ದಿನದ ಸುದ್ದಿ

ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ

Published

on

ಸುದ್ದಿದಿನ,ದಾವಣಗೆರೆ:ಸೌಜನ್ಯ ಸಾವಿಗೆ ಕಾರಣರಾದ ಪಾಪಿಗಳನ್ನು ಕೂಡಲೇ ಬಂಧಿಸಬೇಕು. ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ‘ಹೆಗಡೆ’ ಕುಟುಂಬ ಆರೋಪ ಮುಕ್ತರಾಗುವವರೆಗೂ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ ಒತ್ತಾಯಿಸಿದರು.

ಸೌಜನ್ಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪಿಗಳನ್ನು ಬಂಧಿಸುವಂತೆ, ಹಾಗೂ ಸಮೀರ್ ಎಂಬ ಯೂಟ್ಯೂಬರ್‌ಗೆ ರಕ್ಷಣೆ ನೀಡುವಂತೆ ಮತ್ತು ಸಂತೋಷ್‌ರಾವ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕೋರಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿ ಅವರು ಮಾತನಾಡಿದರು.

ಸೌಜನ್ಯ ಸಾವಿನ ಮರುತನಿಖೆಯೊಂದಿಗೆ ಸುಮಾರು 20-30 ವರ್ಷಗಳಿಂದ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅಸಹಜ ಸಾವು, ಕೊಲೆ, ಅತ್ಯಾಚಾರಗಳನ್ನು ಮರುತನಿಖೆಗೆ ಒಳಪಡಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ಲಕ್ಷö್ಯತೆ ಹಾಗೂ ಸೌಜನ್ಯ ಸಾವಿಗೆ ಕಾರಣರಾದ ಪಾಪಿಗಳು ಮತ್ತು ಇವರಿಗೆ ಬೆಂಬಲವಾಗಿ ನಿಂತಿರುವ ಪ್ರತಿಷ್ಠಿತರ ಮುಖವಾಡಗಳನ್ನು ಕಳಚುವ ನಿಟ್ಟಿನಲ್ಲಿ ಕರ್ನಾಟಕದ ಹೃದಯ ಭಾಗವಾದ ದಾವಣಗೆರೆಯಿಂದಲೇ ನಾಡಿನಾದ್ಯಂತ ಜನಾಂದೋಲನ ರೂಪಿಸಲಾಗುವುದು.

ಸಮೀರ್ ಎಂಬ ಯುವಕ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವನ ವಸ್ತುನಿಷ್ಠ ತನಿಖೆಯನ್ನು ದಾರಿ ತಪ್ಪಿಸುವ ಮತ್ತು ಕೋಮುವಾದಿ ಬಣ್ಣ ಬಳಿಯುವ ಪ್ರಯತ್ನಕ್ಕೆ ಕೆಲವು ಕೋಮುಕ್ರಿಮಿಗಳು ಹರಸಾಹಸ ಪಡುತ್ತಿವೆ. ಹಿಂದೂ ಸಮುದಾಯ ಎನ್ನುವುದಕ್ಕಿಂತ ಒಂದು ಹೆಣ್ಣು ಎಂಬ ಅಂತಃಕರಣದಿಂದ ತನ್ನ ಬದುಕನ್ನೆ ಲೆಕ್ಕಿಸದೆ ಇಂತಹ ಸಾಹಸಕ್ಕೆ ಮುಂದಾಗಿರುವ ಯುವಕನ ಬೆಂಬಲಕ್ಕೆ ನಾವು ಧರ್ಮತೀತವಾಗಿ ನಿಂತಾಗಲೇ ಮಾನವೀಯತೆಗೆ ಅರ್ಥ ಬರಲು ಸಾಧ್ಯ.

ಆದ್ದರಿಂದ ದಾವಣಗೆರೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ಸಮೀರ್ ಜೊತೆಗಿದ್ದು, ಆ ಯುವಕನಿಗೆ ಯಾವುದೇ ರೀತಿಯ ಹಲ್ಲೆಯಾಗದಂತೆ, ಸಮೀರ್ ಹಾಗೂ ಆತನ ಕುಟುಂಬಕ್ಕೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಆಗ್ರಹಿಸುತ್ತೇವೆ. ಇದರ ಹೊರತಾಗಿ ಸಮೀರ್ ಹಾಗೂ ಅವನ ಕುಟುಂಬಕ್ಕೆ ಯಾವುದೇ ಅನ್ಯಾಯವಾದರೂ ಅದರ ನೇರ ಹೊಣೆಯನ್ನು ಸಿದ್ಧರಾಮಯ್ಯನ ಸರ್ಕಾರವೇ ಹೋರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಸೌಜನ್ಯ ಕೊಲೆ ಹಾಗೂ ಅತ್ಯಾಚಾರದಲ್ಲಿ ಪೊಲೀಸರ ಕುತಂತ್ರದಿಂದಾಗಿ ಸಂತೋಷ್‌ರಾವ್ ಸುಮಾರು 11 ವರ್ಷಗಳ ಕಾಲ ಜೈಲಿನಲ್ಲಿ ಮಾನಸಿಕ ಯಾತನೆ ಅನುಭವಿಸಿದ್ದಾರೆ. ಅವನ ಕುಟುಂಬ ಸಮಾಜದಲ್ಲಿ ತಲೆಎತ್ತಿ ನಡೆಯದಂತ ಅಪಮಾನಕ್ಕೆ ಗುರಿಯಾಗಿದೆ. ಹೀಗಾಗಿ ಪೋಲಿಸರ ಈ ನಿರ್ಲಕ್ಷö್ಯ ಅದು ಸರ್ಕಾರದ ನಿರ್ಲಕ್ಷö್ಯವೂ ಹೌದು. ಆದ್ದರಿಂದ ಸಂತೋಷ್‌ರಾವ್ ಕುಟುಂಬಕ್ಕೆ ಕೂಡಲೇ ಸರ್ಕಾರ ಸೂಕ್ತ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಬಿ.ರುದ್ರಗೌಡ ಗೋಪನಾಳ್, ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಡಾ.ಕೆ.ಎ.ಓಬಳೇಶ್ ಹಾಗೂ ಇತರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version