ಸಿನಿ ಸುದ್ದಿ
ಟಾಕೀಸ್ ಸಿನಿವಾರದಲ್ಲಿ– ‘ಸ್ಪಾಟ್ ಲೈಟ್’ ಚಿತ್ರ ಪ್ರದರ್ಶನ ಮತ್ತು ಸಂವಾದ
ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ವಿಶ್ವ ಪತ್ರಿಕೋದ್ಯಮ ದಿನದ ಅಂಗವಾಗಿ2015ರಲ್ಲಿ ತೆರೆಕಂಡ ತನಿಕಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸ್ಪಾಟ್ ಲೈಟ್ ಇಂಗ್ಲೀಷ್ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾ ಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 06-07-2019ರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ಸ್ಪಾಟ್ ಲೈಟ್ ಚಿತ್ರ ಆರಂಭವಾಗುವುದು 1976ರ ಒಂದು ಘಟನೆಯಿಂದ. ಅಮೇರಿಕಾದ ಬೋಸ್ಟನ್‍ನ ಒಂದು ಪೋಲಿಸ್ ಠಾಣೆಯಲ್ಲಿ ಒಂದೆಡೆ ನಾಲ್ಕು ಮಕ್ಕಳು ಮತ್ತು ಅವರ ತಾಯಿ ಕುಳಿತಿದ್ದರೆ ಇನ್ನೊಂದು ಕೋಣೆಯಲ್ಲಿ ಅ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಕಿದ ಒಬ್ಬ ಪಾದ್ರಿ ಕುಳಿತಿರುತ್ತಾನೆ. ಪೋಲಿಸ್ ಅಧಿಕಾರಿಗಳು ಮತ್ತು ಡಿಸ್ಟ್ರಿಕ್ಟ್ ಅಟಾರ್ನಿ ಸೇರಿ ಪಾದ್ರಿಯನ್ನು ಬಿಡುಗಡೆಗೊಳಿಸಿ ಆ ಘಟನೆಯನ್ನು ಅಲ್ಲಿಯೇ ಮುಚ್ಚಿಹಾಕಲಾಗುತ್ತದೆ.2001ರಲ್ಲಿ ಬೋಸ್ಟನ್ ಗ್ಲೋಬ್ ಪತ್ರಿಕೆಗೆ ಹೊಸ ಸಂಪಾದಕ ನೇಮಕಗೊಳ್ಳುತ್ತಾನೆ. ಆ ಪತ್ರಿಕೆಯ ತನಿಕಾ ಪತ್ರಿಕೋದ್ಯಮದಲ್ಲಿ ನಿರತವಾಗಿರುವ ತಂಡವಿದೆ. ಅದುವೇ ಸ್ಪಾಟ್‍ಲೈಟ್ ತಂಡ. 1976ರ ಘಟನೆ ಸರಿಯಾದ ಫಾಲೋಅಪ್ ಆಗಿಲ್ಲವಾದುದ್ದರಿಂದ ಆ ವಿಷಯನ್ನು ಕೈಗೆತ್ತಿಕೊಳ್ಳುವಂತೆ ಹೊಸ ಸಂಪಾದಕ ಸ್ಪಾಟ್‍ಲೈಟ್ ತಂಡಕ್ಕೆ ಸೂಚಿಸುತ್ತಾನೆ.
ಮುಂದಿನ ಘಟನಾವಳಿಯನ್ನು ಚಿತ್ರ ಪ್ರೇಕ್ಷಕನ ಮುಂದೆ ಅತ್ಯುತ್ತಮವಾಗಿ ನಿರ್ದೇಶಕ ಟಾಮ್‍ಮ್ಯಾಕ್‍ಕಾರ್ಟಿ ತೆರೆದಿಟ್ಟಿದ್ದಾರೆ. ಚಿತ್ರವು 2015ರ ಅತ್ಯುತ್ತಮ ಚಿತ್ರ ಜೊತೆಗೆ 150ಕ್ಕೂ ಹೆಚ್ಚು ಪ್ರಶಸ್ತಿ ಮತ್ತು ನಾಮಿನೇಶನ್ ಗಳನ್ನು ಪಡೆದ ಚಿತ್ರವೆಂಬ ಹೆಗ್ಗಳಿಕೆ ಪಡೆದು ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಚಿತ್ರದ ಒಟ್ಟು ಅವಧಿ 129 ನಿಮಿಷಗಳು. ಚಿತ್ರಕ್ಕೆ ಇಂಗ್ಲೀಷ್ ಸಬ್‍ಟೈಟಲ್ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243