ಸಿನಿ ಸುದ್ದಿ
ಖ್ಯಾತ ತಮಿಳು ನಟ ವಿಶಾಲ್ ಅರೆಸ್ಟ್..!?
ಸುದ್ದಿದಿನ,ಚೆನ್ನೈ: ಖ್ಯಾತ ತಮಿಳು ನಟ ಮತ್ತು ನಿರ್ಮಾಪಕ ವಿಶಾಲ್‌ನನ್ನು ಚೆನ್ನೈ ಪೊಲೀಸರು ಟೆನೆಂಪೆಂಟ್‌ನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಚಲನಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷರಾಗಿರುವ ವಿಶಾಲ್ ಅವರು ನಿನ್ನೆಯಷ್ಟೇ ಮತ್ತೊಂದು ಬಣದ ನಿರ್ಮಾಪಕರು ಬೀಗ ಹಾಕಿದ್ದ ಟೆನೆಂಪೆಟ್‌ನಲ್ಲಿನ ನಿರ್ಮಾಪಕರ ಸಂಘದ ಕಚೇರಿಯ ಬೀಗವನ್ನು ಹೊಡೆಯಲು ಯತ್ನಿಸಿರುವ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಮಾಪಕರ ಮಂಡಳಿಯ ಹಣವನ್ನು ವಿಶಾಲ್ ಅವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹಲವು ನಿರ್ಮಾಪಕರು ಆರೋಪಿಸಿದ್ದಾರೆ. ಒಂದೇ ದಿನ ಹಲವಾರು ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಇದ್ದ ನಿರ್ಬಂಧವನ್ನು ತೆಗೆದುಹಾಕಿರುವುದಕ್ಕೆ ವಿಶಾಲ್ ವಿರುದ್ಧ ಹಲವರು ಅಸಮಾಧಾನಗೊಂಡಿದ್ದರು. ಹೀಗಾಗಿ ತಮಿಳು ಸಿನಿಮಾ ನಿರ್ಮಾಪಕರು ಬೀದಿಯಲ್ಲೇ ಜಗಳವಾಡಿಕೊಂಡಿದ್ದಾರೆ. ವಿಶಾಲ್ ಅವರು ತಮಿಳು ಕಲಾವಿದರ ಸಂಘಟನೆಯಾದ ನಾದಿಗರ್ ಸಂಗಮ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದು, 2015ರಲ್ಲಿ ಹುದ್ದೆಗೆ ಆಯ್ಕೆಯಾಗಿದ್ದರು.
ನಾಳೆ ತಮಿಳುನಾಡಿನಲ್ಲಿ ಕನ್ನಡದ ಕೆ.ಜಿ.ಎಫ್. ಸಿನಿಮಾ ಬಿಡುಗಡೆಯಾಗುತ್ತಿದ್ದು, ತಮಿಳುನಾಡಲ್ಲಿ ಯಶ್ಗೆ ಬೆಂಬಲವಾಗಿ ನಟ ವಿಶಾಲ್ ನಿಂತಿದ್ದರು. ಕೆ.ಜಿ.ಎಫ್. ಚಿತ್ರದ ಬಿಡುಗಡೆಗೆ ವಿಶಾಲ್ ಅವರೇ ವಿತರಕರನ್ನು ಕೊಡಿಸಿದ್ದರು. ಈ ವಿಚಾರವಾಗಿಯೂ ತಮಿಳು ನಿರ್ಮಾಪಕರು ಕ್ಯಾತೆ ತೆಗೆದಿದ್ದರು. ಕೆ.ಜಿ.ಎಫ್.ಗೆ ಪರ್ಯಾಯವಾಗಿ ‘ಮಾರಿ-2’ ಸೇರಿ ಹಲವು ಸಿನಿಮಾ ರಿಲೀಸ್ ಮಾಡಲು ಇತರೆ ನಿಮಾರ್ಪಕರು ನಿರ್ಧರಿಸಿ ಕೆ.ಜಿ.ಎಫ್.ಗೆ ಥಿಯೇಟರ್ ಸಿಗದಂತೆ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿಯೂ ವಿಶಾಲ್ ಮೇಲೆ ಅಸಮಾಧಾನಗೊಂಡಿದ್ದರು.