ದಿನದ ಸುದ್ದಿ

ಈಗಲಾದರೂ ಮೀನುಗಾರರ ಕುಟುಂಬಗಳು ನ್ಯಾಯ ಪಡೆದುಕೊಳ್ಳಲಿ

Published

on

ಕಳೆದ ಡಿಸೆಂಬರ್ 15 ರಂದು ನಾಪತ್ತೆಯಾಗಿದ್ದ ಕರ್ನಾಟಕದ ಮೀನುಗಾರರಿದ್ದ ಸುವರ್ಣ ತ್ರಿಭುಜ ದೋಣಿ ಮೊನ್ನೆ ಪತ್ತೆಯಾಗಿದೆ ಎಂದು ನೌಕಾಪಡೆ ದೋಣಿಯ ಫೋಟೋ ಸಮೇತ ಬಹಿರಂಗಪಡಿಸಿದೆ.ಆದರೆ ಮೀನುಗಾರರು ಬದುಕಿ ಉಳಿದಿರುವ ಲಕ್ಷಣಗಳು ತೋರುತ್ತಿಲ್ಲ.

ಇದೀಗ ಉಡುಪಿ ಶಾಸಕರು ಮತ್ತು ಮಾಜಿ ಸಚಿವರು ನೇರವಾಗಿ ಭಾರತೀಯ ನೌಕಾಪಡೆಯ ಐ ಎನ್ ಎಸ್ ಕೊಚ್ಚಿನ್ ನೌಕೆಯೇ ಮೀನುಗಾರರ ದೋಣಿಗೆ ಹೊಡೆದು ಮುಳಿಗಿಸಿರುವ ಆತಂಕ ವ್ಯಕ್ತಪಡಿಸಿದ್ದಾರೆ.
ಇದೆಲ್ಲ ಸುಳ್ಳಾಗಲಿ, ನಮ್ಮ ಮೀನುಗಾರರು ಬದುಕಿರಲಿ ಎಂದು ಆಶಿಸೋಣ. ಆದರೆ ಅಕಸ್ಮಾತ್ ಇವರು ವ್ಯಕ್ತಪಡಿಸಿರುವ ಅನುಮಾನ ನಿಜವೇ ಆಗಿದ್ದರೆ!? ಆಗ ಕೆಲವು ಗಂಭೀರ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ.

