ದಿನದ ಸುದ್ದಿ
ಸಹಕಾರಿ ಸಂಸ್ಥೆಗಳಿಗೆ ಕಾನೂನು ರೂಪಿಸಲು ರಾಜ್ಯಗಳಿಗೆ ಹಕ್ಕು ಇದೆ : ಕೇಂದ್ರ ಸಚಿವ ಅಮಿತ್ ಶಾ
ಸುದ್ದಿದಿನ, ದೆಹಲಿ : ರಾಜ್ಯಗಳು ಸಹಕಾರಿ ಸಂಸ್ಥೆಗಳ ಕುರಿತಂತೆ ತಮ್ಮದೇ ಕಾನೂನು ಹೊಂದಲು ಹಕ್ಕು ಪಡೆದಿರುತ್ತವೆ. ಇದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಇಚ್ಛಿಸುವುದಿಲ್ಲ. ಸಹಕಾರಿ ನೀತಿಗಳನ್ನು ಬಲಪಡಿಸುವ ಗುರಿ ನಮ್ಮದಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿಂದು ಆರಂಭವಾದ ಸಹಕಾರ ನೀತಿ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು. ಸಹಕಾರ ವಲಯದ ಅಭಿವೃದ್ಧಿಗೆ ಮಾರ್ಗಸೂಚಿ ರಚನೆ, ಸಹಕಾರ ಬಲವರ್ಧನೆ, ಸಹಕಾರಿ ಸಂಸ್ಥೆಗಳನ್ನು ಬಲಿಷ್ಠ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸುವುದು, ಸಾಮಾಜಿಕ ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸುವುದು, ಸಾಮಾಜಿಕ ಭದ್ರತೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮುಂತಾದ ವಿಷಯಗಳ ಕುರಿತು ಎರಡು ದಿನಗಳ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ’ಸಹಕಾರದಿಂದ ಸಮೃದ್ಧಿ’ ಪರಿಕಲ್ಪನೆ ಅಡಿ ಸಹಕಾರ ವಲಯವನ್ನು ಬಲಿಷ್ಠ ಆರ್ಥಿಕತೆಯ ಮಾದರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಪ್ರತಿನಿಧಿಗಳು, ಸುಮಾರು 40 ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243