ಬಹಿರಂಗ

ಸುಳ್ಳಿನ ಸುಳಿಯಲ್ಲಿ ಸುಲ್ತಾನ

Published

on

ಛತ್ರಪತಿ ಶಿವಾಜಿ | ಬೆಳವಾಡಿ ಮಲ್ಲಮ್ಮ
  • ಸುರೇಶ ಎನ್ ಶಿಕಾರಿಪುರ

ಛತ್ರಪತಿ ಶಿವಾಜಿ ಕ್ರಿ.ಶ. 1627ಅಥವಾ 19 ಫೆಬ್ರವರಿ1630 ರಂದು ಜನಿಸಿದ. 6 ಜೂನ್ 1674ರಲ್ಲಿ ಮರಾಠಾ ರಾಜ್ಯದ ರಾಜನಾಗಿ ಪಟ್ಟಾಭಿಶಿಕ್ತನಾಗಿ ಸುಮಾರು 1680 ಏಪ್ರಿಲ್ 14 ರಲ್ಲಿ ಮಹಾರಾಷ್ಟ್ರದ ರಾಯಗಡದಲ್ಲಿ ಸುಮಾರು ತನ್ನ 53ನೇ ವಯಸ್ಸಿನಲ್ಲಿ ಮರಣಹೊಂದಿದ. ಈ ನಡುವೆ ಶಿವಾಜಿ ಮರಾಠಾ ಸಾಮ್ರಾಜ್ಯ ವಿಸ್ತರಣೆಗೂ ಮುಂದಾದ. ದಕ್ಷಿಣದ ಕರ್ನಾಟಕದ ಅನೇಕ ಸಂಸ್ಥಾನಗಳ ಮೇಲೆ ದಾಳಿನೆಡೆಸಿದ.

ಇಷ್ಟನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ, ಶಿವಾಜಿ ಹದಿನೇಳನೇ ಶತಮಾನದಲ್ಲಿ ಹುಟ್ಟಿ ಹದಿನೇಳನೇ ಶತಮಾನದಲ್ಲೇ ತೀರಿಹೋದ. ಆತನಿಗೂ ಕರುನಾಡಿನ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗು ಬೈಲಹೊಂಗಲಗಳಿಗೂ ಸಮೀಪವಿರುವ ಬೆಳವಡಿ ಸಂಸ್ಥಾನದ ರಾಣಿ ಮಲ್ಲಮ್ಮನಿಗೂ ಘೋರವಾದ ಯುದ್ಧ ನಡೆದು ಅಕ್ಷರಷಃ ಶಿವಾಜಿ ವೀರ ಮಲ್ಲಮ್ಮನಿಂದ ಸೋತುಹೋದ.

ಬಹುಷಃ ಶಿವಾಜಿ ಛತ್ರಪತಿ ಶಿವಾಜಿರಾಜೆ ಷಹಾಜಿರಾಜೇ ಭೋಂಸ್ಲೆ ಆಗುವುದಕ್ಕೆ ಮುನ್ನವೇ ಅಂದರೆ 1674ಕ್ಕೂ ಮೊದಲೇ ಬೆಳವಡಿ ಎಂಬ ಪುಟ್ಟ ಸಂಸ್ಥಾನದ ಮೇಲೆ ಈ ದಾಳಿ ನೆಡೆಸಿರಬೇಕು. ಆತ ದಕ್ಷಿಣದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸುವುದಕ್ಕಿಂತ ಇಲ್ಲಿ ಸರ್ದೇಶ್ ಮುಖಿ ಮತ್ತು ಚೌತ ಕಂದಾಯ ವಸೂಲಿ ಮಾಡುವ ಉದ್ದೇಶ ಹೊಂದಿದ್ದನೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಅದೇನೇ ಇರಲಿ ಈ ಲೇಖನದ ಉದ್ಧೇಶ ಶಿವಾಜಿ ಬದುಕಿದ್ದು ಹಾಗೂ ಬೆಳವಡಿಯಲ್ಲಿ ಈಶಪ್ರಭು ಮತ್ತು ರಾಣಿ ಮಲ್ಲಮ್ಮ ಆಳುತ್ತಿದ್ದುದು ಹದಿನೇಳನೇ ಶತಮಾನದಲ್ಲಿ ಎನ್ನುವುದು ಸ್ಪಷ್ಟ.

