ದಿನದ ಸುದ್ದಿ
ದಾವಣಗೆರೆ | ‘ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ’ ಚುನಾವಣೆ : ವೇಳಾಪಟ್ಟಿ ಪ್ರಕಟ
ಸುದ್ದಿದಿನ,ದಾವಣಗೆರೆ : ಆಯುಕ್ತರು, ಸಹಕಾರ ಚುನಾವಣಾ ಆಯೋಗ ಬೆಂಗಳೂರು ಇವರ ಆದೇಶದನ್ವಯ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ)ನಿಯಮ-2019 ರನ್ವಯ ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆ ದಾವಣಗೆರೆ ಇವರ ಸರ್ಕಾರೇತರ ಸದಸ್ಯರ ಪ್ರತಿನಿದಿಗಳ ಆಯ್ಕೆಯ ಚುನಾವಣೆಯು ಡಿ.21 ರಂದು ಶ್ರೀಮತಿ ಗೌರಮ್ಮ ಹನಗೋಡಿ ಮಠ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ: 4,5,7 ಮತ್ತು 8, ಹದಡಿ ರಸ್ತೆ, ದಾವಣಗೆರೆ ಇಲ್ಲಿ ನಡೆಯಲಿದೆ.
ಈ ಚುನಾವಣೆಯಲ್ಲಿ ಪಟ್ಟಣದ ವ್ಯಾಪಾರ ಸಮಿತಿಯ ಒಟ್ಟು 10 ಜನ ಪ್ರತಿನಿಧಿಗಳು (3ನೇ ಒಂದರಷ್ಟು) ಮಹಿಳಾ ವ್ಯಾಪಾರಿಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಇತರೆ ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರ ಹಾಗೂ ವಿಕಲ ಚೇತನರ ಕನಿಷ್ಠ ಒಬ್ಬ ಪ್ರತಿನಿಧಿಗೆ ಮೀಸರಿಸಿದ ಪಟ್ಟಣ ವ್ಯಾಪಾರ ಸಮಿತಿಗೆ ಚುನಾಯಿಸಲು ಈ ಚುನಾವಣೆಗೆ ನೋಟಿಸ್, ನಾಮಪತ್ರ ಆಹ್ವಾನಿಸಿ ಡಿ. 7 ರಂದು ಅಧಿಸೂಚನೆ ಹೊರಡಿಸಿದೆ.
ದಾವಣಗೆರೆ ಮಹಾನಗರಪಾಲಿಕೆಯ ಎಸ್‍ಜೆಎಸ್‍ಆರ್‍ವೈ ವಿಭಾಗ ಕೆಂಪು ಕಟ್ಟಡ ಕಚೇರಿಯಲ್ಲಿ ಡಿ 9 ರಿಂದ 13 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಾಮ ಪತ್ರಗಳನ್ನು ಚುನಾವಣಾ ಅಧಿಕಾರಿ/ಸಹಾಯಕ ಚುನಾವಣಾ ಅಧಿಕಾರಿಯವರಿಗೆ ನಿಗದಿಪಡಿಸಿದ ಅವಧಿಯಲ್ಲಿ ಸಲ್ಲಿಸುವುದು. ಡಿ. 14 ರಂದು ಬೆಳಿಗ್ಗೆ 11 ಗಂಟೆಗೆ ನಾಮ ಪತ್ರಗಳನ್ನು ಪರಿಶೀಲಿಸುವ ದಿನವಾಗಿರುತ್ತದೆ. ಡಿ. 14 ರಂದು ಮಧ್ಯಾಹ್ನ 3 ಗಂಟೆಗೆ ಸಿಂಧುವಾದ ನಾಮಪತ್ರಗಳನ್ನು ಪ್ರಕಟಿಸಬೇಕಾದ ದಿನಾಂಕವಾಗಿರುತ್ತದೆ.
ಡಿ. 15 ರಂದು ಸಂಜೆ 5 ಗಂಟೆಗಿಂತ ಮುಂಚೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನವಾಗಿದೆ. ಹಾಗೂ ಅದೇ ದಿನ ಸಂಜೆ 5.30 ಗಂಟೆಯವರೆಗೆ ನಾಮಪತ್ರಗಳು ಸಿಂಧುವಾಗಿವೆ ಎಂದು ಘೋಷಿಸಲಾಗಿರುವ ಅಭ್ಯರ್ಥಿಗಳ ಸಂಖ್ಯೆಯು ಚುನಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯನ್ನು ಮೀರದಿದ್ದರೆ ಉಮೇದುವಾರಿಕೆಯನ್ನು ಹಿಂಪಡೆಯಲು ನಿಗದಿಪಡಿಸಲಾದ ದಿನ ಮುಕ್ತಾಯಗೊಂಡ ತರುವಾಯ, ಅಂಥ ಎಲ್ಲ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸತಕ್ಕದ್ದು. ಹಾಗೂ ಪಟ್ಟಣ ವ್ಯಾಪಾರ ಸಮಿತಿಗೆ ಅವರು ಯುಕ್ತವಾಗಿ ಚುನಾಯಿತರಾಗಿದ್ದಾರೆಂದು ಘೋಷಿಸತಕ್ಕದ್ದು.
ಡಿ 21 ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶ್ರೀಮತಿ ಗೌರಮ್ಮ ಹನಗೋಡಿ ಮಠ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ: 4,5,7 ಮತ್ತು 8, ಹದಡಿ ರಸ್ತೆ, ದಾವಣಗೆರೆ ಇಲ್ಲಿ ಮತದಾನ ನಡೆಯಲಿದೆ. ಹಾಗೂ ಅದೇ ದಿನ ಮತದಾನದ ಅವಧಿ ಮುಗಿದ ನಂತರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು.
ಉಮೇದುವಾರರು ನಾಮಪತ್ರವನ್ನು ನಮೂನೆ-1 ರಲ್ಲಿ ನಾಮಪತ್ರ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು. ಮತದಾನಕ್ಕೆ ಬರುವ ಬೀದಿ ಬದಿ ವ್ಯಾಪಾರಿಗಳು ಮಹಾನಗರಪಾಲಿಕೆ ದಾವಣಗೆರೆ ಇಂದ ನೀಡಿರುವ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಿ ಮತ ಚಲಾಯಿಸತಕ್ಕದ್ದು, ಮತ್ತು ನಿಗದಿಪಡಿಸಿದ ಪುಸ್ತಕದಲ್ಲಿ ಸಹಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ರಿಟರ್ನಿಂಗ್ ಅಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಮಾತ್ರ ಸಂಪರ್ಕಿಸುವಂತೆ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆ ಚುನಾವಣಾ ಅಧಿಕಾರಿಗಳು ಹಾಗೂ ದಾವಣಗೆರೆ ತಾಲ್ಲೂಕು ತಹಶಿಲ್ದಾರರಾದ ಜಿ. ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243