ಲೈಫ್ ಸ್ಟೈಲ್
ಹಬ್ಬಗಳ ಮಾಸಕ್ಕೆ ಮಾನಿನಿಯರ ಬೆನ್ನೇರಿದ ದೇವಾನುದೇವತೆಗಳು..!
ಆಷಾಢದ ಗಾಳಿ ಕಳೆದು ಮುಂಗಾರು ಮಳೆಯ ಹನಿಗಳ ನಡುವೆ ಶ್ರಾವಣ ಸಡಗರ ಮನೆ-ಮನಗಳ ಬಾಗಿಲು ತಟ್ಟುತ್ತಿದೆ. ಶ್ರಾವಣ ಮಾಸಕ್ಕೆ ಮಾಲು-ಮಳಿಗೆಗಳಲ್ಲಿ ಖರೀದಿಯೂ ಜೋರಾಗಿಯೇ ಸಾಗಿದೆ.
ಶ್ರಾವಣ ಮಾಸದ ಲಕ್ಷ್ಮಿ ಪೂಜೆ, ಕೃಷ್ಣನ ಆರಾಧನೆ, ಇದರ ಬೆನ್ನಲೇ ಬರುವ ಭಾದ್ರಪದದ ಮಂಗಳ ಗೌರಿ ವ್ರತ, ಸಂಕಷ್ಟಹರ ಗಣಪನ ಹಬ್ಬ. ಸಾಲುಗಟ್ಟಿ ನಿಂತಿರುವ ಹಬ್ಬಗಳ ಸೀಸನ್ ನಲ್ಲಿ,ಮಹಿಳೆಯರ ಸೀರೆ ಶಾಪಿಂಗ್ ಗೆ ಅಂತ್ಯವೇ ಇಲ್ಲ.
ಈಗ, ಹಬ್ಬಕ್ಕೆ ಜರತಾರಿ ಸೀರೆ ಏನೋ ರೆಡಿ, ಅದಕ್ಕೆ ಒಪ್ಪುವ ರವಿಕೆಯದ್ದೇ ಪಜೀತಿ ,ಎಂದು ಗೊಣಗುವಷ್ಟಿಲ್ಲ. ಈಗಿನ ಫ್ಯಾಷನ್ ಲೋಕದಲ್ಲಿ ರೆಡಿಮೇಡ್ ಸ್ಟಿಚ್ಡ್ ಬ್ಲೌಸ್ ಗಳು ತರಾವರಿ ಬಣ್ಣ-ವಿನ್ಯಾಸದಲ್ಲಿ ದೊರೆಯುತ್ತಿದೆ.
ಬೆನ್ನೇರಿದ ದೇವಾನುದೇವತೆಗಳು
ಸಾಮಾನ್ಯವಾಗಿ ರವಿಕೆಗಳನ್ನ ಮುತ್ತು, ರತ್ನ ಹರಳಿನ ಎಂಬರಾಯ್ಡರೀ ಗಳಿಂದ ಸಿಂಗರಿಸುವುದು; ಕುಚ್ಚು ಮತ್ತು ಹರಳಿನ ಆಭರಣಗಳನ್ನು ಇಟ್ಟು ಹೊಲಿಯುವುದು ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ವಿಭಿನ್ನ ಎಂಬಂತೆ ಮಹಿಳೆಯರ ರವಿಕೆಯ ಬೆನ್ನ ಮೇಲೆ ದೇವಾನುದೇವತೆಗಳೇ ನಲಿದಾಡುತ್ತಿದ್ದಾರೆ.
ಬೆನ್ನ ಮೇಲೆ, ರವಿಕೆಯ ಕೈ ತೋಳುಗಳ ಮೇಲೆ ಲಕ್ಷ್ಮಿ, ವೆಂಕಟೇಶ್ವರ, ಕೃಷ್ಣ, ಗಣಪ, ಶಿವ-ಪಾರ್ವತಿ, ಅಲಮೇಲಮ್ಮ, ಸರಸ್ವತಿ..ಹೀಗೆ ದೇವಾನುದೇವತೆಗಳೆಲ್ಲಾ ದೇವಾಲಯಗಳಿಂದ ಮಹಿಳೆಯರ ರವಿಕಯ ಬೆನ್ನೇರಿದ್ದಾರೆ.
ವಿಶೇಷ ಅಂದರೆ ಹಬ್ಬಕ್ಕೆ ತಕ್ಕಂತೆ ದೇವರ ಎಂಬರಾಯ್ಡರೀ ಡಿಸೈನರ್ ಬ್ಲೌಸ್ ಗಳು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ.