ಈಗ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಿಚಾರಕ್ಕೆ ಬರೋಣ. ಹೈದರಾಲಿ ಹುಟ್ಟಿದ್ದು ಕ್ರಿ.ಶ 1720 ರಲ್ಲಿ ಇಂದಿನ ನಮ್ಮ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ. ಅಂದರೆ ಮಹಾರಾಠಾ ರಾಜ ಶಿವಾಜಿ ಜನಿಸಿ ಸುಮಾರು60 ವರ್ಷದ ನಂತರ ಮೈಸೂರು ಸಂಸ್ಥಾನದಲ್ಲಿ ಹೈದರಾಲಿ ಜನಿಸಿದ. ಹೈದರ್ ಶಿವಾಜಿ ಪಟ್ಟಾಭಿಶಿಕ್ತನಾಗಿ ಸುಮಾರು 46ವರ್ಷಗಳ ನಂತರ, ಶಿವಾಜಿ ಮಡಿದು ಸುಮಾರು 40ವರ್ಷದ ನಂತರ ಜನಿಸಿದ.

ಟಿಪ್ಪು ಜನಿಸಿದ್ದು 1750ರ ನವಂಬರ್ 7ನೇ ತಾರೀಖು. ಬೆಂಗಳೂರು ಸಮೀಪದ ದೇವನಹಳ್ಳಿಯ ಕೋಟೆಯಲ್ಲಿ ಶಿವಾಜಿ ಜನಿಸಿ ಸುಮಾರು 120ವರ್ಷಗಳ ನಂತರ ಬರೋಬ್ಬರಿ ಒಂದೂ ಕಾಲು ಶತಮಾನದ ಬಳಿಕ, ಶಿವಾಜಿ ಪಟ್ಟಾಭಿಶಿಕ್ತನಾಗಿ ಸುಮಾರು 76ವರ್ಷಗಳ ಬಳಿಕ, ಶಿವಾಜಿ ನಿಧನನಾಗಿ ಸುಮಾರು 70ವರ್ಷಗಳ ನಂತರ ಟಿಪ್ಪೂ ಜನಿಸಿದ.

ಬಹುಷಃ ಟಿಪ್ಪು ಜನಿಸುವ ಸುಮಾರು 80 ವರ್ಷಗಳ ಮುಂಚೆಯೇ ಬೆಳವಡಿ ಮಲ್ಲಮ ಜೀವಿಸಿದ್ದಳು ಶಿವಾಜಿಯೊಂದಿಗೆ ಹೋರಾಡಿದ್ದಳು. ಹೆಚ್ಚೂ ಕಡಿಮೆ ಟಿಪ್ಪೂ ಜನಿಸುವ 70-80 ವರ್ಷಗಳ ಮೊದಲೇ ತೀರಿಕೊಂಡು ಇತಿಹಾಸದ ಪುಟ ಸೇರಿದ್ದಳು. ಆಕೆ ವಯಸ್ಸಿನ ಲೆಕ್ಕದಲ್ಲಿ ಟಿಪ್ಪುವಿನ ಮುತ್ತಜ್ಜಿಗಿಂತಲೂ ಹಿರೀಕಳಾಗುತ್ತಾಳೆ.

ಸತ್ತು ಕಾಲಗರ್ಭದಲ್ಲಿ ಕರಗಿಹೋದ ಬೆಳವಡಿ ಮಲ್ಲಮ್ಮನನ್ನು ಟಿಪ್ಪು ಅತ್ಯಾಚಾರ ಮಾಡಲು ಹೇಗೆ ಸಾಧ್ಯ…? ಸಂಘಿಗಳೋ ಸಂಘದ ಸುಳ್ಳು ಇತಿಹಾಸದ ಪಾಠಗಳಿಂದ ಮೆದುಳು ಕೊಳೆತ ಯಾರೋ ಅವಿವೇಕಿಗಳು ಟಿಪ್ಪು ಬೆಳವಡಿ ಮಲ್ಲಮ್ಮನನ್ನು ಅತ್ಯಾಚಾರ ಮಾಡಿದ್ದನೆಂದು ಸುಳ್ಳು ಸುದ್ದಿ ಹರಿಯಬಿಟ್ಟು ಅಪಪ್ರಚಾರ ಮಾಡುತ್ತಿರುವ ಪೋಷ್ಟ್ ಗಳು ಕೆಲವನ್ನ ಇತ್ತೀಚೆಗೆ ಗಮನಿಸುತ್ತಿದ್ದೇನೆ.

ಶಿಕ್ಷಣವಿಲ್ಲದೇ ಹೋದರೆ ನಮ್ಮ ಯುವ ಸಮುದಾಯ ಏನಾಗಬಹುದು ಎಂದು ಕಲ್ಪಿಸಿಕೊಂಡರೆ ಗಾಬರಿಯಾಗುತ್ತದೆ‌. ಕಿತ್ತೂರು ಚನ್ನಮ್ಮನ ಕುರಿತು ಸಂಸಂದ ಪ್ರತಾಪಸಿಂಹ ಎಷ್ಟು ನಿಕೃಷ್ಟವಾದ ಹೇಳಿಕೆ ಕೊಟ್ಟಿದ್ದನೆಂಬುದನ್ನು ಮರೆಯುವ, ಕೇಳಿದರೂ ಕೇಳದಂತಿರುವ ನಮ್ಮ ಯುವಕರು ಓದುವುದಿಲ್ಲ ಹುಡುಕಾಡುವುದಿಲ್ಲ. ಸುಳ್ಳಿನ ಚಟ್ನಿ ಹಚ್ಚಿಕೊಟ್ಟ ಸುಳ್ಳಿನ ಬುತ್ತಿ ಉಂಡು ಹಾಳುಬೀಳುತ್ತಿದ್ದಾರೆ.

