ಅಸಾಮಾನ್ಯಳು
ವಿಧಿಯೊಡನೆ ಗುದ್ದಾಡಿ ಗೆದ್ದು ಬದುಕುತ್ತಿರುವ ಶಿಕ್ಷಕಿ ಕಲಾವತಿ
ಈ ವಿಧಿಯೇ ಹೀಗೆ…, ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ರೀತಿ ಆಟವಾಡಿಯೇ ತೀರುತ್ತದೆ. ಆದರೆ, ಇವರ ಜೊತೆ ಆಡಿದ್ದು ಮಾತ್ರ ದುರ್ವಿಧಿಯೇ ಸರಿ. ಸುಮಾರು 25 ವರ್ಷದ ಹಿಂದಿನ ಕಥೆ … ಒಮ್ಮೆ ಅತಿಯಾದ ಜ್ವರ ಬಾಧೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ನಡೆಯಿತು. ಆದರೆ ಡಾಕ್ಟರ್ ಹೇಳಿದ ಆ ಸಂಗತಿಯಿಂದ ಬರಸಿಡಿಲು ಬಡಿದಂತಾಯಿತು … ! ಅತಿಯಾದ ಜ್ವರದ ತಾಪದಿಂದಾಗಿ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡು ನಿಸ್ತೇಜವಾಗಿ ಬಿಟ್ಟಿದ್ದವು …!? ಎಲ್ಲರಂತೆ ಲವಲವಿಕೆಯಿಂದ ಓಡಾಡುತ್ತಾ, ಚಟಪಟನೆ ಕೆಲಸ ಕಾರ್ಯಗಳನ್ನು ಮಾಡುತ್ತಾ, ಅರಳು ಹುರಿದಂತೆ ಮಾತನಾಡುತ್ತಾ ತಾನೂ ನಕ್ಕು ನಲಿದು, ಎಲ್ಲರನ್ನೂ ನಗಿಸುತ್ತಾ ಮನೆಗೊಂದು ಕಳಶವೆಂಬಂತಿದ್ದ ಆ ಹೆಣ್ಣುಮಗಳು ಅಂದಿನಿಂದ ಕೂತಲ್ಲಿಯೇ ಕೂರುವಂತಾಯಿತು. ಇಡೀ ಮನೆಯಲ್ಲೀಗ ನಿಶ್ಯಬ್ದವೇ… ನಿಶ್ಯಬ್ದ. ಆಕಾಶವೇ ಕಳಚಿ ಬಿದ್ದಂತಾಗಿ ಕಲಾವತಿಯವರ ಎದೆಯಲ್ಲೂ ನೀರವ ಮೌನ ಆವರಿಸಿತು…!
ಆದರೆ, ವಿದಿಯಾಟಕ್ಕೆ ಸಿಲುಕಿ ಕಾಲುಕಳೆದುಕೊಂಡರೂ ಬದುಕಿನ ಆಯ ತಪ್ಪಲು ಬಿಡಲಿಲ್ಲ, ಕನಸುಗಳನ್ನು ಕಮರಿಸಿಕೊಳ್ಳಲಿಲ್ಲ, ತನ್ನೊಳಗಿನ ಉತ್ಸಾಹವೂ ಕೂಡ ಕುಗ್ಗಲು ಬಿಡಲಿಲ್ಲ ಕಲಾವತಿಯವರು.
ತಾನು ಗಣಿತ ವಿಷಯದಲ್ಲಿ ಬಿ.ಎಸ್ಸಿ.,ಬಿ.ಇಡಿ ವಿದ್ಯಾಭ್ಯಾಸ ಮಾಡಿದ್ದು ವ್ಯರ್ಥವಾಗಬಾರದು. ನಾಲ್ಕಾರು ಮಕ್ಕಳಿಗೆ ವಿದ್ಯಾ ದಾನವನ್ನಾದರೂ ಮಾಡಬೇಕು, ತಾನು ಕಲಿತ ವಿದ್ಯೆ ಹಾಗೂ ತನ್ನ ಬದುಕು ಸಾರ್ಥಕವಾಗಬೇಕು ಎಂಬ ಛಲ ಎದೆಯೊಳಗೆ ಮಡುಗಟ್ಟಿತ್ತು. ಆದಕ್ಕೆ ಪೂರಕ ಎಂಬಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅವರಿಗೆ ಸರ್ಕಾರಿ ನೌಕರಿಯೂ ಅರಸಿ ಬಂತು.
