ನೆಲದನಿ

ದಮನಿತರ ದನಿಯಾಗಿ ನಿಂತ ವೈಚಾರಿಕ ಅನುವಾದಕ ಬಿ.ಸುಜ್ಞಾನಮೂರ್ತಿ

Published

on

  • ಡಾ.ಕೆ.ಎ.ಓಬಳೇಶ್

ನ್ನಡ ಸಾಹಿತ್ಯವು ವಿಭಿನ್ನ ಸಾಹಿತ್ಯ ಪ್ರಕಾರಗಳ ಮೂಲಕ ತನ್ನ ಅಸ್ಮಿತೆಯನ್ನು ಮುಂದುವರೆಸಿಕೊಂಡು ಬಂದಿದೆ. ಅನ್ಯಭಾಷೆಯ ಕೃತಿಗಳನ್ನು ಅನುವಾದಗೊಳಿಸುವ ಮೂಲಕ ಕನ್ನಡ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸುವ ಕಾರ್ಯವು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪ್ರಕಾರಕ್ಕೆ ಹಲವಾರು ಪಂಡಿತ ಪಾಮರರು ಶ್ರಮಿಸಿದ್ದಾರೆ. ಕನ್ನಡ ಸಾರಸ್ವತ ಲೋಕ ಕಂಡ ಇಂತಹ ಮಹಾನಿಯರಲ್ಲಿ ಬಿ.ಸುಜ್ಞಾನಮೂರ್ತಿಯವರು ಒಬ್ಬರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನುವಾದಕರ ಸಂಖ್ಯೆಯು ಅತ್ಯಧಿಕವಾಗಿ ಲಭಿಸುತ್ತದೆ. ಆದರೆ ಅನ್ಯಭಾಷೆಯ ವಿಶಿಷ್ಟವಾದ ಸಂವೇದನಾ ಕೃತಿಗಳನ್ನು ಕನ್ನಡದ ಮನಸುಗಳಿಗೆ ಸ್ಪಂದಿಸುವಂತೆ ಕಟ್ಟಿಕೊಡುವಲ್ಲಿ ಸುಜ್ಞಾನಮೂರ್ತಿಯವರು ಪ್ರಮುಖರಾಗಿದ್ದಾರೆ. ಇದಕ್ಕೆ ಬಹುಮುಖ್ಯವಾದ ಕಾರಣ ಇವರು ಅನುವಾದಕ್ಕೆ ಆಯ್ದುಕೊಂಡ ಕೃತಿಗಳ ವೈಶಿಷ್ಟ್ಯತೆ. ಇವರು ಅನುವಾದಕ್ಕೆ ಆಯ್ದುಕೊಂಡಿರುವ ಕೃತಿಗಳು ನೊಂದವರ, ಶೋಷಿತರ, ತಳವರ್ಗದವರ ಸಂವೇದನೆಗಳನ್ನು ಎತ್ತಿಹಿಡಿಯುವ ಎಡಪಂಥೀಯ ಚಿಂತನೆಗಳಿಂದ ಕೂಡಿದವುಗಳಾಗಿವೆ.

ಹೀಗಾಗಿಯೇ ಬಿ.ಸುಜ್ಞಾನಮೂರ್ತಿಯವರು ಕನ್ನಡ ಸಾರಸತ್ವ ಲೋಕದಲ್ಲಿ ವಿಶಿಷ್ಟವಾಗಿ ಕಂಡುಬರುತ್ತಾರೆ. ಇವರ ಅನುವಾದ ಸಾಹಿತ್ಯ ಸೇವೆಗೆ 2003ರಲ್ಲಿ ‘ಯಾರದೀ ಕಾಡು’ ಕಾದಂಬರಿ ಮತ್ತು 2013ರಲ್ಲಿ ‘ತೆಲಂಗಾಣ ರೈತ ಹೋರಾಟ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿವೆ. ಹಾಗೆಯೇ 2016ನೇ ಸಾಲಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.