ಟಿಪ್ಪುವಿನ ಬಗೆಗೆ ಇಂಥಾ ಸುಳ್ಳುಗಳಿಗೇನೂ ಕೊರತೆಯಿಲ್ಲ. ಉತ್ತರಭಾರತದ ವಿಶ್ವವಿದ್ಯಾನಿಲಯವೊಂದರ ಪಠ್ಯದಲ್ಲಿ ಟಿಪ್ಪೂ ಕುರಿತ ಅಧ್ಯಾಯದಲ್ಲಿ ಆತ ಸುಮಾರು ಎರಡುವರೆ ಸಾವಿರ ಬ್ರಾಹ್ಮಣ ಪುರೋಹಿತರನ್ನು ಹತ್ಯೆ ಮಾಡಿದನೆಂದು ಉಲ್ಲೇಖಿಸಲಾಗಿದ್ದಿತಂತೆ.

ಹಿರಿಯ ಇತಿಹಾಸ ವಿಧ್ವಾಂಸರಾದ ಬಿಶ್ವಂಬರನಾಥ್ ಪಂಡಿತ ಎನ್ನುವವರು ಅಚ್ಚರಿಗೊಂಡು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಬೆನ್ನುಹತ್ತಲಾಗಿ ಸದರಿ ಪಠ್ಯವನ್ನು ನಿಯೋಜಿಸಿದ್ದ ಬ್ರಾಹ್ಮಣ ವಿದ್ವಾಂಸರಿಗೆ ವಿಚಾರಿಸಿದರೆ ಅವರು ಅನೇಕ ದಾಖಲೆಗಳ ಸುಳ್ಳು ಮಾಹಿತಿ ಕೊಡುತ್ತಾರೆ ಕಡೆಗೆ ಮೈಸೂರಿನ ಗ್ಯಾಜೆಟಿಯರ್ ನಲ್ಲಿ ತಾನು ಓದಿದ್ದುದಾಗಿ ಹೇಳುತ್ತಾರೆ.

ಆದರೆ ಬಿಶ್ವಂಬರನಾಥರು ಆಗಲೂ ಬಿಡದೆ ವಿಶ್ವವಿದ್ಯಾನಿಲಯದ ಗ್ಯಾಜಟಿಯರ್ ಸಂಪಾದಕರಿಗೆ ಪತ್ರ ಬರೆಯಲಾಗಿ ಆ ಯಾವುದೇ ದಾಖಲೆಗಳು ಮೈಸೂರು ಗ್ಯಾಜಟಿಯರ್ ಸಂಪಾದನೆಯ ವೇಳೆ ದೊರೆತಿಲ್ಲವೆಂದು ಮಾಹಿತಿ ಪಡೆದು ಹಾಗೂ ಬೇರಾವುದೇ ದಾಖಲೆಗಳಲ್ಲಾಗಲೀ ಮಾಹಿತಿ ಸಿಗಲಿಲ್ಲವಾಗಿ ಆ ಸುಳ್ಳು ಬಿತ್ತಿದ ಪಠ್ಯವನ್ನು ಕಿತ್ತುಹಾಕಿಸುತ್ತಾರೆ. ಇಂತವೇ ಸುಳ್ಳುಗಳು ಕೊಡಗಿನಲ್ಲಿ ನೆಡೆಯಿತೆನ್ನಲಾದ ಮಾರಣಹೋಮಕ್ಕೆ ಸಂಬಂಧಿಸಿದವು.

ನಿಜವಾಗಲೂ ಸಂಘಪರಿವಾರದ ಹಿನ್ನೆಲೆಯ ಕೆಲವು ಪೂರ್ವಾಗ್ರಹಪೀಡಿತ ನಕಲಿ ಇತಿಹಾಸಕಾರರು ಕೊಡುವ ಲೆಕ್ಕ ಅಚ್ಚರಿ ಹುಟ್ಟಿಸುತ್ತದೆ. ಟಿಪ್ಪು ತೀರಿಕೊಂಡ ಸುಮಾರು ತೊಂಬತ್ತು ವರ್ಷಗಳ ಬಳಿಕ ನೆಡೆಸಿದ ಸೆನ್ಸಸ್ ನಲ್ಲಿ ಕರ್ನಾಟಕದ ಮೈಸೂರಿನ ಜನಸಂಖ್ಯೆ ಸುಮಾರು ಮೂವತ್ತಾರು ಲಕ್ಷ. ಕೊಡಗಿನಲ್ಲಿ ಹಾಗಾದರೆ ಟಿಪ್ಪು ಬದುಕಿದ್ದ ಕಾಲಕ್ಕೆ ಒಂದಿಪ್ಪತ್ತು ಲಕ್ಷ ಜನಸಂಖ್ಯೆ ಅವನ ರಾಜ್ಯದಲ್ಲಿದ್ದಿರಬಹುದು.

