ದಿನದ ಸುದ್ದಿ

ಸುದ್ದಿದಿನ | ಬೆಳಗಿನ ಪ್ರಮುಖ ಸುದ್ದಿಗಳು

Published

on

ಸುದ್ದಿದಿನ | ಬೆಳಗಿನ ಪ್ರಮುಖ ಸುದ್ದಿಗಳು

  1. 2021-2022ನೇ ಶೈಕ್ಷಣಿಕ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮಧ್ಯಾಹ್ನ 12.30 ಕ್ಕೆ www.karresults.nic.in ಜಾಲತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.

    ಭದ್ರಾ ಜಲಾಶಯದಿಂದ ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕುಗಳಲ್ಲಿನ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, 2 ಮತ್ತು 3ನೇ ಹಂತದ ಕಾಮಗಾರಿಗೆ ಈ ವರ್ಷವೇ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

    ರಾಜ್ಯದಲ್ಲಿ ಜೂನ್ 15ರೊಳಗೆ ನೂತನ ಯುವ ನೀತಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಯುವನೀತಿ-2022ರ ಕರಡನ್ನು ಬಿಡುಗಡೆ ಮಾಡಿದ ಸಚಿವರು, ಯುವ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ನೀತಿ ಕರಡು ರೂಪಿಸಲಾಗಿದೆ ಎಂದರು.

    ಪ್ರಸಕ್ತ ವರ್ಷ 14 ಲಕ್ಷದ 10ಸಾವಿರ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. ದೆಹಲಿಯಲ್ಲಿಂದು ಅಸೋಚಾಮ್ ಒಕ್ಕೂಟ ಆಯೋಜಿಸಿದ್ದ ಮೂಲದಲ್ಲಿ ತೆರಿಗೆ ಕಡಿತ – ಟಿಡಿಎಸ್ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೇಂದ್ರೀಯ ನೇರ ತೆರಿಗೆ ಮಂಡಳಿ – ಸಿಬಿಡಿಟಿ ಜಂಟಿ ಕಾರ್ಯದರ್ಶಿ ಕಮಲೇಶ್ ಸಿ. ವರ್ಷ್ಣೆ, ತೆರಿಗೆ ಪಾವತಿ ಮಾಡುವ ಮೂಲಕ ನಾಗರಿಕರು ದೇಶದ ಅಭಿವೃದ್ಧಿ ಪಥದಲ್ಲಿ ಪಾಲುದಾರರಾಗಿದ್ದಾರೆ ಎಂದರು.

    ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಬಾಲಸೋರ್‌ನಲ್ಲಿ ಭಾರತೀಯ ನೌಕಾಪಡೆ ನಿನ್ನೆ ಯಶಸ್ವಿಯಾಗಿ ನಡೆಸಿದೆ. ಸಾಗರ ಕ್ಷಿಪಣಿ ತಂತ್ರಜ್ಞಾನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದ್ದು, ಇದು ದೇಸಿನಿರ್ಮಿತ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತೀಯ ನೌಕಾಪಡೆಯ ಬದ್ಧತೆಯ ಪ್ರತೀಕವಾಗಿದೆ ಎಂದು ನೌಕಾಪಡೆ ಟ್ವೀಟ್ ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ – ಡಿಆರ್‌ಡಿಒ ಸಹಯೋಗದೊಂದಿಗೆ ಈ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ.

  2. ವಿಶ್ವ ಆರ್ಥಿಕ ವೇದಿಕೆ ಪ್ರಾಥಮಿಕ ಹಂತದ ಸಭೆಯಲ್ಲಿಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವರ್ಚುವಲ್ ಮಾದರಿಯಲ್ಲಿ ಭಾಗವಹಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ನಿಗದಿಯಾಗಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
  3. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಂಪೆ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲಾಗುವುದು. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತ ಪೀಠದಲ್ಲಿ ರೂಪ್‌ವೇ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
  4. ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನೋತ್ಸವವನ್ನು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಇಂದು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕ ಎನ್.ಮಹೇಶ್, ಸಾಹಿತಿ ಬರಗೂರು ರಾಮಚಂದ್ರಪ್ಪ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
  5. ಉತ್ತರಾಖಂಡದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ತಾಣಗಳನ್ನು ಒಳಗೊಂಡ ಚಾರ್‌ಧಾಮ್ ಯಾತ್ರೆ ಮೇ ೩ರಿಂದ ಆರಂಭಗೊಂಡಿದ್ದು, ಇದುವರೆಗೆ 5 ಲಕ್ಷ 72 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಾಲ್ಗೊಂಡಿದ್ದಾರೆ. ಯಾತ್ರಾರ್ಥಿಗಳ ಅನುಕೂಲ ಮತ್ತು ಸುರಕ್ಷತೆಗಾಗಿ ಯಾತ್ರೆ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಯಾತ್ರಾರ್ಥಿಗಳು ವೈದ್ಯರಲ್ಲಿ ದೈಹಿಕ ತಪಾಸಣೆ ನಡೆಸಿದ ನಂತರವಷ್ಟೇ ಯಾತ್ರೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸಲಹೆ ನೀಡಿದೆ.
  6. ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳಲಿದ್ದು, 200 ದಶಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ದೇಶದಲ್ಲಿ ಕಳೆದ 8 ವರ್ಷಗಳಲ್ಲಿ 67 ನೂತನ ವಿಮಾನ ನಿಲ್ದಾಣಗಳು, ವಾಟರ್ ಡ್ರೋಮ್ ಮತ್ತು ಹೆಲಿಪೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆಯನ್ನು 200ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
  7. ಮುಂಗಾರು ಋತುವಿನಲ್ಲಿ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಕೂಡಲೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಸೂಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಲಹೆ ನೀಡಿದೆ. ಈ ಕುರಿತಂತೆ ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳಿಗೆ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version