ದಿನದ ಸುದ್ದಿ

ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟೀಸ್ ನೀಡುತ್ತಿರುವುದು ಕೇಂದ್ರವಲ್ಲ, ರಾಜ್ಯ ಸರ್ಕಾರ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Published

on

ಸುದ್ದಿದಿನಡೆಸ್ಕ್:ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ನೀಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ದೆಹಲಿಯಲ್ಲಿ ನಿನ್ನೆ ಹೇಳಿದ್ದಾರೆ.

ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರಕ್ಕೂ ಜಿಎಸ್‌ಟಿ ನೋಟಿಸ್‌ಗೂ ಸಂಬಂಧವಿಲ್ಲ ಎನ್ನುವ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸರಿಯಲ್ಲ ಎಂದು ಹೇಳಿದ್ದಾರೆ.

ಇದು ಕೇಂದ್ರದ ನಿರ್ಧಾರವೇ ಆಗಿದ್ದಲ್ಲಿ, ದೇಶದ ಎಲ್ಲ ರಾಜ್ಯಗಳಲ್ಲೂ ನೋಟಿಸ್ ವಿತರಣೆಯಾಗಬೇಕಾಗಿತ್ತು. ಆದರೆ ಬೇರೆ ಯಾವುದೇ ರಾಜ್ಯಗಳಲ್ಲೂ ಇಲ್ಲದ ಸಮಸ್ಯೆ ಕರ್ನಾಟಕದಲ್ಲಿ ಆಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದರು.

ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ಕೇಂದ್ರ ಸರ್ಕಾರದ ಡಿಜಿಟಲ್, ಯುಪಿಐ ವಹಿವಾಟು ಹದಗೆಡಿಸುವ ಹುನ್ನಾರ ರಾಜ್ಯ ಕಾಂಗ್ರೆಸ್ ಸರ್ಕಾರದ್ದಾಗಿದೆ. ಯುಪಿಐ ವಹಿವಾಟು ವಿಶ್ವಕ್ಕೆ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ನೋಟೀಸ್ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version