ದಿನದ ಸುದ್ದಿ
ನಾಡಿನ ಹಲವು ಕ್ಷೇತ್ರಗಳಿಗೆ ತರಳಬಾಳು ಹಿರಿಯ ಶ್ರೀಗಳ ಕೊಡುಗೆ ಅಪಾರ: ಡಾ. ನಾ ಲೋಕೇಶ ಒಡೆಯರ್
ಸುದ್ದಿದಿನ,ದಾವಣಗೆರೆ : ಹಿರಿಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳುವರು ಕಟ್ಟಿ ಬೆಳಸಿದ ಸಂಸ್ಥೆ ಮತ್ತು ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ಪೂಜ್ಯರು ಇಂದಿಗೂ ಎಂದೆಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದುವಿಶ್ರಾಂತ ಪ್ರಾಚಾರ್ಯ ಡಾ. ನಾ ಲೋಕೇಶ ಒಡೆಯರ್ ಅಭಿಪ್ರಾಯಪಟ್ಟರು.
ಗುರುವಾರ ನಗರದ ಅನುಭವಮಂಟಪ ಶಾಲಾ ಸಂಕೀರ್ಣದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೂಜ್ಯರು ಕುಳಿತ ಸಿಂಹಾಸನ ಹೂವಿನ ಹಾಸಿಗೆಯಾಗದೆ, ಮುಳ್ಳಿನ ಹಾಸಿಗೆಯಾಗಿತ್ತು. ತಮಗೆ ಒದಗಿದ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವನ್ನು ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಮಾದರಿ ಮತ್ತು ಆದರ್ಶ ಮಠವನ್ನಾಗಿ ರೂಪಿಸಿದರು. ಮರುಳಸಿದ್ಧ ಮತ್ತು ಬಸವಾದಿ ಶಿವಶರಣರ ತತ್ತ್ವಗಳಂತೆ ಬಾಳಿದ ಅವರು ತಮ್ಮ ದೂರದೃಷ್ಟಿ ಮತ್ತು ಜಾತ್ಯತೀತ ನಿಲುವಿನಿಂದ ಸರ್ವ ಜನಾಂಗದವರಿಗೂ ಅನುಕರಣೀಯರಾಗಿದ್ದರು.
ಆಡುಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಹಿರಿಯ ಶ್ರೀಗಳು ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯ, ಸಂಶೋಧನಾ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರ ಎಂದು ಡಾ. ನಾ ಲೋಕೇಶ ಒಡೆಯರ್ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ತರಳಬಾಳು ಜಗದ್ಗುರು ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಎಚ್ ಎನ್ ಪ್ರದೀಪ್ ಮಾತನಾಡಿ, ಸ್ವಾತಂತ್ರ್ಯ ಪುರ್ವದಲ್ಲಿಯೇ ಸಾಮಾಜಿಕ ನ್ಯಾಯವನ್ನು ಒದಗಿಸಿದ ಕೀರ್ತಿ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸುಲಭವಾಗಿ ಮತ್ತು ಉಚಿತವಾಗಿ ದೊರಕಲು ನೂರಾರು ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದರು ಎಂದರು.
ತರಳಬಾಳು ಕಲಾ ಸಂಘದ ಇ. ದೇವರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ಪ್ರಾಚಾರ್ಯರಾದ ಶ್ರೀಕುಮಾರ್, ಶಿವಕುಮಾರ ಸುರಕೋಡ್, ಅಧ್ಯಾಪಕ ನಾಗರಾಜ ಸಿರಿಗೆರೆ, ಮಲ್ಲಿಕಾರ್ಜುನಯ್ಯ, ಎಸ್ ಕೆ ಮೋಹನ, ಎಸ್ ಆರ್ ವಿರೇಶ್ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಕು. ಶ್ರೇಯ ರಮಣಿ ವಚನ ಗೀತೆಯನ್ನು ಹಾಡಿದರು.
ಕನ್ನಡ ಉಪನ್ಯಾಸಕ ಬಿ ಆನಂದ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243