ದಿನದ ಸುದ್ದಿ
ಶಾಕಿಂಗ್ : ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಉಗ್ರ ಓದಿದ್ದು ಮೈಸೂರಿನಲ್ಲಿ ಅಂತೆ !
ಸುದ್ದಿದಿನ, ಮೈಸೂರು : ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯು (ಸಿಐಎ) 2002ರಲ್ಲಿ ಪಾಕಿಸ್ತಾನದಲ್ಲಿ ಬಂಧಿಸಿರುವ ಅಲ್‌ಖೈದಾ ಸಂಘಟನೆ ಶಂಕಿತ ಉಗ್ರ ಅಬು ಜುಬೇದಾ ಓದಿದ್ದು ಮೈಸೂರಿನಲ್ಲಿ ಎಂಬುದು ಪತ್ತೆಯಾಗಿದೆ.
ಈತನ ಡೈರಿಯನ್ನು ಅಮೆರಿಕ ಅಲ್‌ಜಜೀರಾ.ಕಾಂ (http://america.aljazeera.com/articles/2013/11/5/notebook-one-thesecretdiariesofabuzubaydah.html) ಬಿಡುಗಡೆಗೊಳಿಸಿದೆ. ಮೈಸೂರಿನಲ್ಲಿ ಓದಿದ ದಿನಗಳು, ಸ್ನೇಹಿತರ ಕುರಿತು ಆತ ಡೈರಿಯಲ್ಲಿ ಪ್ರಸ್ತಾಪಿಸಿದ್ದಾನೆ.
ಹೀಗಾಗಿ, ಈತನ ಬಿಡುಗಡೆಗೆ ಆಗ್ರಹಿಸುತ್ತಿರುವ ಅಂತರರಾಷ್ಟ್ರೀಯ ಮಾನವಹಕ್ಕು ಹೋರಾಟಗಾರರ ಗಮನ ಮೈಸೂರಿನತ್ತ ನೆಟ್ಟಿದೆ. ಈ ಕುರಿತು ಅಮೆರಿಕದ ಕಿರುಚಿತ್ರ ನಿರ್ಮಾಪಕ ಏಡ್ರಿಯನ್ ಲೆವಿ ಈಚೆಗೆ ನಗರಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಅಬು ಜುಬೇದಾ ಓದಿದ ಕಾಲೇಜು, ವಾಸ್ತವ್ಯವಿದ್ದ ಮನೆ, ಸ್ನೇಹಿತರ ಕುರಿತು ಹುಡುಕಾಟ ನಡೆಸಿದ್ದರು.
ಏನಿದು ಘಟನೆ?
ಪ್ಯಾಲೆಸ್ಟೀನ್‌ನಿಂದ ಸೌದಿ ಅರೇಬಿಯಕ್ಕೆ ಬಂದು ನೆಲೆ ನಿಂತ ಅಬು ಜುಬೇದಾ 1989ರ ಜೂನ್‌ನಲ್ಲಿ ಮೈಸೂರಿಗೆ ಬಂದು ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ ಅಧ್ಯಯನಕ್ಕೆ ಸೇರುತ್ತಾನೆ. ಆದರೆ, ಅನುತ್ತೀರ್ಣನಾಗುತ್ತಾನೆ. ಈ ಸಮಯದಲ್ಲಿ ಉದಯಗಿರಿಯಲ್ಲಿ ಯೆಮನ್, ಕುವೈತ್‌ನಿಂದ ಬಂದ ಇತರ ಐವರ ಜತೆ ವಾಸಿಸುತ್ತಿರುತ್ತಾನೆ.
1991ರಲ್ಲಿ ಈತ ಜಿಹಾದ್‌ಗಾಗಿ ಆಫ್ಘಾನಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ನಡೆದ ಯುದ್ಧವೊಂದರಲ್ಲಿ ಗಾಯಗೊಂಡು ಪಾಕಿಸ್ತಾನದ ಫೈಸಲಾಬಾದ್‌ಗೆ ಹೋಗಿ ಜಿಹಾದಿಗಳು ತಂಗುವ ವಸತಿಗೃಹದ ವ್ಯವಸ್ಥಾಪಕನಾಗುತ್ತಾನೆ. ಅಮೆರಿಕದಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಕಟ್ಟಡ ಧ್ವಂಸದ ಬಳಿಕ ಅಮೆರಿಕದ ಸಿಐಎ ತಂಡವು 2001ರಲ್ಲಿ ಪಾಕಿಸ್ತಾನದಲ್ಲಿ ಅಲ್‌ಖೈದಾದ ಮೂರನೇ ಪ್ರಮುಖ ಉಗ್ರ ಎಂಬ ಆರೋಪ ಹೊರಿಸಿ ಬಂಧಿಸಿತು.
ಇದುವರೆಗೆ ಈತನ ಮೇಲೆ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಈತ ಅಲ್‌ಖೈದಾ ಜತೆ ಸಂಪರ್ಕ ಇಟ್ಟುಕೊಂಡಿದ್ದ ಎಂಬುದಕ್ಕೆ ಯಾವುದೇ ಪುರಾವೆ ಸಹ ಸಿಕ್ಕಿಲ್ಲ ಎಂದು ಅಲ್ಲಿನ ಹೋರಾಟಗಾರರು ಹೇಳುತ್ತಾರೆ. ಹೀಗಾಗಿ, ಈತನ ಮೇಲೆ ದೋಷಾರೋಪ ಹೊರಿಸಬೇಕು ಇಲ್ಲವೇ ಬಿಡುಗಡೆಗೊಳಿಸಬೇಕು ಎನ್ನುವ ಒಂದು ಚಳವಳಿ ಅಮೆರಿಕದಲ್ಲಿ ಆರಂಭವಾಗಿದೆ. ಇದರ ಒಂದು ಭಾಗವಾಗಿ ಅಬು ಜುಬೇದಾ ಕುರಿತು ಕಿರುಚಿತ್ರ ನಿರ್ಮಿಸಲು ಏಡ್ರಿಯನ್ ಲೆವಿ ಮಾಹಿತಿ ಕಲೆ ಹಾಕಲು ಈಚೆಗೆ ನಗರಕ್ಕೆ ಬಂದಿದ್ದರು.