ಶ್ರೀಯುತ ಬಿ.ಸುಜ್ಞಾನಮೂರ್ತಿಯವರು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಮೂಲಕ ಸಾವಿರಾರು ಕೃತಿಗಳಿಗೆ ತಾಂತ್ರಿಕ ಮೆರುಗು ನೀಡಿದವರು. ಪುಸ್ತಕಗಳ ಮೇಲಿನ ಇವರ ಕಾಳಜಿ, ಕೌಶಲ್ಯ ಹಾಗೂ ವಿದ್ವತ್ತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರಸಾರಂಗದಿಂದ ಹೊರ ಬರುವ ಕೃತಿಗಳಿಗೆ ಮಾತ್ರವಲ್ಲದೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಯುವ ಬರಹಗಾರರಿಗೆ ಸ್ಫೂರ್ತಿ ತುಂಬುವ ಮೂಲಕ ಅವರ ಕೃತಿಗಳಿಗೆ ಮೆರಗನ್ನು ನೀಡುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ.

ಯಾವುದೇ ಕೃತಿ ಹಾಗೂ ಲೇಖಕರು ಸುಜ್ಞಾನಮೂರ್ತಿ ಅವರಿಂದ ಮೌಲ್ಯಮಾಪನಕ್ಕೆ ಒಳಗಾಗಿ ಮೆಚ್ಚುಗೆಯನ್ನು ಪಡೆದುಕೊಂಡರೆ ಆ ಕೃತಿ ಹಾಗೂ ಲೇಖಕನನ್ನು ಯಾರು ತಿರಸ್ಕರಿಸುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ವಿಶಿಷ್ಟ ಪ್ರತಿಭೆಯೊಂದು ಕನ್ನಡ ವಿಶ್ವವಿದ್ಯಾಲದಲ್ಲಿರುವುದು ಕರ್ನಾಟಕದ ಪುಸ್ತಕ ಸಂಸ್ಕøತಿಯ ಹೆಗ್ಗಳಿಕೆಯೂ ಹೌದು.

ಸುಜ್ಞಾನಮೂರ್ತಿಯವರು ಪ್ರಸಾರಾಂಗದ ಉಪ ನಿರ್ದೇಶಕರಾಗಿದ್ದುಕೊಂಡೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಗಾಗಿ ದುಡಿದವರು. ಒಬ್ಬ ಪ್ರಾಧ್ಯಾಪಕ ಮಾತ್ರವಲ್ಲ, ವಿಶ್ವವಿದ್ಯಾಲಯದ ಒಂದು ವಿಭಾಗ ಮಾಡುವಷ್ಟು ಅನುವಾದ ಕಾರ್ಯವನ್ನು ಮಾಡಿದ ಕೀರ್ತಿಗೆ ಶ್ರೀಯುತರು ಪಾತ್ರರಾಗಿದ್ದಾರೆ. ಇವರ ಈ ಅನುವಾದ ಕಾರ್ಯದ ಹಿಂದೆ ಜೀವಪರ ತುಡಿತವಿದೆ.

ಈ ತುಡಿತದ ಭಾಗವಾಗಿಯೇ ಇವರು ಸುಮಾರು ಐವತ್ತಕ್ಕೂ ಹೆಚ್ಚೂ ಮೌಲಿಕವಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ತೆಲುಗು ಭಾಷೆಯಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿರುವ ಶ್ರೀಯುತರು ಹೆಸರಾಂತ ವೈಚಾರಿಕ ಚಿಂತಕರಾದ ಪ್ರೊ. ಕಂಚ ಐಲಯ್ಯ ಶೆಫರ್ಡ್, ಜಿ.ಎಲೋಶಿಯಸ್, ಬೊಜ್ಜಾ ತಾರಕಂ, ವಿ.ಎಸ್.ನೈಪಾಲ್ ಮುಂತಾದವರ ವೈಚಾರಿಕ ಕೃತಿಗಳನ್ನು ಕನ್ನಡೀಕರಿಸಿದ್ದಾರೆ.

