ದಿನದ ಸುದ್ದಿ

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ | 8 ಕುಲಸಚಿವರು, 10 ಹಣಕಾಸು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

Published

on

ಸುದ್ದಿದಿನ,ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇಲ್ಲಿ 2014-15ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯಲ್ಲಿ ಸಂಗ್ರಹಿಸಿರುವ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ನಿಯಮಾನುಸಾರ ಬಳಸದೆ ವಂಚಿಸಿರುವ 8 ಜನ ಕುಲಸಚಿವರು ಹಾಗೂ 10 ಜನ ಹಣಕಾಸು ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳೇಶ್ ದೂರು ನೀಡಿದ್ದಾರೆ.

ಮಾಹಿತಿಹಕ್ಕು ಅಡಿಯಲ್ಲಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ನಿಧಿಯ ಅಡಿಯಲ್ಲಿ ಸಂಗ್ರಹವಾದ ಮಾಹಿತಿಯನ್ನು ಪಡೆದು ಪರಿಶೀಲನೆ ಮಾಡಿದಾಗ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇಲ್ಲಿ 2014-15ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯವರೆಗೆ ಪ್ರತಿ ವಿದ್ಯಾರ್ಥಿಯಿಂದ ವರ್ಷವಾರು 100, 120, 150 ರಂತೆ ‘ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಶುಲ್ಕ’ವನ್ನು ಸಂಗ್ರಹಿಸುತ್ತ ಬಂದಿದ್ದು, 2014-15ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯಲ್ಲಿ ಒಟ್ಟು 1,55,38,790 ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದು, ಈ ಹಣದಲ್ಲಿ ಕೇವಲ 9,34,000 ರೂಪಾಯಿಗಳನ್ನು ಮಾತ್ರವೇ ಖರ್ಚು ಮಾಡಲಾಗಿದೆ. ಉಳಿದ 1,46,04,790 ರೂಪಾಯಿಗಳು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಖಾತೆಯಲ್ಲಿ ಉಳಿಕೆಯಾಗಿರುವ ಬಗ್ಗೆಯಾಗಲಿ ಅಥವಾ ಇತರೆ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ.

ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ಸಂಗ್ರಹಿಸಿರುವ ನಿಧಿಯು ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಕ್ಕಾಗಿಯೇ ಪ್ರತಿವರ್ಷ ನಿಯಮಾನುಸಾರ ವಿನಿಯೋಗಿಸಬೇಕಾಗಿರುತ್ತದೆ. ಆದರೆ ಪ್ರತಿವರ್ಷ ಲಕ್ಷಾಂತರ ರೂಪಾಯಿಗಳನ್ನು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ಸಂಗ್ರಹಿಸಿದ್ದರೂ ಯಾವುದೇ ಕ್ಷೇಮಾಭಿವೃದ್ಧಿ ಯೋಜನೆ ಕೈಗೊಳ್ಳದೆ ಸದರಿ ಹಣವನ್ನು ಬಳಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿರುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಸಂಗ್ರಹಿಸಿರುವ ಹಣವನ್ನು ಅನ್ಯಕಾರ್ಯಗಳಿಗೆ ನಿಯಮಬಾಹಿರವಾಗಿ ಬಳಕೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿರುತ್ತದೆ.

ಆದ್ದರಿಂದ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಅನುದಾನದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಕುಲಪತಿ ಮತ್ತು ಸಿಂಡಿಕೇಟ್ ಸದಸ್ಯರುಗಳಿಗೆ ದೂರು ನೀಡಿ 6 ತಿಂಗಳು ಕಳೆದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತದ ಮೊರೆ ಹೋಗಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿರುತ್ತಾರೆ.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇಲ್ಲಿ 2014-15ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯಲ್ಲಿ ಕುಲಸಚಿವರಾಗಿ ಮತ್ತು ಹಣಕಾಸು ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ;
ಕುಲಸಚಿವರುಗಳು:
1. ಪ್ರೊ. ಕೆ.ವಿಜಯಕುಮಾರ (05-02-2013 ರಿಂದ 24-03-2015)
2. ಪ್ರೊ. ಎಲ್.ಆರ್.ನಾಯ್ಕ (25-03-2015 ರಿಂದ 12-05-2015)
3. ಪ್ರೊ. ಟಿ.ಎಂ.ಭಾಸ್ಕರ್ (13-05-2015 ರಿಂದ 04-09-2017)
4. ಪ್ರೊ. ಕೆ.ವಿ.ಪ್ರಸಾದ್ (29-07-2018 ರಿಂದ 21-09-2018)
5. ಪ್ರೊ. ಬಿ.ಕೆ.ತುಳಸಿಮಾಲ (22-09-2018 ರಿಂದ 25-01-2021)
6. ಪ್ರೊ. ಶಶಿಕಾಂತ ಎಸ್. ಉಡಿಕೇರಿ (26-01-2021 ರಿಂದ 26-07-2021)
7. ಪ್ರೊ. ಎಸ್.ಸಿ.ಪಾಟೀಲ (27-07-2021 ರಿಂದ 12-09-2023)
8. ಶ್ರೀ ರುದ್ರೇಶ ಎಸ್.ಎನ್ (13-09-2023 ರಿಂದ ಪ್ರಸ್ತುತ)
ಹಣಕಾಸು ಅಧಿಕಾರಿಗಳು:
1. ಡಾ. ಭೀಮನಗೌಡ (25-08-2014 ರಿಂದ 31-05-2016)
2. ಡಾ. ರಮೇಶ್. ಓ. ಓಲೇಕಾರ (01-06-2016 ರಿಂದ 16-04-2017)
3. ಶ್ರೀ ಸುನೀಲ್‌ಕುಮಾರ್ ಎಂ.ಎಸ್ (17-04-2017 ರಿಂದ 15-08-2018)
4. ಶ್ರೀ ಎನ್.ಆರ್.ರಾಘವೇಂದ್ರ (16-08-2018 ರಿಂದ 16-07-2019)
5. ಶ್ರೀ ಎಂ.ಎ.ಜುಬೇರ್ (17-07-2019 ರಿಂದ 30-11-2019)
6. ಪ್ರೊ. ಬಿ.ಕೆ.ತುಳಸಿಮಾಲ (01-12-2019 ರಿಂದ 09-01-2020)
7. ಡಾ. ಪ್ರಶಾಂತ ಕೆ.ಸಿ (10-01-2020 ರಿಂದ 10-10-2022)
8. ಶ್ರೀ ಖಾಜಾಮೈನುದ್ದೀನ್ ಎಂ.ಡಿ (11-10-2022 ರಿಂದ 31-07-2023)
9. ಡಾ. ಸದ್ಯೋಜಾತಪ್ಪ ಎಸ್. (01-08-2023 ರಿಂದ 15-03-2024)
10. ಶ್ರೀ ನಾಗರಾಜ (16-03-2024 ರಿಂದ ಪ್ರಸ್ತುತ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version