ದಿನದ ಸುದ್ದಿ
ಶಾಕಿಂಗ್ ನ್ಯೂಸ್; ಬಸ್ ಪ್ರಯಾಣ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ
ಸುದ್ದಿದಿನ ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಶಾಕಿಂಗ್ ನ್ಯೂಸ್ ನೀಡಲಿದ್ದು, ಭಾನುವಾರದಿಂದ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ದರ ಹೆಚ್ಚಳ ಮಾಡುವ ನಿರ್ಧಾರ ಪ್ರಟಿಸಿದೆ. ಒಂದೆಡೆ ಇಂಧನ ದರ ಏರಿಕೆಯಿಂದ ಭಾರ ಹೊತ್ತ ಜನಸಾಮಾನ್ಯರಿಗೆ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಿಸಿ ಬೆಲೆ ಏರಿಕೆ ಮಣಭಾರ ಹೊರಿಸಿದೆ.
ರಾಜ್ಯ ಸರ್ಕಾರ ಶೇ. 18ರಷ್ಟು ಸಾರಿಗೆ ಬಸ್‌ಗಳ ದರ ಹೆಚ್ಚಳ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಶನಿವಾರ ಮಧ್ಯರಾತ್ರಿಯಿಂದಲೇ ದರ ಹೆಚ್ಚಳ ಜಾರಿಗೆ ಬರಲಿದೆ. ನಗರ ಸಾರಿಗೆ ದರ 18ರಿಂದ ಶೇ. 50 ಏರಿಸುವ ಸಂಭವವಿದೆ. ಸಾಮಾನ್ಯ ಸಾರಿಗೆಗೆ ಶೇ. 18ರಷ್ಟಾದರೂ, ಸುವಿಹಾರಿ ಬಸ್‌ಗಳ ಪ್ರಯಾಣ ದರ ಮತ್ತಷ್ಟು ದುಬಾರಿ ಆಗಲಿದೆ.
ಸಾರಿಗೆ ದರ ಸಮರ್ಥಿಸಿಕೊಂಡ ಸಚಿವ:
ಶನಿವಾರ ರಾತ್ರಿಯಿಂದಲೇ ಅನ್ವಯ ಆಗಲಿರುವ ಸಾರಿಗೆ ದರ ಹೆಚ್ಚಳವನ್ನು ಸಮರ್ಥನೆ ಮಾಡಿಕೊಂಡಿರುವ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಸತತವಾಗಿ ಹೆಚ್ಚಳ ಮಾಡುತ್ತಿದೆ. ಆದ್ದರಿಂದ ಇದನ್ನು ಈ ಭಾರವನ್ನು ಪ್ರಯಾಣಿಕರ ಮೇಲೆ ಹೇರುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಡೀಸೆಲ್ ದರ ಹೆಚ್ಚಳದಿಂದ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ 180 ಕೋಟಿ ರೂ. ನಷ್ಟ ಉಂಟಾಗಿದೆ. ಪ್ರತಿ ದಿನ ಡೀಸೆಲ್ ದರ ಹೆಚ್ಚಳವಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಗಳ ನಿಗಮದ ಮೇಲೆ ಭಾರಿ ಹೊರೆ ಬೀಳುತ್ತಿದೆ. ಹೊರೆ ತಗ್ಗಿಸುವ ಉದ್ದೇಶದಿಂದ ಅಷ್ಟೇ ಪ್ರಯಾಣ ದರ
ಹೆಚ್ಚಳ ಮಾಡಲಾಗುತ್ತಿದೆಯೇ ಹೊರತು, ಬೇರೆ ಕಾರಣದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ದರ
ಹೆಚ್ಚಳ ಸಂಬಂಧ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಸರ್ಕಾರ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಜನರ ಮೇಲೆ ಹೊರೆ ಹೇರುವುದು ಬೇಡ ಎಂದು ಮುಖ್ಯಮಂತ್ರಿಯವರು ಸಲಹೆ ಮಾಡಿದ್ದರು. ಈ ಕ್ರಮ ಕೈಗೊಂಡಿದ್ದಿಲ್ಲ. ಆದರೆ, ಈಗ ಅನಿವಾರ್ಯ ಎಂದು ತಿಳಿಸಿದ್ದಾರೆ.