ಲಕ್ಷ್ಮಿಕಾಸಿನ ಕುಪ್ಪಸದಲ್ಲಿ ಕಂಗೊಳಿಸಿರಿ
ಲಕ್ಷ್ಮಿ ಕಾಸಿನ ಒಡವೆಗಳು ಹಿಂದಿನಿಂದಲೂ ಮಹಿಳೆಯರ ಫೇವರಿಟ್ ಆಗಿವೆ. ಈಗ ಇದೇ ಲಕ್ಷ್ಮಿ ಕಾಸನ್ನ ಸೀರೆಯ ರವಿಕೆಗಳ ಮೇಲೆ ಪೋಣಿಸಿ ಹೊಲಿಯಲಾಗುತ್ತಿದೆ. 2018 ರ ಲೇಟೆಸ್ಟ್ ಟ್ರೆಂಡ್ ಕಲೆಕ್ಷನ್ ಆಗಿರುವ ಲಕ್ಷ್ಮಿ ಕಾಸಿನ ಡಿಸೈನರ್ ಬ್ಲೌಸ್ ಈ ಬಾರಿಯ ಶ್ರಾವಣ ಸಂಭ್ರಮದ ಮೆರಗು ಹೆಚ್ಚಿಸಿದೆ. ಕುಪ್ಪಸದ ತೋಳು, ಬೆನ್ನಿನ ಹಿಂಬದಿ, ಕತ್ತು ಸುುತ್ತಲೂ ಈ ಲಕ್ಷ್ಮಿ. ಲಕ್ಷ್ಮಿ ಎಂಬರಾಯ್ಡರೀ ರವಿಕೆಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿವೆ.
ಕೃಷ್ಣಾವತಾರ
ಮುದ್ದು ಕೃಷ್ಣ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಈ ಮುದ್ದು ಬೆಣ್ಣೆ ಕಳ್ಳನಿಗೆ ಮನಸೋಲದ ಜೀವಿಯೇ ಇಲ್ಲ. ಕೃಷ್ಣ ನ ಪ್ರಿಂಟ್ ಇರುವ ಸೀರೆಗಳನ್ನ ನೀವು ನೋಡಿರಬಹುದು., ಆದರೇ ಕೃಷ್ಣ-ರಾಧೆಯ ಎಂಬರಾಯ್ಡರೀ ಬ್ಲೌಸ್ ಗಳು ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್! ರವಿಕೆಯ ಬೆನ್ನು ಮತ್ತು ತೋಳುಗಳಲ್ಲಿ ತುಂಟ ಕೃಷ್ಣನ ಕೃಷ್ಣ ಲೀಲೆ ಜೋರಾಗಿದೆ!
ಗಣಪಮಯ
ಇನ್ನು ಭಾದ್ರಪದದ ಗಣೇಶ ಚತುರ್ಥಿ ಹಾಗೂ ಗೌರಿ ಹಬ್ಬಕ್ಕೆ ಗಣೇಶ-ಗೌರಿಯರ ಎಂಬರಾಯ್ಡರೀ ಬ್ಲೌಸ್ ಗಳು ಮಹಿಳೆಯರನ್ನ ಮಂತ್ರಮುಗ್ಧರಾಗಿಸಿದೆ. ಈ ರೀತಿಯ ಗಣಪನ ಎಂಬರಾಯ್ಡರೀ ರವಿಕೆಗಳನ್ನ ಗೃಹಪ್ರವೇಶ, ವಿವಾಹದಂತಹ ಶುಭ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಹಬ್ಬಕ್ಕೆ ಗಣಪತಿಯನ್ನು ಬೆನ್ನಿಗೇರಿಸಿದ ಸಂತೋಷದಲ್ಲಿದೆ ಮಹಿಳಾಲೋಕ.
ನೋಡೋಕೆ ಬಹಳ ಕಲರ್ಫುಲ್ ಹಾಗೂ ಆಕರ್ಷಕ ವಾಗಿ ಕಾಣುವ ಗಣಪನ ಎಂಬರಾಯ್ಡರೀ ರವಿಕೆಗಳು ಈ ಬಾರಿಯ ಗಣೇಶ ಚತುರ್ಥಿಯ ವಿಶೇಷ.
ನಮೋ ವೆಂಕಟೇಶ
ಇನ್ನು ಸೊನಾಲಿ ಬೇಂದ್ರೆ ಅವರ ವೆಂಕಟೇಶ್ವರನ ಎಂಬರಾಯ್ಡರೀ ರವಿಕೆ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಹೀಗೆ ದೇವಾನುದೇವತೆಗಳು ಮಹಿಳೆಯರ ರವಿಕೆಗಳಲ್ಲಿ ಪ್ರಕಟವಾಗುತ್ತಿದ್ದು ನಾರಿಯರ ಸ್ಯಾರಿ ಕ್ರೇಜ್ ಗೆ ಕನ್ನಡಿ ಹಿಡಿದಂತಿದೆ.
ಹಾಗಾದರೆ ತಡ ಯಾಕೆ? ಹಬ್ಬಕ್ಕೆ ಸೀರೆ ಕೊಳ್ಳುವ ಸಡಗರದಲ್ಲಿರುವ ಮಹಿಳಾಮಣಿಯರೇ.. ನಿಮ್ಮ ಸೀರೆಗೆ ಮ್ಯಾಚಿಂಗ್ ರವಿಕೆಗಳನ್ನ ನಿಮ್ಮ ಇಷ್ಟ ದೇವರನ್ನು ನೆನೆಯಿರಿ. ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಗೊಳಿಸಿಕೊಳ್ಳಿ.