ಬಿ.ಸುಜ್ಞಾನಮೂರ್ತಿಯವರು ಅತ್ಯುತ್ತಮ ಅನುವಾದಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವರು ವಿಶೇಷವಾಗಿ ಕಾಣುವುದು ಮಾತ್ರ ಅವರ ಅನುವಾದದ ಹಿಂದಿನ ಕಾಳಜಿಯಿಂದ. ಅವರು ಇದುವರೆಗೂ ಕನ್ನಡಕ್ಕೆ ಅನುವಾದಿಸಿದ ಎಲ್ಲ ಕೃತಿಗಳ ಆತರ್ಯದಲ್ಲಿ ಜೀವಪರ ಕಾಳಜಿಯೊಂದು ಸದಾ ಎದ್ದು ಕಾಣುತ್ತದೆ. ಇದು ಸಮಾಜದಲ್ಲಿ ನೊಂದವರ, ನಿರ್ಲಕ್ಷ್ಯಕ್ಕೆ ಒಳಗಾದವರ, ಶೋಷಿತರ, ದನಿತರ ದನಿಯಾಗಿ ಮಿಡಿಯುತ್ತ ಸಾಗಿದೆ.

ಇದೇ ಸುಜ್ಞಾನಮೂರ್ತಿಯವರ ಅನುವಾದದ ಬಹುಮುಖ್ಯ ವೈಶಿಷ್ಟ್ಯತೆ. ಇವರು ತಮ್ಮಲ್ಲಿ ಅಂತರ್ಗತವಾಗಿರುವ ಜೀವಪರ ಕಾಳಜಿಯಿಂದಾಗಿ ಅನುವಾದಿಸಿದ ಕೃತಿಗಳೆಲ್ಲ ಕನ್ನಡಕ್ಕೆ ವೈಚಾರಿಕ ಶಕ್ತಿಯನ್ನು ತುಂಬಿವೆ. ಇವರ ಬಹುತೇಕ ಅನುವಾದಿತ ಕೃತಿಗಳಲ್ಲಿ ದಲಿತಪರ ಕಾಳಜಿ ಎದ್ದು ಕಾಣುತ್ತದೆ. ಇದಕ್ಕೆ ನಿದರ್ಶನವಾಗಿ ಜಾತಿವಿನಾಶ, ದಲಿತತತ್ವ, ಜಾತಿವಿನಾಶ ವರ್ಗವಿನಾಶ, ಜಾತಿಯ ನೆರಳಲ್ಲಿ ಅಭಿವೃದ್ಧಿ ರಾಜಕೀಯ, ದಲಿತರು ಮತ್ತು ಪ್ರಭುತ್ವ, ಆಂಧ್ರಪ್ರದೇಶದ ಶತಮಾನದ ದಲಿತ ಚಳವಳಿ, ಹೊಲೆಯತತ್ವ ಹಾಗೂ ಮಾದಿಗತತ್ವ ಕೃತಿಗಳು ಮೂಡಿಬಂದಿವೆ.

ಈ ಎಲ್ಲಾ ಕೃತಿಗಳು ದಲಿತರ ಸ್ವಾಭಿಮಾನದ ಪ್ರತೀಕವಾಗಿ ಮೂಡಿಬಂದವುಗಳಾಗಿವೆ. ದಲಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಮೂಡಿಬಂದ ಭಾರತೀಯ ವಿವಿಧ ಭಾಷೆಗಳ ಕೃತಿಗಳನ್ನು ಕನ್ನಡದ ಓದುಗನಿಗೆ ಸರಳವಾಗಿ ಮತ್ತು ಸುಲಭವಾಗಿ ತಲುಪಿಸುವ ಮಹತ್ತರ ಕಾರ್ಯವನ್ನು ಸುಜ್ಞಾನಮೂರ್ತಿಯವರು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಇವರ ಈ ತುಡಿತವೇ ಅವರ ಆತಂರ್ಯದಲ್ಲಿರುವ ಅಸ್ಪøಶ್ಯತಾ ವಿರೋಧಿ ಧೋರಣೆಯನ್ನು, ಸಮಸಮಾಜದ ಕನಸನ್ನು ಎತ್ತಿಹಿಡಿಯುತ್ತದೆ.

