆ.

ಹೆಚ್ಚಾಗಿದೆ ದುರ್ನಡತೆ

ಬಹುತೇಕ ಮಕ್ಕಳಲ್ಲಿ ಅವರ ವಯೋಮಾನಕ್ಕೆ ಮೀರಿದ ದುರ್ನಡತೆಗಳು ತಲೆದೋರುತ್ತಿವೆ. ಧೂಮಪಾನ, ಮದ್ಯಪಾನ, ಅಶ್ಲೀಲ ಚಿತ್ರಗಳ ವೀಕ್ಷಣೆ, ಸಮಾಜ ವಿರೋಧಿ ಕೃತ್ಯಗಳತ್ತ ಆಕರ್ಷಣೆ, ತಮಗಿಂತ ಕಿರಿಯ ವಯಸ್ಸಿನವರನ್ನು ಬೆದರಿಸುವುದು ಹೀಗೆ ಹಲವು ಭಾವನಾತ್ಮಕ ಸಮಸ್ಯೆಗಳು ಮಕ್ಕಳ ಪಾಲಿಗೆ ಮುಳ್ಳಾಗುತ್ತಿವೆ. ಈ ಹಂತದಲ್ಲಿ ಮಕ್ಕಳು ಸ್ವಲ್ಪ ಎಡವಿದರೂ ಅವರ ಭವಿಷ್ಯ ಅಲ್ಲೋಲ – ಕಲ್ಲೋಲವಾಗುವುದು‌ ನಿಶ್ಚಿತ. ಎಷ್ಟೋ ಶಾಲೆಗಳಲ್ಲಿ ಮಕ್ಕಳು ಚಾಕು, ಚೂರಿಗಳಂತ ಶಸ್ತ್ರಗಳನ್ನೂ ತರುತ್ತಿದ್ದಾರೆಂಬ ಮಾಹಿತಿ ಆತಂಕ ಮೂಡಿಸುತ್ತಿದೆ. ಇಂತಹ ಮಾನಸಿಕ ಅಸಮತೋಲನಗಳನ್ನು ಅತೀ ತುರ್ತಾಗಿ ಸರಿಪಡಿಸುವ ಕೆಲಸ ಆಗಬೇಕಿದೆ.

ಶಿಕ್ಷಣದ ಮೇಲೆ ಬಿದ್ದಿದೆ ಋಣಾತ್ಮಕ ಪರಿಣಾಮ

ಮಕ್ಕಳ ವರ್ತನೆಯಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳಿಂದ ಇದು ಶಿಕ್ಷಣದ ಮೇಲೂ ಸಹ ಋಣಾತ್ಮಕ ಪ್ರಭಾವ ಬೀರುತ್ತಿದೆ. ಸಹಜವಾಗಿಯೇ ಮಕ್ಕಳ ಸ್ಮರಣ ಶಕ್ತಿ ಕಡಿಮೆಯಾಗುತ್ತಿದ್ದು, ಶಿಕ್ಷಣದ ಮೇಲಿನ ಒಲವು ಕಡಿಮೆಯಾಗುತ್ತಿದೆ. ಮಕ್ಕಳು ತಮ್ಮ ಭವಿಷ್ಯದ ಗುರಿಗಳನ್ನು ಹೊಂದಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಆಸಕ್ತಿ, ಕುತೂಹಲ ಎಲ್ಲವೂ ಕ್ರಮೇಣ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯಿಂದ ಮಕ್ಕಳನ್ನು ಸಹಜ ಸ್ಥಿತಿಗೆ ತರುವುದು ಸವಾಲೇ ಸರಿ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಶಿಕ್ಷಣದ ಕನಿಷ್ಠ ಮೂಲಭೂತ ಪರಿಕಲ್ಪನೆಗಳಿಂದಲೂ ದೂರ ಉಳಿಯುತ್ತಿರುವುದು ಬಹು ದೊಡ್ಡ ತಲೆನೋವಾಗಿದೆ.

