ದಿನದ ಸುದ್ದಿ
ಮದ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ತಂದೆ ಕೊಲೆ ; ಅಪರಾಧಿಗೆ ಜೈಲು ಶಿಕ್ಷೆ
ಸುದ್ದಿದಿನ,ದಾವಣಗೆರೆ: ಮದ್ಯಪಾನ ಮಾಡಲು ಹಣ ಕೊಡದ ಕಾರಣಕ್ಕೆ ತಂದೆ ಕೊಲೆ ಮಾಡಿದ ಅಪರಾಧಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಶಿಕ್ಷೆ ಹಾಗೂ ರೂ 10,000 ದಂಡ ವಿಧಿಸಿದೆ.
ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ನರಸಿಂಹಪ್ಪ (35) ಶಿಕ್ಷೆಗೆ ಗುರಿಯಾದ ಅಪರಾಧಿ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಮದ್ಯಪಾನ ಮಾಡಲು ವೃದ್ಧಾಪ್ಯ ವೇತನದ ಹಣ ಕೊಡುವಂತೆ ಪೀಡಿಸುತ್ತಿದ್ದ. ಹಣ ಕೊಡದ ಕಾರಣಕ್ಕೆ ತಂದೆ ಮಂಜಪ್ಪ ಅವರನ್ನು 2022ರ ಏಪ್ರಿಲ್ 7ರಂದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ.
ಅಂದಿನ ಸಿಪಿಐ ಟಿ.ವಿ. ದೇವರಾಜ್ ಅವರು ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯಾನಂದ ತೀರ್ಪು ಪ್ರಕಟಿಸಿದರು. ಅಪರಾಧಿಯು ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಾದ ಮಂಡಿಸಿದರು.
ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್‌ಪಿ ಕೆ.ಅರುಣ್ ಶ್ಲಾಘಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243