ಕ್ರೀಡೆ
ಅಮೆರಿಕಾ ಪರ ಆಡಿ ಪಾಕಿಸ್ತಾನ ಸೋಲಿಸಿದ ಆ ಬೌಲರ್ಸ್ ಮೂಲ ಚಿಕ್ಕಮಗಳೂರು, ಮುಂಬೈ !
- ಸಿದ್ದು ಸತ್ಯಣ್ಣನವರ್
ಸದ್ಯ ನಡೆದಿರುವ T-20 ಕ್ರಿಕೆಟ್ ವಿಶ್ವಕಪ್ ನಲ್ಲಿ ದಿಟ್ಟ ಆಟವಾಡಿದ ಅಮೆರಿಕಾ ತಂಡ ಬಲಿಷ್ಟ ಪಾಕಿಸ್ತಾನ ತಂಡವನ್ನು ಸೂಪರ್ ಓವರಿನಲ್ಲಿ 5 ರನ್ ಅಂತರದಿಂದ ಸೋಲಿಸಿತು. ವಿವಿಧ ರಾಷ್ಟ್ರಗಳ ಮೂಲದ ಆಟಗಾರರನ್ನೇ ಹೆಚ್ಚು ಹೊಂದಿರುವ ಅಮೆರಿಕಾ ತಂಡದ ಗೆಲುವಿನಲ್ಲಿ ಗಮನ ಸೆಳೆದ ಹೆಸರು ಕರ್ನಾಟಕದ ಚಿಕ್ಕಮಗಳೂರಿನ ನೋಸ್ತುಶ್ ಪ್ರದೀಪ್ ಕೆಂಜಿಗೆ ಹಾಗೂ ಮುಂಬೈ ಮೂಲದ ಸೌರಭ್ ನೇತ್ರಾವಲ್ಕರ್ ಅವರದು. ನೋಸ್ತುಶ್ ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಂಜಿಗೆ ಗ್ರಾಮದವರು. ಕನ್ನಡದ ಹೆಸರಾಂತ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿಯವರೊಡನೆ ಮಿಲೇನಿಯಮ್ ಸರಣಿಯ ಪುಸ್ತಕಗಳನ್ನು ನೀಡಿದ ಸಾಹಿತಿ, ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅವರ ಪುತ್ರ ನೋಸ್ತುಶ್.
ಅಮೆರಿಕಾ ತಂಡ ತನ್ನ ಕೋಟಾದ 20 ಓವರ್ ಬೌಲಿಂಗ್ ಮುಗಿಸಿದಾಗ ಸ್ಕೋರ್ ಬೋರ್ಡ್ ಮೇಲೆ ನೋಸ್ತುಶ್ ಅವರ ಆಟದ ವೈಖರಿಯ ಅಂಕಿಸಂಖ್ಯೆ 4-0-30-3.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದದ್ದು ಪಂದ್ಯದ ತಿರುವುಗಳಲ್ಲೊಂದು. ಪಾಕ್ ನೀಡಿದ 160 ರನ್ ಲಕ್ಷ್ಯ ಬೆನ್ನಟ್ಟಿದ ಅಮೆರಿಕನ್ನರು 159 ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡ ಕಾರಣಕೆ ಸೂಪರ್ ಓವರಿನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಅಮೆರಿಕ ನೀಡಿದ ಗುರಿ 19 ರನ್. ಆಗ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಅಮೆರಿಕಾ ತಂಡದ ನಾಯಕ ಚೆಂಡಿತ್ತದ್ದು ಎಡಗೈ ವೇಗಿ ಸೌರಭ್ ನೇತ್ರಾವಲ್ಕರ್ ಅವರ ಕೈಗೆ. ಆರು ಎಸೆತಗಳಲ್ಲಿ 13 ರನ್ ಅಷ್ಟೇ ನೀಡಿದ ನೇತ್ರಾವಲ್ಕರ್ ಅಮೆರಿಕ ತಂಡದ ಜಯಕ್ಕೆ ಕಾರಣರಾದರು. ಭಾರತದ ಪರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ U-19 ವಿಶ್ವಕಪ್ ಆಡಿದ್ದ ಹಾಗೂ ಮುಂಬೈ ಪರ ರಣಜಿ ಪಂದ್ಯಗಳಲ್ಲೂ ಮಿಂಚಿದ್ದ ನೇತ್ರಾವಲ್ಕರ್ ಸದ್ಯ ಅಮೆರಿಕಾದಲ್ಲಿ ಟೆಕ್ಕಿ. ಅಮೆರಿಕಾ ಪರ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ತಂಡದ ಪ್ರಮುಖ ಖಾಯಂ ಸದಸ್ಯರಾಗಿದ್ದಾರೆ.