ವಿಧೇಯತೆಯ ಮಾತೇ ಇಲ್ಲ

ಸರ್ಕಾರ ಈಗಾಗಲೇ ಶಿಕ್ಷೆ ಇಲ್ಲದ ಶಿಕ್ಷಣ ನೀಡಬೇಕೆಂಬ ಕಾನೂನು ಮಾಡಿರುವುದರಿಂದ ಮಕ್ಕಳಲ್ಲಿ ವಿಧೇಯತೆ ತೀರಾ ಕಡಿಮೆಯಾಗಿದೆ. ಶಿಕ್ಷಕರಿಗೆ ಬೆತ್ತ ಹಿಡಿದು ಹೆದರಿಸುವ ಸಾಮಾನ್ಯ ಅಧಿಕಾರವನ್ನೂ ಮೊಟಕುಗೊಳಿಸಿರುವುದು ಮಕ್ಕಳ ಅವಿಧೇಯ ನಡುವಳಿಕೆಗಳ ಮತ್ತಷ್ಟು ಕುಮ್ಮಕ್ಕು ನೀಡಿದೆ. ಈ ಪರಿಣಾಮವಾಗಿ ಅನೇಕರು ಬಾಲಾಪರಾಧಿಗಳಾಗುತ್ತಿದ್ದಾರೆ. ವಿಚಿತ್ರವೆಂದರೆ ಶಿಕ್ಷಕರೇ ಮಕ್ಕಳ ಅವಿಧೇಯ ನಡವಳಿಕೆಗಳಿಂದ ಬೆಚ್ಚಿ ಬೀಳುವಂತಾಗಿದೆ. ಏರು ಧ್ವನಿಯಲ್ಲಿ ಪ್ರತ್ಯುತ್ತರ, ಶಿಕ್ಷಕರ ಮಾತಿಗೆ ಅಗೌರವ ತೋರುವುದು, ತೋರ್ಪಡಿಕೆಯ ಗೌರವಗಳು ಸಹಜವಾಗಿ ಮಕ್ಕಳನ್ನು ಕಾಡುತ್ತಿವೆ. ಹಿಂದಿನ ಶಿಕ್ಷಣದಲ್ಲಿದ್ದ ಭಯ ಮತ್ತು ಗೌರವಗಳನ್ನು ಒಂದರ್ಥದಲ್ಲಿ ಇಂದಿನ ಕಾನೂನುಗಳೇ ಮುರಿಯುವಂತಾಗಿದೆ!

ಮೊಬೈಲ್‌ ಎಂಬ ಪೆಡಂಭೂತ

ಮಕ್ಕಳಲ್ಲಿ ಕಂಡುಬರುತ್ತಿರುವ ಬಹುತೇಕ ಅಸಹಜ ನಡವಳಿಕೆಗಳಿಕೆ ಮೊಬೈಲ್ ಎಂಬ ಮಾಯಾ ಪೆಟ್ಟಿಗೆಯ ಕಾರಣ ಹೆಚ್ಚಾಗಿದೆ. ಕ್ಷಣ ಮಾತ್ರವೂ ಮೊಬೈಲನ್ನು ಬಿಟ್ಟಿರದಂತಹ ಸ್ಥಿತಿಯನ್ನು ಅನೇಕ ಮಕ್ಕಳು ತಲುಪಿದ್ದಾರೆ. ಮಕ್ಕಳ ಕೈಲಿ ಮೊಬೈಲ್ ಇದೆ ಎಂದರೆ ಅಲ್ಲಿ ಪೋಷಕರ ಕಣ್ಣಿದ್ದರೆ ಮಾತ್ರ ಕೆಲವು ಋಣಾತ್ಮಕ ಬೆಳವಣಿಗೆಗಳನ್ನು ತಡೆಯಲು ಸಾಧ್ಯ.

ನೂರು ಜನ ವಿದ್ಯಾರ್ಥಿಗಳನ್ನು ಸರಿದಾರಿಗೆ ತರಲು ಒಬ್ಬ ಶಿಕ್ಷಕ ಪ್ರಯತ್ನಿಸುತ್ತಿರುವ ವೇಳೆ, ಅದೇ ನೂರು ಜನರನ್ನು ಕೇವಲ ಒಂದು ಮೊಬೈಲ್‌ ಫೋನ್ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿದೆ! ಅಷ್ಟೇ ಅಲ್ಲದೆ ಎಲ್ಲಕ್ಕೂ ಮೊಬೈಲ್ ಮೇಲೆಯೇ ಅವಲಂಬಿಸುತ್ತಿರುವುದು ಮಕ್ಕಳ ಸಹಜ ಯೋಚನಾ ಶಕ್ತಿಯನ್ನು ಕ್ಷೀಣಿಸುತ್ತಿದೆ.