ಕೊಡಗು ಒಂದರಲ್ಲೇ ಅದೂ ದಟ್ಟ ಕಾಡು ಕಣಿವೆ ಬೆಟ್ಟಗಳೇ ತುಂಬಿರುವ ಕೊಡಗಿನಲ್ಲಿಯೇ ಐದು ಲಕ್ಷ ಜನ ಇರಲು ಸಾಧ್ಯವೇ? ಇನ್ನು ಲಕ್ಷಾಂತರ ಜನರನ್ನು ಕೊಂದರೆಂಬುದು ಎಂಥಹಾ ಹಸಿಸುಳ್ಳು ಅಲ್ಲವೇ? ಜನತೆ ಯೋಚಿಸಬೇಕು. ಯುವಕರು ಓದಬೇಕು ಚರಿತ್ರೆಯನ್ನು ನಿಮ್ಮ ವಿವೇಕಕ್ಕೆ ಕಪ್ಪು ಬಟ್ಟೆ ಕಟ್ಟಿ ಒಪ್ಪಿಸಲಾಗುತ್ತಿದೆ ಅದನ್ನು ಕಿತ್ತೆಸೆದು ನಿಮ್ಮದೇ ಒಳನೋಟದಿಂದ ಓದಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು.

ಟಿಪ್ಪುವನ್ನು ಅಥವಾ ಮುಸ್ಲಿಮರನ್ನು ಈ ಬಗೆಯ ಸುಳ್ಳುಗಳ ಮೂಲಕ ಕ್ರೂರಿಗಳನ್ನಾಗಿ ಚಿತ್ರಿಸಿ ಆ ಇಡೀ ಸಮುದಾಯದ ವಿರುದ್ಧ ದಲಿತ ಮತ್ತು ಶೂದ್ರರೆಂಬ ಹುಂಬರನ್ನು ಎತ್ತಿಕಟ್ಟಿ ತಾವು ಅಧಿಕಾರದ ಗದ್ದುಗೆ ಏರುವ ಕುತಂತ್ರವನ್ನು ಈ ದೇಶದ ಪುರೋಹಿತಶಾಹಿ ಯಾವ ಮಾನವೀಯ ಅಂತಃಕ್ಕರಣವನ್ನೂ ಇಟ್ಟುಕೊಳ್ಳದೆ ನಿರಂತರವಾಗಿ ಪ್ರಯೋಗಿಸುತ್ತಲೇ ಬಂದಿದೆ.

ಟಿಪ್ಪು ಮುಸ್ಲಿಮನಾಗಿ ಹುಟ್ಟಿದ್ದೇ ತಪ್ಪಾಗಿದೆ. ಆತ ಹಿಂದೂವಾಗಿದ್ದರೆ ಯಾವ ಶಿವಾಜಿಗೂ ಸಿಗದ ಮಹತ್ವ ಪ್ರಚಾರ ಬಹುಪರಾಕು ಉತ್ಸವ ಮೆರೆದಾಟಗಳು ಟಿಪ್ಪುವಿಗೂ ಸಲ್ಲುತ್ತಿದ್ದವು. ಅವನ ಹೆಸರಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಶಾಸಕರು ಎಂಪಿಗಳು ಹುಟ್ಟುತ್ತಿದ್ದರೋ ಗೊತ್ತಿಲ್ಲ. ಬೆಳವಡಿ ಮಲ್ಲಮ್ಮನನ್ನು ಟಿಪ್ಪು ಅತ್ಯಾಚಾರ ಮಾಡಿದ್ದ ಎಂಬುದು ಎಷ್ಟು ಸುಳ್ಳೋ ಅಷ್ಟೇ ಚಾರಿತ್ರಿಕ ಅಪಚಾರವೂ ಹೌದು.

ತಮ್ಮ ಸುಳ್ಳುಗಳ ಮೂಲಕ ಸತ್ಯವನ್ನು ತೆರೆದಿಡಲು ನಮ್ಮಂತವರಿಗೆ ಅವಕಾಶ ಮಾಡಿಕೊಡುತ್ತಿರುವ ಕೋಮುವಾದಿಗಳಿಗೆ ಅನಂತ ಧನ್ಯವಾದಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version