ಶ್ರೀಯುತರು ತಮ್ಮಲ್ಲಿ ಅಂತರ್ಗತವಾಗಿರುವ ದಲಿತಪರ ಕಾಳಜಿಯ ಪ್ರತೀಕವಾಗಿ ಹಲವಾರು ದಲಿತ ಹೋರಾಟಗಾರರನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರ ಫಲಶೃತಿಯಾಗಿ ದಲಿತ ಹೋರಾಟಗಾರ ಅಯ್ಯನ್‍ಕಾಳಿ, ತಮಿಳು ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್, ಪೆರಿಯಾರ್: ಜೀವನ-ಚಳುವಳಿ, ರಮಾಬಾಯಿ ಅಂಬೇಡ್ಕರ್ ಜೀವನಚಿತ್ರ, ಆದಿವಾಸಿ ಹೋರಾಟಗಾರ ಕೊಮುರಂ ಭೀಮು ಎಂಬ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಈ ಎಲ್ಲಾ ಕೃತಿಗಳು ಕರ್ನಾಟಕದ ದಲಿತ ಹೋರಾಟಗಾರರಿಗೆ ಹಾಗೂ ದಲಿತ ಚಳುವಳಿಗೆ ಪ್ರೇರಕ ಶಕ್ತಿಯಾಗಿವೆ. ಇಂತಹ ವಿಶಿಷ್ಟ ಪ್ರತಿಭೆಗಳ ಹೋರಾಟ ಕ್ರಮವನ್ನು ಸುಜ್ಞಾನಮೂರ್ತಿಯವರು ಜೀವಪರ ಕಾಳಜಿಯಿಂದ ಕನ್ನಡಕ್ಕೆ ಪರಿಚಿಸಿದ್ದಾರೆ. ಇವರ ಈ ಶ್ರಮದ ಹಿಂದೆ ದಲಿತಪರವಾದ ತುಡಿತ ಮಿಡಿತವಿದೆ. ಇವರ ಆಂತರ್ಯದ ದಲಿತಪರ ತುಡಿತದ ಫಲವಾಗಿಯೇ ಇಂತಹ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಸಮರ್ಪಿಸಿದ್ದಾರೆ.

ಹೀಗಾಗಿ ಶ್ರೀಯುತ ಬಿ.ಸುಜ್ಞಾನಮೂರ್ತಿವರು ಕೇವಲ ಅನುವಾದಕರು ಮಾತ್ರವಲ್ಲ, ಅವರೊಳಗೊಬ್ಬ ಪ್ರಾಮಾಣಿಕ ನೆಲೆಯ ದಲಿತ ಚಿಂತಕನಿದ್ದಾನೆ. ಹಾಗೆಯೇ ಸಾವಿರಾರು ವರ್ಷಗಳಿಂದ ದಲಿತರನ್ನು ಜಾತಿಯ ಹೆಸರಿನಲ್ಲಿ ಶೋಷಿಸಿಕೊಂಡು ಬಂದ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಬಂಡಾಯದ ದನಿ ಎತ್ತುವ ದಲಿತಪರ ಹೋರಾಟಗಾರನಿದ್ದಾನೆ.

ಆದರೆ ಕರ್ನಾಟಕದ ದಲಿತಪರ ಚಿಂತಕರನ್ನು, ಸಾಹಿತಿಗಳನ್ನು ಉಲ್ಲೆಖಿಸುವಾಗ ಇವರನ್ನು ವಿಸ್ಮøತಿಗೆ ತಳ್ಳಲಾಗಿದೆ. ಆದರೆ ಇವರ ದಲಿತಪರ ಕಾಳಜಿಯಿಂದ ಮೂಡಿಬಂದ ಅನುವಾದಿತ ಕೃತಿಗಳ ಮೌಲ್ಯವನ್ನು ಗಮನಿಸಿದರೆ ಇವರೊಬ್ಬ ನಿಜವಾದ ದಲಿತಪರ ಚಿಂತಕರಾಗಿ ನಮಗೆ ಎದುರಾಗುತ್ತಾರೆ. ಇವರ ಶ್ರಮದ ಫಲವಾಗಿ ದಲಿತ ಸಾಹಿತ್ಯವು ವಿಭಿನ್ನ ಭಾಷೆಗಳ ವಿಚಾರಧಾರೆ ಹಾಗೂ ಚಿಂತನ ಕ್ರಮದಿಂದಾಗಿ ಶ್ರೀಮಂತವಾಗಿರುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೇ ಇಲ್ಲ.

