ದಿನದ ಸುದ್ದಿ
ಮನಸ್ಸಿನ ಮತ್ತು ಸಮಾಜದ ಕೊಳೆ ತೆಗೆಯುವವರು ಮಡಿವಾಳರು : ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ
ಸುದ್ದಿದಿನ,ದಾವಣಗೆರೆ : ಸಮಾಜದ ಎಲ್ಲ ಕಟ್ಟುಪಾಡುಗಳನ್ನು ಮೀರಿ ಮನಸ್ಸಿನ ಮತ್ತು ಸಮಾಜದ ಕೊಳೆ ಹಾಗೂ ಸೂತಕದ ಛಾಯೆಯನ್ನು ತೆಗೆಯುವವರು ಮಡಿವಾಳರು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ನುಡಿದರು.
ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರವರ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ಅವರು ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ಪ್ರತಿಯೊಂದು ಸಮಾಜದಲ್ಲೂ ಅದರದ್ದೇ ಆದ ಕಟ್ಟುಪಾಡುಗಳು, ಸಂಪ್ರದಾಯ, ಆಚರಣೆಗಳಿರುತ್ತವೆ ಆದರೆ ಎಲ್ಲವನ್ನು ಮೀರಿ ಮುನ್ನುಗ್ಗಿ ಮಡಿ ಕಾಯಕದಲ್ಲಿ ತೊಡಗಿದವರು ಮಡಿವಾಳರು ಎಂದರು.
ಸಮಾಜಕ್ಕೆ ಸಂಘಟನೆ ಮುಖ್ಯ. ಸಂಘಟನೆಯಿಂದ ಉತ್ತಮ ಸೇವೆ ಕೊಡಲು ಸಾಧ್ಯ. ನಾವು ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಶಿಕ್ಷಣ ನೀಡಿ ಸತ್ಪ್ರಜೆಯಾಗಿ ಬೆಳೆಯುವಂತೆ ಮಾಡಬೇಕೆಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ ಎಂದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿ ಸಮಾನತೆ ಮತ್ತು ಐಕ್ಯತೆಯನ್ನು ಸಾರಿದ್ದರು. ತಮ್ಮ ವಚನ ಸಾಹಿತ್ಯದ ಮೂಲಕ ಅತ್ಯಂತ ಸರಳವಾಗಿ ಎಲ್ಲರೂ ಸಮಾನರು ಎಂದು ತಿಳಿಸಿದ್ದಾರೆ.
ಶಿಕ್ಷಣದಿಂದ ಮಾತ್ರ ಸಮಾನತೆ ಸಾಧ್ಯವಾಗಿದ್ದು ನಮ್ಮ ಮುಂದಿನ ಪೀಳಿಗೆಯು ಇದನ್ನು ಅರಿತು, ಬಸವಣ್ಣ, ಮಾಚಿದೇವರಂತಹ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಮಡಿವಾಳ ಎಂದರೆ ಶುದ್ದಪಡಿಸುವುದು. ಎಲ್ಲ ಸಮಾಜದಲ್ಲಿ ನಿರ್ಬಂಧಗಳು ಸಹಜವಾಗಿದ್ದು ಈ ನಿರ್ಬಂಧಗಳನ್ನು ಮೀರಲು ಶಿಕ್ಷಣ ಅಗತ್ಯವಾಗಿದ್ದು, ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.
ಮಡಿವಾಳ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷರಾದ ಎಚ್.ಜಿ.ಉಮೇಶ್ ಮಾತನಾಡಿ, ಮಡಿವಾಳ ಮಾಚಿದೇವರು ಬಸವಣ್ಣನವರ ಬಲಗೈ ಭಂಟನಾಗಿದ್ದು, ವಚನ ಸಾಹಿತ್ಯದ ಭಂಡಾರವನ್ನು ಜನರಲ್ಲಿ ಸಾರಿ, ಸಂರಕ್ಷಣೆ ಮಾಡುವುದರ ಜೊತೆಗೆ ಮನುಕುಲದ ಬಟ್ಟೆಯಲ್ಲಿರುವ ಕೊಳೆಯನ್ನು ತೆಗೆಯುವುದರ ಜೊತೆಗೆ ಮನುಷ್ಯನ ಮನಸ್ಸಿನ ಕೊಳೆಯನ್ನು ತೆಗೆಯುವ ಪ್ರಯತ್ನ ಮಾಡಿದರು ಎಂದು ಹೇಳಿದರು.
ಶರಣರ ಸಾಹಿತ್ಯವನ್ನು ಅಳವಡಿಸಿಕೊಂಡವರ ಬಟ್ಟೆಯನ್ನು ಮಾತ್ರ ಮಡಿ ಮಾಡಿ ಕೊಡುತ್ತೇನೆ. ಸಮಾಜಕ್ಕೆ ಮಾರಕವಾಗಿರುವವರ ಬಟ್ಟೆ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವರು ಅವರು ಎಂದರು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಸಧೃಡವಾಗಿಸಲು ಸಾಧ್ಯ. ಸುಶಿಕ್ಷತರಾದಲ್ಲಿ ಸರ್ಕಾರಿಂದ ಸಿಗುವ ಸೌಲಭ್ಯವನ್ನು ಪಡೆಯಬಹುದು ಎಂದು ಹೇಳಿದರು.
ಇದೇ ವೇಳೆ ಕ್ಯಾನ್ಸರ್ ರೋಗಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕೆಂದು ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ದಾವಣಗೆರೆ ನಿಟುವಳ್ಳಿಯ ಗಣೇಶ್ ಪೂಜಾರಯ್ಯ ಇವರಿಗೆ ಜಿ.ಪಂ. ಅಧ್ಯಕ್ಷೆ ಕೆ.ವಿ.ಶಾಂತಕುಮಾರಿಯವರು ಸನ್ಮಾನಿಸಿದರು ಹಾಗೂ ಸಮಾಜದ ಎಲ್ಲಾ ಮುಖಂಡರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್‍ನಾಯ್ಕ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಉಪಾಧ್ಯಕ್ಷರುಗಳಾದ ಪುವಾಂಡ ಮಂಜುನಾಥ, ಪಿ.ಮಂಜುನಾಥ, ವಿಜಯ್ ಕುಮಾರ್, ಖಜಾಂಚಿ ಸುರೇಶ್, ತಾಂತ್ರಿಕ ಸಲಹೆಗಾರ ಎಂ.ಎನ್.ನಾಗರಾಜ, ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ್, ಸಮಾಜದ ಮುಖಂಡರುಗಳಾದ ರುದ್ರೇಶ್, ಗುಡ್ಡಪ್ಪ, ಎಚ್.ದುಗ್ಗಪ್ಪ, ರವಿಚಿಕ್ಕಣ್ಣ, ಸತೀಶ್ ಎಂ.ವೈ, ಅಜೇಯ, ಪರಶುರಾಮ, ಕಿಶೋರ್ ಕುಮಾರ್, ರೇವಣಪ್ಪ, ವಿಜಯ್ ಕುಮಾರ್, ನಾಗಪ್ಪ, ಮಹಿಳಾ ಸಂಘದ ನಾಗಮ್ಮ, ಚಂದ್ರಕಲಾ, ಎಂ.ಕೆ.ಲಕ್ಷ್ಮಿ, ಸುಮಿತ್ರಾ, ರತ್ನಕ್ಕ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243