ಈ ಅಭ್ಯಾಸದಿಂದ ಮಕ್ಕಳನ್ನು ಬಿಡಿಸಲು ಪೋಷಕರು ಅನ್ಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಅದೇ ಮೊಬೈಲನ್ನು ಬಳಸಿ ಮಗುವನ್ನು ಕ್ರಿಯಾತ್ಮಕವಾಗಿಸುವ ಹಾದಿಯಲ್ಲಿ ತೆರಳಬಹುದಾಗಿದೆ. ಒಂದೆರಡು ಅಂಕಗಳು ಕಡಿಮೆಯಾದರೂ ಪರವಾಗಿಲ್ಲ, ಜೀವನದ ತತ್ವಗಳು ಕ್ಷೀಣಿಸಬಾರದು. ಇರುಳು ಕಂಡ ಬಾವಿಗೆ ಹಗಲಿನಲ್ಲಿ ಮಕ್ಕಳನ್ನು ತಳ್ಳಬಾರದು. ನೆನಪಿರಲಿ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಕೇವಲ ಮಕ್ಕಳ ಜೀವನಕ್ಕಷ್ಟೇ ಅಲ್ಲ, ಜೀವಕ್ಕೂ ಮಾರಕವಾಗಬಹುದು.

ಬೇಕಿದೆ ನೈತಿಕ ಶಿಕ್ಷಣ

ಶಾಲಾ ಕಾಲೇಜುಗಳಲ್ಲಿ ಇಂದು ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯತೆ ಅಗತ್ಯವಾಗಿದೆ. ಪ್ರಸ್ತುತ ಸಮಾಜವು ದಿಕ್ಕು ತಪ್ಪಲು ಇಂದು ಹೆಚ್ಚಾಗಿ ಯುವ ಜನತೆಯೇ ಕಾರಣವಾಗುತ್ತಿರುವುದರಿಂದ ಮಕ್ಕಳಿಗೆ ಬಾಲ್ಯದಲ್ಲೇ ತಿಳುವಳಿಕೆ ನೀಡಿದಾಗ ಇಂತಹ ಆತಂಕಗಳನ್ನು ಕ್ರಮೇಣ ಕಡಿಮೆಗೊಳಿಸಲು ಸಾಧ್ಯ. ಕೆಲವು ಮಕ್ಕಳಿಗಂತೂ ತಾವೇನು ಮಾಡುತ್ತಿದ್ದೇವೆ, ತಮ್ಮ ನಡೆ ಸರಿಯೋ ತಪ್ಪೋ ಎಂಬ ಅರಿವೂ ಸಹ ಆಗುತ್ತಿಲ್ಲ.

ಅಂತಹ ಮಕ್ಕಳನ್ನು ಶೀಘ್ರವಾಗಿ ಗುರುತಿಸಿ ಅವರನ್ನು ವೈಯಕ್ತಿಕವಾಗಿ ತಿದ್ದುವ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಮುಂದಿನ ಕ್ರೂರ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾತ್ರಧಾರಿಗಳಾಗಬೇಕಿದೆ! ನೈತಿಕ ಶಿಕ್ಷಣವು ಸಾಂಪ್ರದಾಯಿಕ ಶಿಕ್ಷಣದ ಒಂದು ಪ್ರಮುಖ ಭಾಗವಾಗಬೇಕಿದೆ. ಮಗುವನ್ನು ಕೇವಲ ಅಂಕ ಗಳಿಕೆಯ ಯಂತ್ರವನ್ನಾಗಿಸದೆ, ಅದನ್ನು ಸರಿಯಾದ ಕ್ರಮದಲ್ಲಿ ಸಮಾಜಕ್ಕೆ ಪರಿಚಯಿಸುವ ತಂತ್ರಗಳನ್ನು ಹೆಣೆಯಬೇಕಿದೆ.

ಪೋಷಕರ ನಿಗಾ ತುಂಬಾ ಅಗತ್ಯ

ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ತಮ್ಮ ಮಕ್ಕಳ ನಡವಳಿಕೆಗಳನ್ನು ಗಮನಿಸುವುದು ಎಲ್ಲಾ ಪೋಷಕರ ಆದ್ಯ ಕರ್ತವ್ಯವಾಗಿದೆ. ಆದರೆ ಆಧುನಿಕ ಜೀವನ ಶೈಲಿಯ ನಡುವೆ ಪೋಷಕರು ಕೇವಲ ದುಡಿಯುವ ಯಂತ್ರದಂತಾಗುತ್ತಿದ್ದಾರೆ. ತಮ್ಮ ಮಕ್ಕಳಲ್ಲಾಗುತ್ತಿರುವ ಕನಿಷ್ಠ ಋಣಾತ್ಮಕ ನಡವಳಿಕೆಗಳನ್ನು ಗುರುತಿಸುವಲ್ಲಿ ಹೆಚ್ಚು ಪೋಷಕರು ವಿಫಲವಾಗುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ, ಪಠ್ಯ ವಸ್ತು ಹಾಗೂ ಪೋಷಕರ ನಡುವಿನ ಸಂಬಂಧಗಳು ಸರಿಯಾದ ಪ್ರಮಾಣದಲ್ಲಿ ಮಿಶ್ರಣವಾಗದ ಹೊರತು ನಿರೀಕ್ಷಿತ ಫಲಗಳನ್ನು ಪಡೆಯಲು ಸಾಧ್ಯವಿಲ್ಲ.