ಸುಜ್ಞಾನಮೂರ್ತಿಯವರ ಅನುವಾದಿತ ಕೃತಿಗಳು ಬಹುಮುಖ್ಯವಾಗಿ ವೈಚಾರಿಕ ನೆಲೆಗಟ್ಟಿನಿಂದ ಕೂಡಿದ್ದು, ಸಾಮಾಜಿಕ ಅಸಮಾನತೆಯ ವಿರೋಧಿಸುವ ನಿಟ್ಟಿನಲ್ಲಿ ಮೂಡಿಬಂದಿವೆ. ಕುಟುಂಬ ವ್ಯವಸ್ಥೆ: ಮಾಕ್ರ್ಸ್‍ವಾದ-ಸ್ತ್ರೀವಾದ, ಪುರುಷ ಅಹಂಕಾರಕ್ಕೆ ಸವಾಲು, ನೇಣುಗಂಬದ ನೆರಳಿನಲ್ಲಿ, ತೆಲಂಗಾಣ ಹೋರಾಟ, ತೆಲಂಗಾಣ ರೈತ ಹೋರಾಟ ಎಂಬ ಶ್ರೀಯುತರ ಅನುವಾದಿತ ಕೃತಿಗಳು ಸಾಮಾಜಿಕ ತಾರತಮ್ಯ ನೀತಿಯನ್ನು ವಿರೋಧಿಸಿ ಸಮಸಮಾಜದ ನೆಲೆಗಟ್ಟಿನಲ್ಲಿ ರೂಪತಳೆದಿವೆ. ಈ ಅನುವಾದಿತ ಕಾರ್ಯದ ಹಿಂದೆ ಶ್ರೀಯುತರ ಸಮಾನತೆಯ ಆಶಯವಿದೆ.

ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನೆಲೆಯೂರಿರುವ ಅಸಮಾನತೆಯನ್ನು ಮೆಟ್ಟಿನಿಲ್ಲುವ ಹಾಗೂ ಪ್ರತಿಭಟಿಸುವ ಭಾಗವಾಗಿಯೇ ಈ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಮೂರ್ತರೂಪ ಪಡೆದಿವೆ. ಬುದ್ಧ, ಬಸವ, ಮಾಕ್ರ್ಸ್, ಗಾಂಧಿ, ಅಂಬೇಡ್ಕರ್ ಅವರಂತಹ ದಾರ್ಶನಿಕ ಚಿಂತನಧಾರೆಗಳಿಂದ ಪ್ರಭಾವಿತರಾದ ಸುಜ್ಞಾನಮೂರ್ತಿಯವರು, ಸಮಾನತೆಯ ಆಶಯಗಳನ್ನು ವಿಸ್ತರಿಸುವ ದೃಷ್ಟಿಕೋನದ ಅಡಿಯಲ್ಲಿ ವಿವಿಧ ಭಾಷೆಯ ಕೃತಿಗಳನ್ನು ಕನ್ನಡೀಕರಿಸಿದ್ದಾರೆ. ಈ ಅನುವಾದ ಕಾರ್ಯದಲ್ಲಿಯೂ ಜೀವಪರವಾದ ತುಡಿತ ಮಿಡಿತಗಳಿವೆ. ಈ ತುಡಿತ ಮಿಡಿತಗಳಿಗೆ ಅನುವಾದಕರು ಬೆಳೆದುಬಂದ ಸಾಮಾಜಿಕ ಪರಿಸರವು ಕೂಡ ಬಹುಮುಖ್ಯ ಪ್ರೇರಣೆಯನ್ನೊದಗಿಸಿದೆ.

ಸುಜ್ಞಾನಮೂರ್ತಿಯವರ ಅನುವಾದಿತ ಕೃತಿಗಳಲ್ಲಿ ಬಹುತೇಕ ಕೃತಿಗಳು ಕೋಮುವಾದ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಪ್ರತಿರೋಧಿಸುತ್ತವೆ. ಭಾರತದಲ್ಲಿ ನೆಲೆಯೂರಿರುವ ಕೋಮುವಾದ ಹಾಗೂ ಧಾರ್ಮಿಕ ಮೂಲಭೂತವಾದಿ ಕಟ್ಟುಪಾಡುಗಳನ್ನು ವಿರೋಧಿಸಿ ಹಲವಾರು ದಾರ್ಶನಿಕರು ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ ಭಾರತದ ಸನಾತನವಾದಿಗಳು ಇಂತಹ ದಾರ್ಶನಿಕ ಚಿಂತನಧಾರೆಗಳನ್ನು ನಿರಂತರವಾಗಿ ವೈದಿಕೀಕರಣಗೊಳಿಸುತ್ತ ಬಂದಿದ್ದಾರೆ.

ಇದರ ಪರಿಣಾಮವಾಗಿ ಇಂದಿಗೂ ಕೋಮುವಾದವು ಸಾಮಾಜಿಕ ಶಾಂತಿಯನ್ನು ಕದಡುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ನಿರಂತರವಾದ ರಕ್ತಪಾತ, ಸಾವು, ನೋವು, ಹಿಂಸೆಗಳು ಸಂಭವಿಸುತ್ತಿವೆ. ಇಂತಹ ಕೋಮುವಾದಿ ಧೋರಣೆಗಳನ್ನು ವಿರೋಧಿಸುವ ನಿಟ್ಟಿನಲ್ಲಿ ಶ್ರೀಯುತ ಸುಜ್ಞಾನಮೂರ್ತಿಯವರು ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮತಾಂಧತೆ ಮತ್ತು ಮಾನವೀಯತೆ, ಹಿಂದೂಧರ್ಮ ಅಂತರ್ಯುದ್ಧ ಲಕ್ಷಣಗಳು, ಆಧ್ಯಾತ್ಮಿಕ ಫ್ಯಾಸಿಸ್ಟರು ಬ್ರಾಹ್ಮಣರು, ಇಂಟಲೆಕ್ಚುವಲ್ ಗೂಂಡಾಗಳು ಎಂಬ ಕೃತಿಗಳು ಧಾರ್ಮಿಕ ಮೂಲಭೂತ ಸ್ವರೂಪವನ್ನು ಪ್ರತಿರೋಧಿಸುತ್ತವೆ.

ಸಾವಿರಾರು ವರ್ಷಗಳಿಂದ ಭಾರತದ ಮೂಲನಿವಾಸಿಗಳನ್ನು ಶೋಷಣೆಗೆ ಒಳಪಡಿಸಿಕೊಂಡು ಬಂದ ಸನಾತನವಾದದ ತಂತ್ರಗಾರಿಯನ್ನು ಇಲ್ಲಿ ಎತ್ತಿಹಿಡಿಯಲಾಗಿದೆ. ಆ ಮೂಲಕ ಮೂಲನಿವಾಸಿ ಭಾರತೀಯರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುವ ನಿಟ್ಟಿನಲ್ಲಿ ಈ ಕೃತಿಗಳು ಮೂಡಿಬಂದಿವೆ.

