ದಿನದ ಸುದ್ದಿ

ಹೊಸ ವರ್ಷದ ಸಂಭ್ರಮಾಚರಣೆಗೆ ರಾಜ್ಯ ಸಜ್ಜು ; ಬಿಗಿ ಭದ್ರತೆ

Published

on

ಸುದ್ದಿದಿನಡೆಸ್ಕ್:ಹೊಸ ವರ್ಷ 2026 ರ ಸ್ವಾಗತ ಹಾಗೂ ಸಂಭ್ರಮಾಚರಣೆಗೆ ಇಡೀ ರಾಜ್ಯವೇ ಸಜ್ಜಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಕೋರಮಂಗಲ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಲಕ್ಷಾಂತರ ಜನ ಸೇರುವ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಿಡಿಗೇಡಿಗಳ ವಿರುದ್ಧ ನಿರಂತರವಾಗಿ ನಿಗ ವಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷ ಮುಗಿದ ಬಳಿಕವೂ ಯಾರಾದರೂ ಸಂತ್ರಸ್ತರು ದೂರು ನೀಡಿದರೆ ಇಲ್ಲವೇ ವಿಡಿಯೋ ಸಿಕ್ಕರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೋರಮಂಗಲದಲ್ಲಿಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹಾಗೂ ಪೊಲೀಸ್ ಉಪ ಆಯುಕ್ತರಾದ ಸಾ.ರಾ.ಫಾತೀಮ ಅವರು ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಭದ್ರತಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನನಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷ ಆಗಮಿಸುತ್ತಿದ್ದಂತೆ ಅವಳಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಮಾದಕ ವಸ್ತುಗಳ ನಿರ್ಮೂಲನೆ ವಿರುದ್ಧ ಪೊಲೀಸ್ ಕಮೀಷನ್‌ರೇಟ್ ವತಿಯಿಂದ ಹುಬ್ಬಳ್ಳಿಯಲ್ಲಿ ಬೈಕ್‌ರ‍್ಯಾಲಿ ಮೂಲಕ ಜಾಗೃತಿ ಅಭಿಯಾನ ಮೂಡಿಸಲಾಯಿತು.

ಹುಬ್ಬಳ್ಳಿಯ ನೆಹರು ಮೈದಾನದಿಂದ ಆರಂಭವಾದ ಬೈಕ್‌ರ‍್ಯಾಲಿ, ಚನ್ನಮ್ಮ ಸರ್ಕಲ್, ಕೊಪ್ಪಿಕರ ರಸ್ತೆ, ಗೋಕುಲ ರೋಡ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಈ ವೇಳೆ ಮಾತನಾಡಿದ, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸುವಂತೆ ಹುಬ್ಬಳ್ಳಿ ಜನತೆಗೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಹೆಸರಲ್ಲಿ ಕಾನೂನು ಉಲ್ಲಂಘನೆ, ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಸಂಭ್ರಮಾಚರಣೆ ಮಾಡಲು ಯಾವುದೇ ಅಡ್ಡಿ ಇಲ್ಲ. 10 ಗಂಟೆಯ ಬಳಿಕ ನಿಗದಿತ ಮಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು ಎಂದು ಸೂಚಿಸಿದ್ದಾರೆ.

ತೆರೆದ ಪ್ರದೇಶಗಳಲ್ಲಿ ಸಂಭ್ರಮಾಚರಣೆ ಮಾಡಲು ಅನುಮತಿ ಕಡ್ಡಾಯ ಎಂದು ತಿಳಿಸಿದ್ದಾರೆ.

ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಆಯೋಜಿಸಲಾಗುವ ಪಾರ್ಟಿಗಳಲ್ಲಿ ಕಾನೂನು ಬಾಹಿರ ಕೃತ್ಯ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version