ದಿನದ ಸುದ್ದಿ
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
- ದಿವ್ಯಾಂಗರಿಗೆ ಸಂಪನ್ಮೂಲಗಳು ಮತ್ತು ಮೂಲಸೌಕರ್ಯ ಸುಲಭವಾಗಿ ಸಿಗುವಂತಾಗಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಅನೇಕ ಸ್ಟಾರ್ಟ್ ಅಪ್ ಗಳು ಮತ್ತು ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರೇರಣಾದಾಯಕ ಕೆಲಸಗಳನ್ನು ಮಾಡುತ್ತಿವೆ. ದಿವ್ಯಾಂಗ ಕ್ರೀಡಾಪಟುಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ.
- ಜಲಸಂರಕ್ಷಣೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನೀರಿನ ಲಭ್ಯತೆ ಅಥವಾ ಅಭಾವದಿಂದ ದೇಶದ ಪ್ರಗತಿ ಮತ್ತು ಗತಿಯನ್ನು ನಿರ್ಧರಿಸಲಾಗುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದರು.
- ನೀರು ಜೀವನಾಧಾರ ಮತ್ತು ಅತಿದೊಡ್ಡ ಸಂಪನ್ಮೂಲ ಎಂಬ ಬಗ್ಗೆ ಶಾಸನಗಳ ಉಲ್ಲೇಖ ನೀಡಿ, ವೇದ-ಪುರಾಣಗಳಲ್ಲಿ ಜಲಸಂರಕ್ಷಣೆ ಮತ್ತು ಕೆರೆಗಳ ನಿರ್ಮಾಣವನ್ನು ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯ ಎಂಬುದಾಗಿ ವಿವರಿಸಲಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
- ದೇಶ ರಾಜ್ಯದಲ್ಲಿಯೇ ಕುಳಿತು ಬೇರೆ ದೇಶಗಳ ವಿಳಾಸ ನೀಡಿ ಆತಂಕ ಒಡ್ಡುವ ಕೃತ್ಯಗಳನ್ನು ಸೃಜಿಸುವವರ ಬಗ್ಗೆ, ಖಚಿತ ಮಾರ್ಗಗಳ ಮೂಲಕ ಪತ್ತೆ ಮಾಡಲಾಗುವುದು. ಕೇಂದ್ರ ಸರ್ಕಾರದ ಮೂಲಕ ವಿದೇಶಗಳ ಭದ್ರತಾ ವಿಭಾಗ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುವುದು. ಪೂರ್ಣ ಪ್ರಮಾಣದ ತನಿಖೆ ಕೈಗೊಂಡು ಇಮೇಲ್ ಮೂಲಕ ಪತ್ತೆ ಮಾಡಲಾಗುವುದು. ಪ್ರಕರಣದ ಆಳಕ್ಕೆ ಹೋಗಿ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿಂದು ಹೇಳಿದ್ದಾರೆ.
- ವರನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರ 94ನೇ ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿಂದು ರಾಜಕುಮಾರ್ ರಥೋತ್ಸವ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವಾರದ ಕೆ. ಗೋಪಾಲಯ್ಯ, ಸೋಮಣ್ಣ, ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಾ.ರಾಜ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಅಭಿಮಾನದ ದಿನವನ್ನಾಗಿ ಆಚರಣೆ ಮಾಡಲಾಯಿತು.
- ದೊಡ್ಡಬಳ್ಳಾಪುರದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳಿಂದ ಡಾ.ರಾಜ್‌ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ರಾಜ್‌ಕುಮಾರ್ ಜನ್ಮದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243