ದಿನದ ಸುದ್ದಿ
ಅನಿಮೇಷನ್, ಗೇಮಿಂಗ್ ವಲಯದಲ್ಲಿ ಶೀಘ್ರ ಸೂಕ್ತ ಕಾರ್ಯ ನೀತಿ : ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಸುದ್ದಿದಿನ, ಬೆಂಗಳೂರು : ಹೆಚ್ಚಿನ ಬೇಡಿಕೆಯ ಕ್ಷೇತ್ರವಾಗಿರುವ ಅನಿಮೇಷನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್‌ಗೆ ಸಂಬಂಧಿಸಿದ ಹೊಸ ಎವಿಜಿಸಿ ಕಾರ್ಯನೀತಿಯನ್ನು ರೂಪಿಸಲು ಸದ್ಯವೇ ಸಮಿತಿ ರಚಿಸಲಾಗುವುದು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ‘ಜಿಎಎಫ್‌ಎಕ್ಸ್ ಸ್ಪರ್ಧಾ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಡಿಪ್ಲೊಮಾ ಶಿಕ್ಷಣದಲ್ಲಿ ಈಗಾಗಲೇ ಅನಿಮೇಷನ್ ಮತ್ತು ಗೇಮಿಂಗ್ ಕೋರ್ಸ್‌ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಎಂಜಿನಿಯರಿಂಗ್ ಶಿಕ್ಷಣದ ಪಠ್ಯಕ್ರಮಕ್ಕೆ ಕೂಡ ಇಂತಹ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪೂರ್ಣವಾಗಿ ಪರಿಷ್ಕರಿಸಿ, ಹೊಸ ರೂಪ ನೀಡಲಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎವಿಜಿಸಿ ತರಹದ ಅತ್ಯಾಧುನಿಕ ಜ್ಞಾನಧಾರೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ನಾವು ಸಮಯವನ್ನು ವ್ಯರ್ಥ ಮಾಡದೆ, ಉದ್ಯಮದ ಬೇಡಿಕೆಗೆ ತಕ್ಕಂತೆ ಕಲಿಕೆಯನ್ನು ಸಾಧ್ಯವಾಗಿಸಬೇಕು. ಇದರಿಂದ ಅವಕಾಶಗಳ ಲಾಭ ರಾಜ್ಯದ ಯುವಜನರಿಗೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಸಿನಿಮಾ, ಮನೋರಂಜನೆ ಮತ್ತು ಮಾಧ್ಯಮ ಕ್ಷೇತ್ರಗಳು ಅಗಾಧವಾಗಿ ಬೆಳೆಯುತ್ತಿವೆ. ಆನಿಮೇಷನ್, ವಿಷುಯಲ್ ಎಫೆಕ್ಟ್ ವಲಯದಲ್ಲಿ ಪೂರೈಸಲಾಗದಷ್ಟು ಬೇಡಿಕೆ ಇದೆ. ಸದ್ಯದಲ್ಲೇ ಬರಲಿರುವ ಎವಿಜಿಸಿ ಕಾರ್ಯನೀತಿಯು ಈ ಅವಕಾಶಗಳ ಸದುಪಯೋಗಕ್ಕೆ ಒತ್ತು ಕೊಡಲಿದೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಿವರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243