ದಿನದ ಸುದ್ದಿ
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ಅಧ್ಯಕ್ಷ ಗೋಟಬಯ ರಾಜಪಕ್ಸ ಇದೇ 13ರಂದು ರಾಜೀನಾಮೆಗೆ ನಿರ್ಧಾರ
ಸುದ್ದಿದಿನ ಡೆಸ್ಕ್ : ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಆಕ್ರೋಶಗೊಂಡಿರುವ ಅಲ್ಲಿನ ನಾಗರಿಕರು ಅಧ್ಯಕ್ಷರು ಹಾಗೂ ಪ್ರಧಾನಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ದೇಶದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಅಧ್ಯಕ್ಷ ಗೋಟಬಯ ರಾಜಪಕ್ಸ ಇದೇ 13 ರಂದು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಪ್ರಧಾನಮಂತ್ರಿ ಸ್ಥಾನಕ್ಕೆ ರನಿಲ್ ವಿಕ್ರಮ ಸಿಂಘೆ ರಾಜೀನಾಮೆ ಘೋಷಿಸಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, ರಾಜಧಾನಿ ಕೊಲಂಬೋದಲ್ಲಿ ಕೆಲವು ತಿಂಗಳಿಂದ ಅಧ್ಯಕ್ಷರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಅಧ್ಯಕ್ಷರ ಭವನಕ್ಕೆ ಪ್ರತಿಭಟನಾಕಾರರು ನಿನ್ನೆ ಮುತ್ತಿಗೆ ಹಾಕಿರುವುದಲ್ಲದೆ, ಪ್ರಧಾನಮಂತ್ರಿ ಅವರ ನಿವಾಸದ ಮೇಲೂ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರಾಗಲಿ, ಪ್ರಧಾನಮಂತ್ರಿಯವರಾಗಲಿ ತಮ್ಮ ಅಧಿಕೃತ ನಿವಾಸದಲ್ಲಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಶ್ರೀಲಂಕಾ ಲೋಕಸಭಾಧ್ಯಕ್ಷ ಮಹಿಂದ ಅಭಯ್ ವರ್ಧನ, ಈ ವಿಷಯ ತಿಳಿಸಿದ್ದು, ಕಾನೂನನ್ನು ಗೌರವಿಸಿ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಶ್ರೀಲಂಕಾದ ಜನರು ಹಣದುಬ್ಬರ, ಇಂಧನ, ಔಷಧ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ 70 ವರ್ಷಗಳಲ್ಲಿ ಶ್ರೀಲಂಕಾ ಇದೇ ಮೊದಲ ಬಾರಿಗೆ ಈ ರೀತಿಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಮಧ್ಯೆ ಶ್ರೀಲಂಕಾದಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆ ಅಧ್ಯಕ್ಷ ಗೋಟಬಯ ರಾಜಪಕ್ಸ ಅಧಿಕೃತ ನಿವಾಸ ಬಿಟ್ಟು ತೆರಳಿದ್ದಾರೆ. ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಅವರು ಬೇರೆಡೆಗೆ ಸ್ಥಳಾಂತಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243