ಶ್ರೀಯುತ ಬಿ.ಸುಜ್ಞಾನಮೂರ್ತಿಯವರು ತೆಲುಗು ಭಾಷೆಯಿಂದ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಎಲ್ಲಾ ಕೃತಿಗಳು ವೈಚಾರಿಕ ನೆಲೆಯಿಂದ ಕೂಡಿವೆ. ವೈಚಾರಿಕ ಕೃತಿಗಳ ಅನುವಾದದ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಇವರ ವೈಚಾರಿಕ ಚಿಂತನೆಗಳಿಗೆ ಬಹುಮುಖ್ಯವಾದ ವೇದಿಕೆಯನ್ನು ರೂಪಿಸಿಕೊಟ್ಟಿರುವುದು ಕನ್ನಡ ಹಾಗೂ ಕರ್ನಾಟಕದ ಸಾಂಸ್ಕøತಿಕ ಕೇಂದ್ರವಾದ ಕನ್ನಡ ವಿಶ್ವವಿದ್ಯಾಲಯ.

ದೇಶಿಯತೆ ಹಾಗೂ ವೈಚಾರಿಕ ತಳಹದಿಯ ಮೇಲೆ ರೂಪಿತವಾದ ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟ ಗುಣವೇ ಸುಜ್ಞಾನಮೂರ್ತಿಯವರ ವೈಚಾರಿಕ ಶಕ್ತಿ ಎಂದರೆ ಅತಿಶಯೋಕ್ತಿಯಾಗದು. ಹೀಗಾಗಿ ಕನ್ನಡ ವಿಶ್ವವಿದ್ಯಾಲಯದ ಆವರಣದ ಕಲ್ಲುಗಳ ನಡುವೆ ಚಿಗುರೊಡೆದ ಕೆಲವೇ ವೈಚಾರಿಕ ಗರಿಕೆಯ ಕುಡಿಗಳಲ್ಲಿ ಸುಜ್ಞಾನಮೂರ್ತಿಯವರು ಒಬ್ಬರಾಗಿದ್ದಾರೆ. ಇವರು ಕನ್ನಡ ವಿಶ್ವವಿದ್ಯಾಲಯದ ಉಪ ನಿರ್ದೇಶಕರಾಗಿ ಸಾವಿರಾರು ಪುಸ್ತಕಗಳಿಗೆ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ.

ಇವರು ಪುಸ್ತಕ ಕ್ಷೇತ್ರದಲ್ಲಿ ಹೊಂದಿದ ಕಾರ್ಯಕ್ಷಮತೆಯಿಂದಾಗಿ ಹಲವಾರು ಕೃತಿಗಳು ಮೆರಗು ಪಡೆದುಕೊಂಡಿವೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಪುಸ್ತಕ ಲೋಕದೊಂದಿಗೆ ನಿರಂತರವಾದ ನಂಟನ್ನು ರೂಢಿಸಿಕೊಂಡು ಬಂದ ಶ್ರೀಯುತರು ಇಂದು ತಮ್ಮ ವೃತ್ತಿ ಜೀವನದಿಂದ ತಾಂತ್ರಿಕವಾಗಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಇವರು ತಮ್ಮ ವೃತ್ತಿ ಜೀವನದ ನಂತರ ವಿಶ್ರಾಂತ ಸಮಯದಲ್ಲಿಯೂ ಮತ್ತಷ್ಟು ವೈಚಾರಿಕ ಕೃತಿಗಳ ಅನುವಾದದ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುತ್ತಾರೆ ಎಂಬ ಬಲವಾದ ನಂಬಿಕೆಯಿದೆ. ಆದ ಕಾರಣ ಶ್ರೀಯುತರ ವಿಶ್ರಾಂತದ ದಿನಗಳು ಸುಖಕರವಾಗಿರಲೆಂದು ಹಾರೈಸುತ್ತ, ಶ್ರೀಯುತರಿಂದ ಮತ್ತಷ್ಟು ಸಾಹಿತ್ಯ ಕೃಷಿಯನ್ನು ಎದುರು ನೋಡುತ್ತೇವೆ.

(-ಡಾ.ಕೆ.ಎ.ಓಬಳೇಶ್
ಲೋಕಿಕೆರೆ, ದಾವಣಗೆರೆ ತಾ||ಜಿ||
ಮೊ: 9591420216)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version