ದಿನದ ಸುದ್ದಿ
ಜೀತಪದ್ದತಿ ಗೆ ಬಲಿಯಾಗಿದ್ದ ಕುಟುಂಬವೀಗ ಬಂಧಮುಕ್ತ
ಸುದ್ದಿದಿನ, ರಾಮನಗರ : ಜೀತ ಪದ್ಧತಿಗೆ ಸಿಲುಕಿದ್ದ ಕುಟುಂಬವೊಂದು ಪೊಲೀಸರ ನೇತೃತ್ವದಲ್ಲಿ ಬಂಧಮುಕ್ತವಾಗಿದೆ. 2014ರಿಂದ ಈವರೆಗೂ ಫಾರಂನಿಂದ ಹೊರಬರಲು ಸಾಧ್ಯವಾಗದೇ ಮಾಲಿಕನ ಕಿರುಕುಳ ಅನುಭವಿಸಿಕೊಂಡು ಜೀವ ಉಳಿಸಿಕೊಂಡಿದ್ದ ಕುಟುಂಬವೀಗ ಜೀತ ಪದ್ಧತಿಯಿಂದ ಮುಕ್ತಗೊಂಡು ಸ್ವಗ್ರಾಮಕ್ಕೆ ಹೋಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಲವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಮೂಲದ ಏಳು ಜನರ ಕುಟುಂಬವೊಂದು ಕಳೆದ ನಾಲ್ಕು ವರ್ಷಗಳಿಂದ ಜೀತ ಪದ್ಧತಿ ಸಿಲುಕಿತ್ತು. ಮಾದಪ್ಪ ಮತ್ತು ಪತ್ನಿ ಕೆಂಚಮ್ಮ ಮಕ್ಕಳು 2014ರಲ್ಲಿ ಕನಕಪುರ ಹತ್ತಿರದ ಗ್ರಾಮವೊಂದರ ಫಾರಂಗೆ ಮಧ್ಯವರ್ತಿ ಮೂಲಕ ಸೇರಿಕೊಂಡಿದ್ದರು. ಅಂದಿನಿಂದ ಈವರೆಗೂ ಆ ಕುಟುಂಬ ಊರು ಹಾಗೂ ಮಧ್ಯವರ್ತಿಯನ್ನು ನೋಡಿಯೇ ಇಲ್ಲ.
65,000 ರೂ ಕೊಡುವುದಾಗಿ ಹೇಳಿದ್ದರು. ರಾಮನಗರಕ್ಕೆ ಬಂದಾಗ 20,000 ರೂ. ನೀಡಿದ್ದರು. ಆನಂತರ ತಿಂಗಳಿಗೆ 500ರಿಂದ 1000ರೂ. ನೀಡುತ್ತಿದ್ದಾರೆ ಅಷ್ಟೆ. ಈ ಹಣ ಹನ್ನೊಂದು ಜನರುಳ್ಳ ನಿರ್ವಹಣೆಗೆ ಸಾಕಾಗುವುದಿಲ್ಲ ಎಂದು ಮಾದಪ್ಪ ತಿಳಿಸಿದ್ದಾರೆ ಎಂದು ಟಿಎನ್ಎಂ ವರದಿ ಮಾಡಿದೆ.
ಬೆಳಗ್ಗೆ 4ರಿಂದ ರಾತ್ರಿ 7ರ ವರೆಗೆ ಕೆಲಸ ಮಾಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕೆಲ ದಿನಗಳ ಹಿಂದೆ ಮಗಳ ಗಂಡ ತೀರಿಕೊಂಡರೂ ಗ್ರಾಮಕ್ಕೆ ಹೋಗಿ ಬರಲು ಒಪ್ಪಿಗೆ ನೀಡುತ್ತಿರಲಿಲ್ಲ. ಮತ್ತು ಅಂತ್ಯಕ್ರಿಯೆಗೆ ಹಣವನ್ನೂ ನೀಡುತ್ತಿರಲಿಲ್ಲ. ಕೆಂಚಮ್ಮನ ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಲು ಬಿಡುತ್ತಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಬದುಕುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕುಟುಂಬವೊಂದು ಜೀತ ಪದ್ಧತಿಗೆ ಒಳಪಟ್ಟಿರುವುದರ ಬಗ್ಗೆ ಕಂದಾಯ ಹಾಗೂ ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಬಂದ ದೂರನ್ನು ಆಧರಿಸಿ ಜಿಲ್ಲಾ ಪೊಲೀಸ್ ಇಲಾಖೆ ಕುಟುಂಬವನ್ನು ರಕ್ಷಿಸಿ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟಿದೆ. ಕುಟುಂಬ ಜೀತ ಪದ್ಧತಿಯಿಂದ ಮುಕ್ತವಾಗಿದೆ ಎಂದು ತಹಶೀಲ್ದಾರ್ ಶುಕ್ರವಾರ ಪ್ರಮಾಣ ಪತ್ರ ನೀಡಿದ್ದಾರೆ.
ಕುಟುಂಬವನ್ನು ಜೀತ ಪದ್ಧತಿಗೆ ನೂಕಿದ್ದ ರಾಮನಗರ ಜಿಲ್ಲೆಯ ಮರಳವಾಡ ಗ್ರಾಮದ ಫಾರಂ ಮಾಲಿಕ ಕುಸಪ್ಪ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಆತ ತಲೆಮರೆಸಿಕೊಂಡಿದ್ದಾನೆ.