ದಿನದ ಸುದ್ದಿ
ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಸಮಿತಿ ರಚನೆ
ಸುದ್ದಿದಿನ ಡೆಸ್ಕ್ | ಜನಸಮೂಹದ ಹಿಂಸಾಚಾರದ ಘಟನೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕಾಗಿ ಕಾನೂನು ರಚನೆ ಮಾಡಲು ಕೇಂದ್ರ ಸರ್ಕಾರ ಎರಡು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಗೌಬ್ ಅಧ್ಯಕ್ಷತೆಯಲ್ಲಿ ತಲಾ ಒಂದು ಸಮಿತಿ ರಚನೆಯಾಗಲಿದೆ.
ಸುಳ್ಳು ಸುದ್ದಿ, ವದಂತಿಗಳಿಂದಾಗಿ ಅನೇಕ ಸಾವು, ನೋವುಗಳು ಸಂಭವಿಸಿದ್ದವು. ಈ ಕುರಿತು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿ, ಇಂತಹ ಪ್ರಕರಣಗಳು ಜರುಗದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ಸೂಚಿಸಿದ ಒಂದು ವಾರದ ನಂತರ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಟಿಎನ್ಐಇ ವರದಿ ಮಾಡಿದೆ.
ಪರಿಸ್ಥಿತಿ ನಿಭಾಯಿಸುವಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ರೂಪಿಸುವ ಸಲುವಾಗಿ ಹಾಗೂ ಶಿಫಾರಸುಗಳನ್ನು ಸಿದ್ಧಪಡಿಸುವಂತೆ ಗೃಹ ಸಚಿವಾಲಯದ ಕಾರ್ಯದರ್ಶಿ ಗೌಬಾ ನೇತೃತ್ವದ ಸಮಿತಿಗೆ ತಿಳಿಸಿದೆ. ಈ ಸಮಿತಿಯ ಸದಸ್ಯರಾಗಿ ನ್ಯಾಯಂಗ, ಕಾನೂನು ವ್ಯವಹಾರ, ಶಾಸಕಾಂಗ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗಳ ಕಾರ್ಯದರ್ಶಿಗಳು ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯು ನಾಲ್ಕು ವಾರದೊಳಗೆ ಶಿಫಾರಸುಗಳ ವರದಿಯನ್ನು ಸಲ್ಲಿಸಲಿದೆ.
ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಸಲ್ಲಿಸಿದ ಶಿಫಾರಸುಗಳನ್ನು ಅನುಮೋದನೆ ಮಾಡಲು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಸದಸ್ಯರಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವ ತವಾರ್ ಚಂದ್ ಗೆಹ್ಲೋಟ್ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿ ಒಪ್ಪಿಗೆ ನೀಡಿದ ವರದಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401