1994ರಲ್ಲಿ ದಾವಣಗೆರೆ ಸಮೀಪದ ಆವರಗೆರೆ ಸರ್ಕಾರಿ ಪ್ರೌಢಶಾಲೆಗೆ ಕರ್ತವ್ಯಕ್ಕೆ ಹಾಜರಾದರು. ಪ್ರತಿದಿನವೂ 3 ಗಾಲಿಚಕ್ರದ ವಾಹನದಲ್ಲಿ ಹೊಸ ಪಯಣ ಶುರುವಾಯಿತು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಅವರು ಬಳಲಿಲ್ಲ. ಅವರ ಮುಖದಲ್ಲಿನ ಕಳೆ ಕುಂದಿಲ್ಲ. ತನ್ನ ಇಷ್ಟ – ಕಷ್ಟಗಳನ್ನೆಲ್ಲಾ ಬದಿಗಿಟ್ಟು, ತನ್ನ ಆಸೆ – ಆಕಾಂಕ್ಷೆಗಳನ್ನೆಲ್ಲಾ ಪಕ್ಕಕ್ಕಿಟ್ಟು, ತನಗೀಗಾಯಿತಲ್ಲ ಎಂಬ ನೋವನ್ನು ಕೂಡ ಮರೆತು ವಿದ್ಯಾರ್ಥಿಗಳ ಏಳ್ಗೆಯನ್ನ ಕಂಡೇ ಸಂತಸ ಪಡುತ್ತಿದ್ದಾರೆ ಕಲಾವತಿ ಮೇಡಂ. ಗಾಲಿ ಕುರ್ಚಿಯಲ್ಲಿಯೇ ಕೂತು ಉತ್ಸಾಹದಿಂದ ಪಾಠ ಹೇಳುವ ಅವರ ಪರಿ…, ಪಾಠದ ಜೊತೆ ಶಿಸ್ತು, ಶಾಂತಿ, ಸಂಯಮ, ನಾಗರೀಕತೆ, ಸುಸಂಸ್ಕøತ ನಡೆ – ನುಡಿಯ ಮಹತ್ವ ಬೋಧಿಸುವ ಅವರ ಕಳಕಳಿ…, ಮಾನವನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನೇ ಬಂದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ನಾವು ಕಲಿತ ಜ್ಞಾನ, ತಿಳಿವಳಿಕೆ, ವಿದ್ಯೆ – ಬುದ್ಧಿಯನ್ನು ನಮ್ಮ ಬದುಕಿನ ಉನ್ನತಿಗೆ ಸದುಪಯೋಗಪಡಿಸಿಕೊಳ್ಳಬೇಕು. ಅಂತೆಯೇ ಪರರ ಬದುಕಿನ ಹಿತಕ್ಕಾಗಿ ನಮ್ಮ ಕೈಲಾದಷ್ಟು ಸಹಾಯ – ಸಹಕಾರದೊಂದಿಗೆ ಅಳಿಲು ಸೇವೆಯನ್ನಾದರೂ ಮಾಡಬೇಕು. ಸರಳತೆ, ಸಜ್ಜನಿಕೆ ರೂಢಿಸಿಕೊಂಡು ಕುಟುಂಬ ಮತ್ತು ಸಮಾಜಸೇವೆಯ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂಬ ಅವರ ಪ್ರೇರಣಾದಾಯಕ ಹಿತನುಡಿಗಳು ಹಾಗೂ ವಿದ್ಯಾರ್ಥಿಗಳನ್ನು ಗುರಿ ಸಾಧನೆಗೆ ಹಚ್ಚುವ ಅವರ ಪ್ರೀತಿಯ ಪರಿಯನ್ನು ಕಂಡಾಗ ನಿಜಕ್ಕೂ ಯಾರಿಗಾದರೂ ಕಲಾವತಿಯವರ ಬಗ್ಗೆ ಹೆಮ್ಮೆಯ ಭಾವ ಮೂಡದೆ ಇರದು.