ಹೀಗಾಗಿ ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಾಯಂದಿರು ಈ ಬಗ್ಗೆ ಹೆಚ್ಚಿನ ಆಸ್ತೆ ವಹಿಸಬೇಕಿದೆ. ಸುಮಾರು ಮಂದಿ ಪೋಷಕರು ಎಲ್ಲದಕ್ಕೂ ಶಾಲೆಯನ್ನೇ ಹೊಣೆ ಮಾಡುವ ಚಾಳಿ ಮುಂದುವರಿಸುವುದರಿಂದ ತಮ್ಮ ಮಕ್ಕಳ ತಪ್ಪುಗಳನ್ನು ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ.

ಎಲ್ಲ ಶಿಕ್ಷಕರ ಸಂಯೋಜನೆ

ಶಾಲೆಗಳಲ್ಲಿ ಮಕ್ಕಳ ಮನೋವಿಕಾಸದ ನಿಮಿತ್ತ ಆಗುತ್ತಿರುವ ಬದಲಾವಣೆಗಳನ್ನು ಸರಿಪಡಿಸುವಲ್ಲಿ ಎಲ್ಲಾ ಶಿಕ್ಷಕರ ಸಂಯೋಜನೆ ಅತ್ಯಗತ್ಯ. ಮಕ್ಕಳ ನಡವಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಅದಕ್ಕೆ ಸೂಕ್ತ ಪರಿಹಾರ ಒದಗಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಹಡಗನ್ನು ಮುನ್ನಡೆಸುವ ನಾವಿಕನಂತಿರುವ ಶಿಕ್ಷಕರು ಬಾಲ್ಯದಲ್ಲೇ ಬೇಡದ ಚಟುವಟಿಕೆಗಳನ್ನು ಚಿವುಟಿದಾಗ ಮಾತ್ರ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯ.

ಆತ್ಮಹತ್ಯೆಯ ಬೆದರಿಕೆಗಳು

ತಮ್ಮ ಪೋಷಕರನ್ನು ಬೆದರಿಸಲೆಂದು ಅಥವಾ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಲ್ಲಿ ಅಸಮತೋಲನ ಏರ್ಪಟ್ಟಾಗ ಸುಮಾರು ಮಕ್ಕಳು ತಮ್ಮ ಪೋಷಕರಿಗೆ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಭಯ ಹುಟ್ಟಿಸುವ ನಿದರ್ಶನಗಳೂ ಇವೆ. ಮಕ್ಕಳನ್ನು ಮಕ್ಕಳಂತೆಯೇ ನೋಡುವ ಮನೋಭಾವವನ್ನು ತೊರೆದರ ಪರಿಣಾಮ ಇದಾಗಿದೆ. ಯಾರಿಗೆ ಕಷ್ಟಗಳ ಅರಿವು ಆಗುವುದಿಲ್ಲವೋ, ಓದುವ ವೇಳೆ ಎಲ್ಲ ಸೌಕರ್ಯಗಳು ಕ್ಷಣಮಾತ್ರದಲ್ಲಿ ಸಿಗುತ್ತಿವೆಯೋ ಅಂತಹ ಮಕ್ಕಳ ಭಾವನಾತ್ಮಕ ಆಲೋಚನೆಗಳು ಮಿತಿ ಮೀರುತ್ತಿವೆ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆತ್ತವರು ಮಾತ್ರ ನಿರಾಳವಾಗಿ ಸಾಗುತ್ತಿದ್ದಾರೆ.

(ಕುಮಾರಸ್ವಾಮಿ ವಿ ಕೆ
ಪ್ರೌಢಶಾಲಾ ಮುಖ್ಯ ಶಿಕ್ಷಕರು
ಸಿದ್ಧಾರ್ಥ ಆಂಗ್ಲ ಶಾಲೆ
ಬೆಂಗಳೂರು ಉತ್ತರ
ಮೊ : 9113906120)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version