ದಿನದ ಸುದ್ದಿ
ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ
ಸುದ್ದಿದಿನ,ದಾವಣಗೆರೆ:ದಾವಣಗೆರೆಯ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆ, ದಾವಣಗೆರೆ ದಕ್ಷಿಣದ ಜನರಿಗೆ, ವಿಶೇಷವಾಗಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ, ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸಲು ಮುಂದಾಗಿದೆ.
ಇಂದು ಸಂಜೆ ಶಾಸಕರು, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿ ಮಾತನಾಡಿ ಈಗಾಗಲೇ ಹೊರರೋಗಿಗಳ ವಿಭಾಗ, ಡಯಾಲಿಸಿಸ್ ಕೇಂದ್ರ ಸೇರಿದಂತೆ ವಿವಿಧ ಆರೋಗ್ಯ ಸೇವೆಯನ್ನು ನೀಡುತ್ತಿರುವ ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದಿನಿಂದ ಮಹಿಳೆಯರು ಮತ್ತು ಮಕ್ಕಳಿಗೆ ಕೈಗೆಟುಕುವ ಒಳರೋಗಿ ಆರೈಕೆಯ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸುವ ಉದ್ದೇಶದಿಂದ 50 ಹಾಸಿಗೆಗಳ ಒಳರೋಗಿ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದರು.
ಸಮುದಾಯ ವೈದ್ಯಕೀಯ ವಿಭಾಗದಿಂದ ನಡೆಸುವ ಕ್ಯಾನ್ಸರ್ ಪತ್ತೆ ಪರೀಕ್ಷಾ ಕ್ಲಿನಿಕ್, ಉಚಿತ ಡಯಾಲಿಸಿಸ್ ಸೇವೆಗಳು, ರಕ್ತದಲ್ಲಿನ ಸಕ್ಕರೆ, ಹಿಮೋಗ್ಲೋಬಿನ್, ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು ಮತ್ತು ಮೂತ್ರ ಪರೀಕ್ಷೆಗಳಂತಹ ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು ನಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಒಳರೋಗಿಗಳ ವಿಭಾಗವನ್ನು ಆರಂಬಿಸಿದ್ದು, ಈ ಭಾಗದ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಒಳರೋಗಿ ವಿಭಾಗದ ಸೇವೆಗಳನ್ನು ಬೆಂಬಲಿಸುವ ಉದ್ದೇಶದಿಂದ, ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ, ಡಯೊಗ್ನೊಸ್ಟಿಕ್ ಸೇರಿದಂತೆ ಇತರೆ ಆರೋಗ್ಯ ಸೇವೆಗಳನ್ನೂ ಪರಿಚಯಿಸಿ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು, ಯಾವುದೇ ರೋಗಿಯನ್ನು ವೆಚ್ಚದ ಕಾರಣದಿಂದಾಗಿ ವಾಪಾಸ್ ಕಳಿಸುವುದಿಲ್ಲ ಎಂದು ಭರವಸೆ ನೀಡಿದರು.
ಸಾರ್ವಜನಿಕರಿಗೆ ಹೆಚ್ಚಿನ ನೆರವು ನೀಡಲು ಎಸ್.ಎಸ್.ಕೇರ್ ಟ್ರಸ್ಟ್ ಕೂಡ ನಮ್ಮೊಂದಿಗೆ ಕೈಜೋಡಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ಲೈಫ್ ಟ್ಟಸ್ರಿಗಳು, ದಾವಣಗೆರೆ ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ 2019ರಿಂದ ಆರಂಭವಾದ ಎಸ್.ಎಸ್.ಕೇರ್ ಟ್ರಸ್ಟ್ ಅನೇಕ ಆರೋಗ್ಯ ಸೇವೆಗಳನ್ನು ಒದಗಿಸಲು ಡಾ|| ಶಾಮನೂರು ಶಿವಶಂಕರಪ್ಪನವರ ಪ್ರೇರಣೆಯೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಬಾಪೂಜಿ ಆಡಳಿತ ಮಂಡಳಿಯ ಸದಸ್ಯರಾದ ಅಥಣಿ ವೀರಣ್ಣನವರು, ಶ್ರೀಮತಿ ಕಿರುವಾಡಿ ಗಿರಿಜಮ್ಮ, ಸಂಪನ್ನ ಮುತಾಲಿಕ್, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಪ್ರೊ|| ಬಕ್ಕಪ್ಪ, ಎಸ್‌ಎಸ್‌ಐಎಂಎಸ್‌ಆರ್‌ಸಿ ಪ್ರಾಂಶುಪಾಲರಾದ ಡಾ. ಪ್ರಸಾದ್, ಎಸ್‌ಎಸ್‌ಐಎಂಎಸ್‌ಆರ್‌ಸಿ ವೈದ್ಯಕೀಯ ನಿರ್ದೇಶಕರಾದ ಡಾ. ಅರುಣಕುಮಾರ್ ಅಜ್ಜಪ್ಪ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕುಮಾರ್, ಸತ್ಯನಾರಾಯಣ, ಡಾ|| ಪ್ರಶಾಂತಕುಮಾರಿ, ಡಾ|| ಶ್ರೇಷ್ಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ದಾದು ಸೇಠ್, ಚಮನ್ ಸಾಬ್, ಮುನ್ನಾ ಪೈಲ್ವಾನ್, ಮುದೇಗೌಡ್ರು ಗಿರೀಶ್, ಜಿ.ಎಸ್.ಮಂಜುನಾಥ್ (ಗಡಿಗುಡಾಳ್) ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243