ದಿನದ ಸುದ್ದಿ

‘ಬಸವರಾಜ ಕಟ್ಟಿಮನಿ’ ಕಥೆಗಳನ್ನು ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Published

on

ಸುದ್ದಿದಿನ,ಮೈಸೂರು : ಕನ್ನಡದ ಹೆಸರಾಂತ ಪ್ರಗತಿಶೀಲ ಬರಹಗಾರ, ಕಾದಂಬರಿಕಾರ, ಕಥೆಗಾರ ಬಸವರಾಜ ಕಟ್ಟಿಮನಿಯವರ ಜನ್ಮಶತಮಾನೋತ್ಸವ ವರ್ಷದ ಸಂದರ್ಭದಲ್ಲಿ (1919-2019) “ಬಸವರಾಜ ಕಟ್ಟಿಮನಿಯವರ ಸಣ್ಣ ಕಥೆಗಳನ್ನು ಕುರಿತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ” ಯೊಂದನ್ನು ಏರ್ಪಡಿಸಿದೆ.

ಈ ಸ್ಪರ್ಧೆಯು ಬಸವರಾಜ ಕಟ್ಟಿಮನಿಯವರ ಸಣ್ಣಕಥೆಗಳನ್ನು ಮಾತ್ರ ಕುರಿತದ್ದಾಗಿರುತ್ತದೆ. ಅವರ ಎಲ್ಲ ಕಥೆಗಳನ್ನು, ಅವುಗಳ ವಸ್ತು, ಧೋರಣೆ, ಪಾತ್ರಗಳು, ಕಥಾಸಂವಿಧಾನ, ಒಟ್ಟು ಪರಿಣಾಮ ಮತ್ತು ವರ್ತಮಾನಕ್ಕೆ ಆ ಕಥೆಗಳು ಪ್ರಸ್ತುತವಾಗುವ ರೀತಿ-ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕವಾಗಿ ಅವಲೋಕಿಸುವ ಪ್ರಬಂಧ ಇದಾಗಿರಬೇಕು ಮತ್ತು ಪ್ರಬಂಧವು ಸ್ವತಂತ್ರವಾಗಿ ಬರೆದುದಾಗಿರಬೇಕು. ಸ್ಪರ್ಧೆಯಲ್ಲಿ ಯಾರಾದರೂ ಪಾಲ್ಗೊಳ್ಳಬಹುದು.

ಇಲ್ಲಿ ವಯೋಮಾನದ ನಿರ್ಬಂಧವಿಲ್ಲ ಮತ್ತು ಪ್ರವೇಶ ಧನವಿಲ್ಲ. ಪ್ರಬಂಧವು ಕಟ್ಟಿಮನಿಯವರ ಕೆಲವೇ ಕಥೆಗಳನ್ನು ಕುರಿತಾಗಿರದೇ, ಅವರ ಎಲ್ಲ ಕಥೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿ ಬರೆದುದಾಗಿರಬೇಕು. ಅಂದರೆ ಇಲ್ಲಿ ಅವರ ಎಲ್ಲ ಕಥೆಗಳನ್ನು ಹೆಸರಿಸುವ ಅಗತ್ಯವಿಲ್ಲವಾದರೂ ಅವೆಲ್ಲವುಗಳ ಹಿಂದಿರುವ ಧೋರಣೆಯನ್ನು ಸಮಗ್ರವಾಗಿ ಗ್ರಹಿಸಿ ಒಟ್ಟುನೋಟದ ರೀತಿಯಲ್ಲಿ ಕಟ್ಟಿಕೊಡುವಂತಿರಬೇಕು. ಪ್ರಬಂಧವು 2500 ರಿಂದ 2700 ಶಬ್ದಗಳ ಮಿತಿಯಲ್ಲಿರಬೇಕು ಮತ್ತು ಸ್ಪಷ್ಟವಾಗಿ ಡಿ.ಟಿ.ಪಿ ಮಾಡಿಸಿ, ದೋಷಗಳನ್ನು ತಿದ್ದಿದ ಲೇಖನವನ್ನೇ ಕಳಿಸಬೇಕು.

ಈ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ, ಎರಡನೆಯ ಹಾಗೂ ಮೂರನೆಯ ಸ್ಥಾನ ಪಡೆಯುವ ವಿಮರ್ಶಾತ್ಮಕ ಪ್ರಬಂಧಗಳಿಗೆ ಪ್ರತಿಷ್ಠಾನವು ಕ್ರಮವಾಗಿ, ರೂ. 10,000/-, ರೂ. 7000/- ಹಾಗೂ ರೂ. 5000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಕೊಡಲಾಗುವುದು. ಈ ಬಹುಮಾನಗಳನ್ನು ಹೊರತುಪಡಿಸಿ, ಬಂದ ಪ್ರಬಂಧಗಳಲ್ಲಿ ನಿರ್ಣಾಯಕರು ಸೂಕ್ತವೆಂದು ಪರಿಗಣಿಸುವ ಇನ್ನೂ ಎರಡು ಅಥವಾ ಮೂರನ್ನು ಆಯ್ಕೆ ಮಾಡಿ ಅವುಗಳಿಗೆ ತಲಾ 2,500/- ರೂಪಾಯಿಗಳ ಬಹುಮಾನವನ್ನು ಕೊಡಲಾಗುವುದು. ಆಯ್ಕೆಯಾದ ಪ್ರಬಂಧಗಳನ್ನು ಪ್ರತಿಷ್ಠಾನದಿಂದ ಗ್ರಂಥರೂಪದಲ್ಲಿ ಪ್ರಕಟಿಸಲಾಗುವುದು.

ಲೇಖಕರು ದಿನಾಂಕ: 30-6-2019ರ ಒಳಗೆ ತಮ್ಮ ವಿಮರ್ಶಾತ್ಮಕ ಪ್ರಬಂಧಗಳನ್ನು“ಅಧ್ಯಕ್ಷರು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಕುಮಾರ ಗಂಧರ್ವ ರಂಗಮಂದಿರ, ಬೆಳಗಾವಿ-590016”ಈ ವಿಳಾಸಕ್ಕೆ ನೊಂದಾಯಿತ ಅಂಚೆಯ ಮೂಲಕ ಕಳಿಸಬೇಕು. ನಂತರ ಬಂದ ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ 0831-2474648 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version