ಕೆಲವರಿಗೆ ತಮ್ಮ ಜೀವನದಲ್ಲುಂಟಾಗುವ ಒಂದೇ ಒಂದು ಸೋಲನ್ನು ಸಹ ಸಹಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ಸೋಲು – ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕನ್ನು ಮುನ್ನೆಡಿಸಿಕೊಂಡು ಹೋಗುವ ಮನೋಸಾಮರ್ಥ ಇರುವುದಿಲ್ಲ. ಎಲ್ಲಾ ಇದ್ದೂ ಕೂಡ ಒಂದು ಸಣ್ಣ ನೋವಿಗೋ, ಸಣ್ಣ ಸೋಲಿಗೋ ಭಯಪಟ್ಟು, ಪ್ರಯತ್ನಪಟ್ಟರೆ ಚಿಟಿಕೆ ಪ್ರಯತ್ನದಲ್ಲಿ ಸರಿಪಡಿಸಿಕೊಳ್ಳಬಹುದಾದ ಸಮಸ್ಯೆಗೂ ಕೂಡ ಆಕಾಶವೇ ಕಳಚಿಬಿದ್ದಂತೆ ಒದ್ದಾಡುತ್ತಾ, ಎಲ್ಲದಕ್ಕೂ ಆತ್ಮಹತ್ಯೆ ಒಂದೇ ಪರಿಹಾರ ಎಂದು ಯೋಚಿಸುವ ಅದೆಷ್ಟೋ ದುರ್ಬಲ ಮನಸ್ಸುಗಳಿಗೆ – ಸಂಕಷ್ಟದಲ್ಲೂ ಸವಾಲಿನ ಬದುಕು ಸಾಗಿಸುತ್ತಿರುವ ಕಲಾವತಿಯವರ ಜೀವನ ವಿಧಾನವನ್ನು ಒಮ್ಮೆ ತೋರಿಸಬೇಕೆನಿಸುತ್ತದೆ.
ತಮ್ಮ ಕರ್ತವ್ಯ ಮರೆತು ಹರಟೆಯಲ್ಲೇ ಕಾಲ ಕಳೆದು ತಮ್ಮ ವೃತ್ತಿಗೆ ದ್ರೋಹ ಬಗೆಯುತ್ತಿರುವ ಶಿಕ್ಷಕ ಮಹಾಶಯರ ನಡುವೆ … ತಮ್ಮ ತೋರಿಕೆಯ ಸೇವೆಗೂ ಪ್ರಶಸ್ತಿ ಪುರಸ್ಕಾರಕ್ಕಾಗಿ ಅರ್ಜಿ ಹಿಡಿದು ಅವರಿವರ ಮನೆ ಬಾಗಿಲು ತಟ್ಟುವ ಮಹಾಜನರ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ ಕಲಾವತಿ. ಯಾವುದಕ್ಕೂ ವೈಯಕ್ತಿಕ ಪ್ರತಿಫಲ ಬಯಸದೆ ವಿದ್ಯಾರ್ಥಿಗಳ ಉನ್ನತಿಯಲ್ಲೇ ತನ್ನ ಉನ್ನತಿ ಕಂಡುಕೊಳ್ಳುತ್ತಾ ಸಾಗುತ್ತಿರುವ ಅವರು ತಮ್ಮ ಸೇವಾವಧಿಯಲ್ಲಿ ಈವರೆಗೂ ಪ್ರಶಸ್ತಿ – ಪುರಸ್ಕಾರಕ್ಕಾಗಿ ಎಂದಿಗೂ ಅರ್ಜಿ ಸಲ್ಲಿಸಿಲ್ಲ. ತಮ್ಮ ದೈಹಿಕ, ಮಾನಸಿಕ ಸಂಕಟದ ನೋವು-ನಲಿವು, ಬವಣೆಯಲ್ಲೂ ಸ್ವಾಭಿಮಾನ ಹಾಗೂ ಸ್ವಾವಲಂಬಿತನದ ಬದುಕು ಕಟ್ಟಿಕೊಂಡಿರುವ ಅವರ ಮಾದರಿ ಜೀವನ ಶೈಲಿಯನ್ನು ಹಾಗೂ ಅವರ ನಿಸಾರ್ಥ ಸೇವಾ ತುಡಿತವನ್ನು ಹತ್ತಿರದಿಂದ ಬಲ್ಲಂತಹ ಕೆಲ ಆತ್ಮೀಯ ಸ್ನೇಹಿತರೇ ಅವರಿಗೆ ಅತಿ ಒತ್ತಾಯಪೂರ್ವಕವಾಗಿ ಕೆಲ ವೇದಿಕೆಗಳಿಗೆ ಕರೆದು ಸನ್ಮಾನಿಸಿ – ಗೌರವಿಸಿ ಅವರಲ್ಲಿ ಇನ್ನಷ್ಟು ಚೈತನ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಸುಮಾರು 20 ವರ್ಷಗಳಿಂದಲೂ ಆವರಗೆರೆಯಲ್ಲೇ ಖಾಯಂ ನಿವಾಸಿಯಾಗಿರುವ ಕಲಾವತಿಯವರ ತಂದೆ ಅನಂತರಾಜು ದೈವಾಧೀನರಾಗಿದ್ದು, ತಾಯಿ ವಸಂತಮಾಲ ಹಾಗೂ ಸಹೋದರಿ ಅವರೊಂದಿಗಿದ್ದಾರೆ. ಅಣ್ಣ ಸುನಿಲ್‍ರಾಜ ತಮ್ಮ ಕೆಲಸದ ನಿಮಿತ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಕುಟುಂಬದವರ ಅನನ್ಯ ಪ್ರೀತಿ – ಸಹಕಾರ, ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಒಡನಾಟವೇ ನನಗೆ ದಿವ್ಯ ಔಷಧವಾಗಿದೆ ಎನ್ನುತ್ತಾರೆ ಕÀಲಾವತಿ ಮೇಡಂ. ಎಲ್ಲರಂತೆ ಅವರಿಗೂ ಕಾಲುಗಳಿವೆ, ಆದರೆ ಸ್ವಾಧೀನ ಮಾತ್ರ ಕಳೆದುಕೊಂಡಿವೆ. ಹಾಗಾಗಿ ಕಾಲುಗಳಲ್ಲಿ ಮತ್ತೆ ಚೈತನ್ಯ ಮೂಡಬಹುದು ಪ್ರಯತ್ನಿಸಿ ಎಂಬ ಹಲವರ ಸಲಹೆಯಿಂದಾಗಿ 25 ವರ್ಷಗಳಿಂದಲೂ ಕಲಾವತಿಯವರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಫಿಜಿಯೋ ಥೆರಪಿಗಾಗಿ ಈಗಲೂ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ತನ್ನಿಂದ ಪರರಿಗೆ ಕಿಂಚಿತ್ತೂ ತೊಂದರೆಯಾಗಬಾರದೆಂದು ಬಯಸುವ ಕಲಾವತಿಯವರು ಒಂಟಿಯಾಗಿ ಚಿಕಿತ್ಸೆಗೆ ತಾವೊಬ್ಬರೇ ಹೋಗಲಾಗದ ತನ್ನ ಅಸಹಾಯಕ ಪರಿಸ್ಥಿತಿ ಬಗ್ಗೆ ಬಹುವಾಗಿ ನೊಂದುಕೊಂಡಿದ್ದಾರೆ. ತಾನು ಪರರ ಸೇವೆ ಮಾಡಬೇಕು ಹೊರತು ತಾನೇ ಇತರರಿಂದ ಸೇವೆ ಮಾಡಿಸಿಕೊಳ್ಳುವ ಸ್ಥಿತಿಗೆ ಸಿಲುಕಬಾರದು ಎಂದು ಯೋಚಿಸುತ್ತಿದ್ದ ಕಲಾವತಿಯವರ ಬದುಕಿನಲ್ಲಿ ದುರ್ವಿಧಿಯಂತೂ ಆಟವಾಡಿತು. ಆದರೂ ಕಾಲಿನ ಮರು ಚೈತನ್ಯಕ್ಕಾಗಿ ನಿರಂತರ ಪ್ರಯತ್ನಿಸುತ್ತಲೇ ಇರುವ ಅವರ ಪ್ರಯತ್ನಕ್ಕೆ ಫಲ ಸಿಗಲಿ, ಮತ್ತೆ ಅವರು ಲವಲವಿಕೆಯಿಂದ ಓಡಾಡುತ್ತಾ ಹೊಸ ಜೀವನ ಕಂಡುಕೊಳ್ಳುವಂತಾಗಲಿ ಎಂದು ನಾವು ನೀವೆಲ್ಲಾ ಪ್ರಾರ್ಥಿಸೋಣ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401