ನೋಸ್ತುಶ್ ಕೆಂಜಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಕ್ರಿಕೆಟ್ ತರಬೇತಿ ಪಡೆದರೂ, ಕ್ಲಬ್ ಕ್ರಿಕೆಟ್ ಆಡಿದರೂ ಭಾರತದಲ್ಲಿ ಸ್ಪರ್ಧೆ ಹೆಚ್ಚಾಗಿರುವ ಕಾರಣಕೆ ಅವಕಾಶ ಸಿಗುವ ಸಾಧ್ಯತೆ ಬಹಳ ಕಷ್ಟವಿತ್ತು. ಆ ಕಾರಣಕೆ ಉದ್ಯೋಗ ನಿಮಿತ್ತ ಅಮೆರಿಕಾ ತೆರಳಿದವರಿಗೆ ಅಲ್ಲಿಯ ರಾಷ್ಟ್ರೀಯ ತಂಡಕ್ಕೆ ಆಡುವ ಸುಯೋಗ ಒಲಿಯಿತು. 2017ರಲ್ಲಿ ನೋಸ್ತುಶ್ ಅವರು ಅಮೆರಿಕಾ ಪರ ಪಾದಾರ್ಪಣೆ ಮಾಡಿದಾಗ ಅವರ ಸಮಕಾಲೀನರಾದ ಈಗಾಗಲೇ ಭಾರತದ ಪರ ಜನಪ್ರಿಯರಾಗಿರುವ ಬ್ಯಾಟರ್ ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಆಡಿದವರು. ಎಡಗೈ ಸ್ಪಿನ್, ಬಲಗೈ ಬ್ಯಾಟಿಂಗ್ ಕೌಶಲ ಹೊಂದಿರುವ ನೋಸ್ತುಶ್ ಹಾಗೂ ಸೌರಭ್ ಅವರ ಪಾಕಿಸ್ತಾನದ ವಿರುದ್ಧದ ಆಟ ಅಮೆರಿಕಾ ತಂಡಕ್ಕೆ ಗೆಲುವು ಕೊಡಿಸಿತು. ಆ ಮೂಲಕ ಕ್ರಿಕೆಟ್ ಶಿಶು ಎಂದು ಕರೆಯಲ್ಪಟ್ಟರೂ ಬಲಿಷ್ಟ ಪಾಕಿಸ್ತಾನವನ್ನು ಸೋಲಿಸಲು ಕಾರಣವಾದ ಅಮೆರಿಕಾ ತಂಡದ ಸಂತಸಕೆ ಕನ್ನಡಿಗನ ಕೊಡುಗೆಯು ಸೇರಿ ಮುಂಬೈ ಮೂಲದ ಸೌರಭ್ ಅವರ ಪ್ರದರ್ಶನವು ಕಾರಣವಾಯಿತು.
ಅಮೆರಿಕ ತಂಡ ಪಾಕ್ ವಿರುದ್ಧ ಗೆಲ್ಲಲು ಮಾಡಿದ ಸಂಘಟಿತ ಹೋರಾಟ ಖಂಡಿತ ಕ್ರಿಕೆಟ್ ಪ್ರಿಯರ ಮನಸೆಳೆಯುವಂತಿತ್ತು. ಈ ಜಯ ಹಾಗೂ ವಿಶ್ವಕಪ್ ಆತಿಥ್ಯದಿಂದ ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯವಾಗಿ ಬೆಳೆಯಲು ಕಾರಣವಾಗಬಹುದು. (ಕೃಪೆ : ಸಿದ್ದು ಸತ್ಯಣ್ಣನವರ್ ಫೇಸ್ ಬುಕ್ ಪೇಜ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243