ಸಿನಿ ಸುದ್ದಿ
ಲ್ಯಾಂಬರ್‌ಗಿನಿಗಾಗಿ ರಸ್ತೆ ಸರಿಮಾಡಿಸಿ ಎಂದಿದ್ದ ನಟನ ತಾಯಿ ಪಾತ್ರೆಯಲ್ಲಿ ಪಯಣ!
ಸುದ್ದಿದಿನ ಡೆಸ್ಕ್ | ಭಾರಿ ಮಳೆಯಿಂದಾಗಿ ನೀರಿನಿಂದ ಆವೃತವಾಗಿರುವ ಕೇರಳದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಅವರ ತಾಯಿ ಮಲ್ಲಿಕಾ ಸುಕುಮಾರನ್ ಅವರನ್ನು ಪಾತ್ರೆಯೊಂದರಲ್ಲಿ ಕೂರಿಸಿಕೊಂಡು ನಾಲ್ಕೈದು ಜನ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲಿ ಟ್ರೋಲ್‌ಗೆ ಗುರಿಯಾಗಿದೆ.
ತಮ್ಮ ಪುತ್ರ ಪೃಥ್ವಿರಾಜ್ ಕೆಲವು ತಿಂಗಳ ಹಿಂದಷ್ಟು ಲ್ಯಾಂಬರ್‌ಗಿನಿ ಕಾರು ಕೊಂಡಾಗ ಈ ಕಾರು ಓಡಿಸಲು ಅನುವಾಗುವಂತೆ ತಮ್ಮ ಮನೆ ಮುಂದಿನ ರಸ್ತೆಯನ್ನು ಸರಿ ಮಾಡಿಸಿಕೊಡಬೇಕೆಂದು ಮಲ್ಲಿಕಾ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಈಗ ಕಾರಿರಲಿ ರಸ್ತೆಯಲ್ಲಿ ನಡೆದು ಬರಲೂ ಸಾಧ್ಯವಾಗದೆ ಪಾತ್ರೆಯಲ್ಲಿ ಕೂರಿಸಿಕೊಂಡು ಹೋಗುತ್ತಿರುವ ಫೋಟೊ ವೈರಲ್ ಆಗಿದೆ.
ಮಲ್ಲಿಕಾ ಅವರು ಈ ಫೋಟೊ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಅವರು ನಾಲ್ಕು ನಿಮಿಷದ ವಿಡಿಯೊ ಅಪ್‌ಲೋಡ್ ಮಾಡಿದ್ದು, ನೆರೆಯಿಂದಾಗಿ ತಮ್ಮ ಮನೆಯ ಎರಡನೇ ಮಹಡಿಯಲ್ಲಿದ್ದರೂ ನೀರು ಹೇಗೆ ನುಗ್ಗಿ ಬಂತು ಎಂಬುದನ್ನು ವಿವರಿಸಿದ್ದಾರೆ.