  1. ಮೀನುಗಾರರ ಬೋಟು ಪತ್ತೆಯಾಗಿರುವುದು ಮಹಾರಾಷ್ಟ್ರ ಕರಾವಳಿಯಿಂದ ಕೇವಲ 33 ಕಿಲೋಮೀಟರ್ ದೂರದಲ್ಲಿ. ಡಿಸೆಂಬರ್ 13 ರಿಂದ ಇದುವರೆಗೆ ದೇಶದ ಪಶ್ಚಿಮ ಕರಾವಳಿಯಲ್ಲಾಗಲೀ, ಅರಬ್ಬೀ ಸಮುದ್ರದಲ್ಲಾಗಲೀ ಯಾವುದೇ ಹವಾಮಾನ ವೈಪರೀತ್ಯ ಆದ ವರದಿ ಇಲ್ಲ. ಅಂದರೆ ಬೋಟು ಹಾಳಾಗಿಯೋ, ಹಿಡಿತ ತಪ್ಪಿಯೋ ಸಮುದ್ರದಲ್ಲಿ ಮುಳುಗಿದರೆ ಕನಿಷ್ಟ ಸಂದೇಶವನ್ನು ತಲುಪಿಸಲಾರದ ಸ್ಥಿತಿಯಂತೂ ಇರುವುದಿಲ್ಲ. ಹಾಗೆ ಮುಳುಗಿದರೆ ಲೈಫ್ ಜಾಕೆಟ್ ಧರಿಸಿ ಕೆಲವರಾದರೂ ಬದುಕಿ ಉಳಿಯುವ ಸಾಧ್ಯತೆ ಇರುತ್ತದೆ.
  2. ಬೋಟ್ ಮುಳುಗಿರುವುದು ಹೀಗಲ್ಲವಾದರೆ ಉಳಿಯುವ ಎರಡು ಸಾದ್ಯತೆಗಳೆಂದರೆ ಒಂದು ಶತ್ರುಪಡೆಯ ಯುದ್ಧ ನೌಕೆ ಹೊಡೆದು ಮುಳುಗಿಸಿರುವುದು ಮತ್ತೊಂದು ನಮ್ಮದೇ ನೌಕಾಪಡೆ ಶತ್ರುಗಳ ದೋಣಿ ಎಂದು ಭಾವಿಸಿಯೋ ಅಥವಾ ಬೇರಾವ ಕಾರಣದಿಂದಲೋ ಮೀನುಗಾರರ ದೋಣಿಯನ್ನು ಹೊಡೆದು ಮುಳುಗಿಸಿರುವುದು.
  3. ದೋಣಿ ಪತ್ತೆಯಾಗಿರುವುದು ಭಾರತದ ಸಾಗರ ಗಡಿಯೊಳಗೆ ಆಗಿರುವುದರಿಂದ ಇದು ಶತ್ರುಪಡೆಯ ಕೆಲಸ ಅಲ್ಲ ಎಂದು ಹೇಳಬಹುದು. ಕೊನೆಯ ಸಾಧ್ಯತೆ ನಮ್ಮದೇ ನೌಕಾಪಡೆ ದಿಡೀರ್ ದಾಳಿ ನಡೆಸಿ ಸುವರ್ಣ ತ್ರಿಭುಜ ದೋಣಿಯನ್ನು ಮುಳುಗಿಸಿರುವುದು.
  4. ಇದು ಹೀಗೇ ಆಗಿದ್ದ ಪಕ್ಷದಲ್ಲಿ ನಾಲ್ಕು ತಿಂಗಳ ಕಾಲ ಮಾಹಿತಿಯನ್ನು ಮುಚ್ಚಿಡಲಾಗಿದೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆ.
  5. ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಇದ್ದ ಕಾರಣದಿಂದಲೇ ಈ ನಾಲ್ಕು ತಿಂಗಳ ಕಾಲ ತೋರಿಕೆಯ ಹುಡುಕಾಟ ನಡೆಸುತ್ತಿದ್ದುದನ್ನು ಗಮನಿಸಬಹುದು.
  6. ಇಲ್ಲಿ ನೌಕಾಪಡೆ ತಿಳಿದೋ ತಿಳಿದೆಯೋ ಮೀನುಗಾರರ ದೋಣಿಯನ್ನು ಮುಳುಗಿಸರಬಹುದು. ಆದರೆ ಕೇಂದ್ರ ಸರ್ಕಾರ ಮಾತ್ರ ಉದ್ದೇಶಪೂರ್ವಕವಾಗಿ ಸತ್ಯವನ್ನು ಮುಚ್ಚಿಟ್ಟಿದೆ ಎನಿಸುತ್ತದೆ. ಇದು ನಿಜವಾಗಿದ್ದರೆ ಮೀನುಗಾರರ ಕುಟುಂಬಗಳ ದೃಷ್ಟಿಯಿಂದ ಅಕ್ಷಮ್ಯ ಅಪರಾಧವೇ ಸರಿ.
  7. ಸಚಿವ ಪ್ರಮೋದ್ ಮಧ್ವರಾಜ್, ಮೀನುಗಾರ ಸಮುದಾಯದ ಮುಖಂಡ ಜಿ ಶಂಕರ್ ಮೊದಲಾದವರು ಆಗ್ರಹಿಸಿರುವ ರೀತಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದೇ ಸೂಕ್ತ.
  8. ಸತ್ಯವನ್ನು ಮುಳುಗಿಸಲು ಆಸ್ಪದ ನೀಡಲಾಗದು. ಮೀನುಗಾರರ ದೋಣಿ ಹೇಗೆ ಮುಳುಗಿತು, ಎಲ್ಲಿ ಮುಳಿಗಿತು? ಯಾರಿಂದ ಮುಳುಗಿತು, ಮೀನುಗಾರರು ಏನಾದರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕು.

ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಕೇಂದ್ರ ಸರ್ಕಾರ ಹಿಂದೆ ಮುಂದೆ ಯೋಚಿಸಿದರೆ ಅದು ಕರಾವಳಿಯ ಮೀನುಗಾರ ಸಮುದಾಯಕ್ಕೆ ದೊಡ್ಡ ದ್ರೋಹವಾಗಲಿದೆ. ಕನಿಷ್ಟ ಈಗಲಾದರೂ ಮೀನುಗಾರರ ಕುಟುಂಬಗಳು ನ್ಯಾಯ ಪಡೆದುಕೊಳ್ಳಲಿ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version